ಕರ್ನಾಟಕ

karnataka

ETV Bharat / sports

ಲೆಜೆಂಡ್ಸ್ ವರ್ಲ್ಡ್ ಚಾಂಪಿಯನ್‌ಶಿಪ್ ಫೈನಲ್‌: ಪಾಕಿಸ್ತಾನ ವಿರುದ್ಧ​ ಭಾರತಕ್ಕೆ ಭರ್ಜರಿ ಜಯ - India Champions Beat Pakistan - INDIA CHAMPIONS BEAT PAKISTAN

India Legends vs Pakistan Legends Final: ಲೆಜೆಂಡ್ಸ್ ವರ್ಲ್ಡ್ ಚಾಂಪಿಯನ್‌ಶಿಪ್-2024ರ ಫೈನಲ್​ ಮುಖಾಮುಖಿಯಲ್ಲಿ ಪಾಕಿಸ್ತಾನ ಚಾಂಪಿಯನ್ಸ್​ ವಿರುದ್ಧ ಭಾರತ ಚಾಂಪಿಯನ್ಸ್​ ತಂಡ ಭರ್ಜರಿ ಜಯ ಸಾಧಿಸಿದೆ.

india-legends-won-the-wcl-2024
ಯುವರಾಜ್​ ಸಿಂಗ್​ (IANS)

By ETV Bharat Karnataka Team

Published : Jul 14, 2024, 7:32 AM IST

ಬರ್ಮಿಂಗ್‌ಹ್ಯಾಮ್‌:ಲೆಜೆಂಡ್ಸ್ವರ್ಲ್ಡ್ ಚಾಂಪಿಯನ್‌ಶಿಪ್-2024ರ ಫೈನಲ್​​ ಪಂದ್ಯದಲ್ಲಿ ಯುವರಾಜ್​ ಸಿಂಗ್​ ನೇತೃತ್ವದ ಭಾರತ ಚಾಂಪಿಯನ್ಸ್ ತಂಡವು ಪಾಕಿಸ್ತಾನ ಚಾಂಪಿಯನ್ಸ್ ಅನ್ನು 5 ವಿಕೆಟ್‌ಗಳಿಂದ ಸೋಲಿಸಿದೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 156 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಭಾರತ ತಂಡ 19.1 ಓವರ್‌ಗಳಲ್ಲಿ 5 ವಿಕೆಟ್‌ಗೆ 159 ರನ್‌ ಗಳಿಸಿ ಜಯ ಸಾಧಿಸಿತು.

157 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ತಂಡ ಉತ್ತಮ ಆರಂಭ ಪಡೆಯಿತು. ರಾಬಿನ್​ ಉತ್ತಪ್ಪ ಮತ್ತು ಅಂಬಟಿ ರಾಯುಡು ನಡುವೆ ಮೊದಲ ವಿಕೆಟ್‌ಗೆ 34 ರನ್‌ಗಳ ಜೊತೆಯಾಟ ಆಡಿದರು. ಬಳಿಕ ಸುರೇಶ್ ರೈನಾ ಕೇವಲ 4 ರನ್ ಗಳಿಸಲಷ್ಟೇ ಶಕ್ತರಾದರು. ಅಮೀರ್ ಯಾಮಿನ್ ಒಂದೇ ಓವರ್​​ನಲ್ಲಿ ಇಬ್ಬರು ಆಟಗಾರರಿಗೆ ಪೆವಿಲಿಯನ್ ಹಾದಿ ತೋರಿಸಿದರು.

ಅಂಬಟಿ ರಾಯುಡು 30 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 50 ರನ್ ಗಳಿಸಿದರು. ಗುರುಕೀರತ್ ಸಿಂಗ್ 33 ಎಸೆತಗಳಲ್ಲಿ 34 ರನ್ ಬಾರಿಸಿ ತಂಡಕ್ಕೆ ನೆರವಾದರು. ಇದಾದ ಬಳಿಕ ಸ್ಫೋಟಕ ಆಟವಾಡಿದ ಯೂಸುಫ್ ಪಠಾಣ್ 16 ಎಸೆತಗಳಲ್ಲಿ 30 ರನ್ ಸಿಡಿಸಿ ಗೆಲುವನ್ನು ಸುಲಭವಾಗಿಸಿದರು. ಯೂಸುಫ್ ಇನ್ನಿಂಗ್ಸ್‌ನಲ್ಲಿ ಮೂರು ಸಿಕ್ಸರ್ ಮತ್ತು ಒಂದು ಬೌಂಡರಿಗಳಿದ್ದವು.

