ನ್ಯೂಯಾರ್ಕ್: ಬುಧವಾರ ನಡೆದ ಎ ಗುಂಪಿನ ಪಂದ್ಯದಲ್ಲಿ ಐರ್ಲೆಂಡ್ ವಿರುದ್ದ ಭಾರತ 8 ವಿಕೆಟ್ಗಳ ಗೆಲುವು ಸಾಧಿಸಿ ತನ್ನ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಿದೆ.
ನ್ಯೂಯಾರ್ಕ್ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಐರ್ಲೆಂಡ್ ನೀಡಿದ್ದ 96 ರನ್ಗಳ ಅಲ್ಪಮೊತ್ತದ ಗುರಿಯನ್ನು 12.2 ಓವರ್ಗಳಲ್ಲಿ ತಲುಪಿ ಗೆಲುವಿನ ನಗೆ ಬೀರಿತು. ಭಾರತದ ಪರ ನಾಯಕ ರೋಹಿತ್ ಶರ್ಮಾ 37 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಮೇತ 52 ರನ್ ಸಿಡಿಸುವ ಮೂಲಕ ಅರ್ಧ ಶತಕ ಪೂರೈಸಿದರು, ಬಳಿಕ ಗಾಯಗೊಂಡು ಪೆವಿಲಿಯನ್ ಸೇರಿದರು. ಮತ್ತೊಂದೆಡೆ ರಿಷಭ್ ಪಂತ್ ಅಜೇಯವಾಗಿ 36 ರನ್ಗ ಕಲೆಹಾಕುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಆರಂಭಿಕರಾಗಿ ಕ್ರೀಸ್ಗಿಳಿದಿದ್ದ ಕೊಹ್ಲಿ ಕೇವಲ 1 ರನ್ ಗಳಿಸಿ ಪೆವಲಿಯನ್ ಸೇರಿದರೇ, ಸೂರ್ಯಕುಮಾರ್ ಯಾದವ್ 2 ರನ್ಗಳಿಸಿ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಐರ್ಲೆಂಡ್, 16 ಓವರ್ಗಳಲ್ಲಿ ಕೇವಲ 96 ರನ್ಗಳಿಗೆ ಸರ್ವಪತನ ಕಂಡಿತು. ಭಾರತದ ವೇಗದ ಬೌಲರ್ಗಳ ದಾಳಿಗೆ ಸಿಲುಕಿ ಐರ್ಲೆಂಡ್ ತಂಡದ ಬ್ಯಾಟ್ಸ್ಮನ್ಗಳು ಪೆವಿಲಿಯನ್ ಪರೇಡ್ ಮಾಡಿದರು. ಗರೆಥ್ ಡೆಲಾನಿ (26), ಜೋಶುವಾ ಲಿಟಲ್ (14), ಕರ್ಟಿಸ್ ಕ್ಯಾಂಫರ್ (12) ಮತ್ತು ಲೋರ್ಕನ್ ಟಕರ್ (10) ಮಾತ್ರ ಎರಡು ಅಂಕಿ ಸ್ಕೋರ್ ದಾಟಿದರು. ಭಾರತದ ಪರ ಹಾರ್ದಿಕ್ ಪಾಂಡ್ಯ ಮೂರು ವಿಕೆಟ್ ಪಡೆದರೇ, ಅರ್ಷದೀಪ್ ಸಿಂಗ್ ಮತ್ತು ಜಸ್ಪ್ರೀತ್ ಬುಮ್ರಾ ತಲಾ ಎರಡು ವಿಕೆಟ್ ಪಡೆದರು. ಮೊಹಮ್ಮದ್ ಸಿರಾಜ್ ಮತ್ತು ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಕಬಳಿಸಿದರು.
ರೋಹಿತ್ ದಾಖಲೆ:ನಿನ್ನೆಯ ಪಂದ್ಯದಲ್ಲಿ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20ಯಲ್ಲಿ ನಾಲ್ಕು ಸಾವಿರ ರನ್ ಪೂರೈಸಿದರು. ಅಲ್ಲದೇ, ಅವರು ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಅವರನ್ನು ಹಿಂದಿಕ್ಕಿ ಟಿ-20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟರ್ ಎಂಬ ದಾಖಲೆ ಬರೆದರು.
ಇದನ್ನೂ ಓದಿ:ದ್ರಾವಿಡ್ ಕೋಚ್ ಸ್ಥಾನದಿಂದ ಹೊರ ಹೋಗುವುದನ್ನ ನನ್ನಿಂದ ನೋಡಲು ಸಾಧ್ಯವಿಲ್ಲ: ರೋಹಿತ್ ಶರ್ಮಾ ಭಾವುಕ - T20 World Cup 2024