Ind vs Ban: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಎರಡನೇ ಪಂದ್ಯ ಗುರುವಾರ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ಮುಖಾಮುಖಿ ಆಗುತ್ತಿವೆ. ಉಭಯ ತಂಡಗಳು ಗೆಲುವಿನೊಂದಿಗೆ ಶುಭಾರಂಭ ಮಾಡಲು ಬಯಸುತ್ತಿವೆ. ಈ ಪಂದ್ಯಕ್ಕೆ ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ಆತಿಥ್ಯ ವಹಿಸಿದೆ.
ಭಾರತ-ಬಾಂಗಾದೇಶ ತಂಡಗಳು 2017ರಲ್ಲಿ ಒಮ್ಮೆ ಮಾತ್ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಮುಖಾಮುಖಿ ಆಗಿದ್ದವು. ಇದರಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲವು ಸಾಧಿಸಿತ್ತು. ಇದಾದ ಬಳಿಕ ಚಾಂಪಿಯನ್ಸ್ ಟ್ರೋಫಿ ನಡೆಯದೇ ಇದ್ದ ಕಾರಣ ಉಭಯ ತಂಡಗಳಿಗೆ ಈ ಟೂರ್ನಿಯಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ.
ಇದೀಗ 8 ವರ್ಷಗಳ ನಂತರ ಇತ್ತಂಡಗಳು ಚಾಂಪಿಯನ್ಸ್ ಟ್ರೋಫಿಯಲ್ಲಿ ಎದುರುಬದುರಾಗುತ್ತಿವೆ. ಈ ಬಾರಿಯ ಟೂರ್ನಿಯಲ್ಲಿ ಪ್ರತಿ ತಂಡಗಳಿಗೆ ಕೇವಲ ಮೂರು ಪಂದ್ಯಗಳನ್ನು ಮಾತ್ರ ಆಡುವ ಅವಕಾಶ ಇರುವ ಕಾರಣ ಎಲ್ಲಾ ಪಂದ್ಯಗಳು ಮಾಡು ಇಲ್ಲವೇ ಮಡಿಯಂತಾಗಿವೆ.
ಅದರಲ್ಲೂ 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿದ್ದ ಭಾರತ ಇದೀಗ ಮತ್ತೊಮ್ಮೆ ರೋಹಿತ್ ಶರ್ಮಾ ನೇತೃತ್ವದಲ್ಲಿ ಚಾಂಪಿಯನ್ ಆಗಲು ಬಯಸಿದೆ. ಇದಕ್ಕಾಗಿ ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿಯುತ್ತಿದೆ.
ಕನ್ನಡಿಗನಿಗೆ ಮಹತ್ವದ ಹೊಣೆ:ಏತನ್ಮಧ್ಯೆ, ಇಂದಿನ ಪಂದ್ಯಕ್ಕೆ ತಂಡದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ಗೆ ಮಹತ್ವದ ಜವಾಬ್ದಾರಿ ನೀಡಲಾಗುತ್ತಿದೆ. ಬಾಂಗ್ಲಾ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ರಾಹುಲ್ ವಿಕೆಟ್ ಕೀಪರ್ ಆಗಿ ಕಣಕ್ಕಿಳಿಯಲಿದ್ದಾರೆ. ಇದರೊಂದಿಗೆ ಮತ್ತೊಂದು ಜವಾಬ್ದಾರಿಯನ್ನೂ ಅವರ ಹೆಗಲಿಗೆ ನೀಡಲಾಗುತ್ತಿದೆ.