ಕೊನೆಯಲ್ಲಿ, ನಾಯಕ ಯುವರಾಜ್ ಸಿಂಗ್ 22 ಎಸೆತಗಳಲ್ಲಿ 15 ರನ್ ಹಾಗೂ ಇರ್ಫಾನ್ ಪಠಾಣ್​ 5 ರನ್ ಗಳಿಸಿ ಅಜೇಯರಾಗಿ ಉಳಿದರು. ಪಾಕ್ ಪರ ಅಮೀರ್ ಎರಡು, ಅಜ್ಮಲ್, ರಿಯಾಜ್ ಮತ್ತು ಶೋಯೆಬ್ ತಲಾ 1 ವಿಕೆಟ್ ಪಡೆದರು.

ಪಾಕಿಸ್ತಾನ ಇನ್ನಿಂಗ್ಸ್​:ಟಾಸ್​ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 156 ರನ್ ಗಳಿಸಿತು. ಪಾಕ್ ಪರ ಶೋಯೆಬ್ ಮಲಿಕ್ ಗರಿಷ್ಠ 41 ರನ್ ಬಾರಿಸಿದರು. ಭಾರತದ ಪರ ಅನುರೀತ್ ಸಿಂಗ್ ಮೂರು ವಿಕೆಟ್ ಪಡೆದರು. ಪಾಕಿಸ್ತಾನ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಆರಂಭಿಕ ಆಟಗಾರ ಶಾರ್ಜಿಲ್ ಖಾನ್ 10 ಎಸೆತಗಳಲ್ಲಿ 12 ರನ್ ಗಳಿಸಿ, ಎರಡನೇ ಓವರ್‌ನಲ್ಲಿಯೇ ಪೆವಿಲಿಯನ್‌ಗೆ ಮರಳಿದರು. ಮಕ್ಸೂದ್ 12 ಎಸೆತಗಳಲ್ಲಿ 21 ರನ್ ಹಾಗೂ ಕಮ್ರಾನ್ ಅಕ್ಮಲ್ 19 ಎಸೆತಗಳಲ್ಲಿ 24 ರನ್ ಗಳಿಸಿ ಔಟಾದರು. ನಾಯಕ ಯೂನಿಸ್ ಖಾನ್ 11 ಎಸೆತಗಳಲ್ಲಿ ಕೇವಲ ಏಳು ರನ್ ಗಳಿಸಿದರು.

ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ಭಾರತ ತಂಡ 86 ರನ್‌ಗಳಿಂದ ಆಸ್ಟ್ರೇಲಿಯಾವನ್ನು ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ವೆಸ್ಟ್ ಇಂಡೀಸ್ ತಂಡವನ್ನು 20 ರನ್​ಗಳಿಂದ ಸೋಲಿಸಿತ್ತು. ಪಂದ್ಯಾವಳಿಯಲ್ಲಿ ಇದಕ್ಕೂ ಮುನ್ನ ನಡೆದ ಹಣಾಹಣಿಯಲ್ಲಿ ಪಾಕಿಸ್ತಾನವು ಭಾರತವನ್ನು 68 ರನ್‌ಗಳಿಂದ ಮಣಿಸಿತ್ತು. ಭಾರತ ತಂಡ ಈ ಚಾಂಪಿಯನ್‌ಶಿಪ್‌ನಲ್ಲಿ ಮೂರು ಪಂದ್ಯಗಳಲ್ಲಿ ಸೋತಿದ್ದು, ನಾಲ್ಕರಲ್ಲಿ ಜಯಿಸಿತ್ತು. ಮತ್ತೊಂದೆಡೆ, ಪಾಕಿಸ್ತಾನ ತಂಡ 7 ಪಂದ್ಯಗಳಲ್ಲಿ ಐದರಲ್ಲಿ ಗೆಲುವು ಕಂಡಿತ್ತು.

ಓದಿ:ಭಾರತ ತಂಡದ ಶ್ರೀಲಂಕಾ ಪ್ರವಾಸದಲ್ಲಿ ಬದಲಾವಣೆ: ಒಂದು ದಿನ ಸರಣಿ ತಡವಾಗಿ ಆರಂಭ - indias sri lanka tour reschedule

ABOUT THE AUTHOR

...view details