ಹೈದರಾಬಾದ್:ಐಪಿಎಲ್ ಹವಾದ ಬೆನ್ನಲ್ಲೇ ಟಿ20 ವಿಶ್ವಕಪ್ ಜ್ವರ ಏರಲಿದೆ. ಜೂನ್ 2 ರಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಆಡಿಸುವ ಟೂರ್ನಿ ಆರಂಭವಾಗಲಿದೆ. ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಟೂರ್ನಿಯ ಆತಿಥ್ಯ ವಹಿಸಿದ್ದು, ಒಂದು ತಿಂಗಳು ಕಾಲ ಕ್ರಿಕೆಟ್ ಜಾತ್ರೆ ನಡೆಯಲಿದೆ. ಒಟ್ಟು 55 ಪಂದ್ಯಗಳು ನಡೆಯಲಿವೆ. ವಿಶೇಷವೆಂದರೆ ಈ ಬಾರಿ 20 ತಂಡಗಳು ಕಪ್ಗಾಗಿ ಸೆಣಸಾಡಲಿವೆ.
ಮೊಟ್ಟ ಮೊದಲ ಬಾರಿಗೆ ಅಮೆರಿಕ ಟಿ20 ವಿಶ್ವಕಪ್ ಟೂರ್ನಿಯ ಆತಿಥ್ಯ ವಹಿಸಿಕೊಂಡಿದೆ. ಐಸಿಸಿ ನಡೆಸುತ್ತಿರುವ 9ನೇ ಆವೃತ್ತಿಯ ಚುಟುಕು ಮಾದರಿಯ ವಿಶ್ವಕಪ್ ಇದಾಗಿದೆ. ನಾಲ್ಕು ಹಂತಗಳಲ್ಲಿ ಟೂರ್ನಿಯನ್ನು ನಡೆಸಲಾಗುತ್ತಿದೆ. ಈಗಾಗಲೇ ಅರ್ಹತಾ ಪಂದ್ಯಗಳನ್ನು ನಡೆಸಲಾಗಿದ್ದು, 10 ತಂಡಗಳು ವಿಶ್ವಕಪ್ ಅವಕಾಶ ಗಿಟ್ಟಿಸಿಕೊಂಡಿವೆ. ಕ್ರಿಕೆಟ್ನ ಪವರ್ಹೌಸ್ ರಾಷ್ಟ್ರಗಳಾದ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಶ್ರೀಲಂಕಾ, ನ್ಯೂಜಿಲ್ಯಾಂಡ್, ವೆಸ್ಟ್ ಇಂಡೀಸ್, ಬಾಂಗ್ಲಾದೇಶ, ಆಫ್ಘಾನಿಸ್ತಾನ ಜೊತೆ ಹೊಸ ತಂಡಗಳು ಸೆಣಸಾಟ ನಡೆಸಲಿವೆ. ಟೂರ್ನಿಯ ನೇತೃತ್ವ ವಹಿಸುತ್ತಿರುವ ಅಮೆರಿಕ ನೇರ ಅರ್ಹತೆ ಪಡೆದುಕೊಂಡಿದೆ.
ಇನ್ನು, ಟಿ20 ವಿಶ್ವಕಪ್ನ ಚೊಚ್ಚಲ ಆವೃತ್ತಿಯ ಚಾಂಪಿಯನ್ ಭಾರತ ಜೂನ್ 5 ರಂದು ಐರ್ಲೆಂಡ್ ವಿರುದ್ಧ ನ್ಯೂಯಾರ್ಕ್ನಲ್ಲಿ ಕಣಕ್ಕಿಳಿಯುವ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಇದಾದ ಬಳಿಕ ವಿಶ್ವವೇ ಎದುರು ನೋಡುತ್ತಿರುವ ಭಾರತ v/s ಪಾಕಿಸ್ತಾನ ನಡುವಿನ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್ನಲ್ಲಿ ನಡೆಯಲಿದೆ.
ಟೂರ್ನಿಯ ಮಾದರಿ ಹೀಗಿದೆ;20 ತಂಡಗಳನ್ನು ನಾಲ್ಕು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಲ್ಲಿ ತಲಾ 5 ತಂಡಗಳಿವೆ. ಭಾರತ ಮತ್ತು ಪಾಕಿಸ್ತಾನ ಎ ಗುಂಪಿನಲ್ಲಿ ಸ್ಥಾನ ಪಡೆದಿವೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಬಿ ಗುಂಪಿನಲ್ಲಿವೆ. ಲೀಗ್ ಹಂತದಲ್ಲಿ ಪ್ರತಿ ತಂಡ ನಾಲ್ಕು ಪಂದ್ಯಗಳನ್ನು ಆಡಲಿವೆ. ಗುಂಪಿನಲ್ಲಿ ಮೊದಲೆರಡು ಸ್ಥಾನ ಪಡೆಯುವ ತಂಡಗಳು ಸೂಪರ್ 8 ಹಂತಕ್ಕೆ ತಲುಪಲಿವೆ. ಈ ಹಂತದಲ್ಲಿ ಟಾಪ್ 2 ಸ್ಥಾನ ಗಳಿಸುವ ತಂಡಗಳು ಸೆಮಿಫೈನಲ್ ತಲುಪಲಿವೆ. ಇಲ್ಲಿ ಗೆದ್ದವರು ಫೈನಲ್ನಲ್ಲಿ ಟ್ರೋಫಿಗಾಗಿ ಹೋರಾಡಲಿದ್ದಾರೆ. ಜೂನ್ 26, 27 ರಂದು ಸೆಮೀಸ್ ನಡೆದರೆ, ಜೂನ್ 29 ರಂದು ಫೈನಲ್ ಪಂದ್ಯ ವೆಸ್ಟ್ಇಂಡೀಸ್ನ ಬಾರ್ಬೊಡೋಸ್ನಲ್ಲಿ ನಡೆಯಲಿದೆ.
ಭಾರತ ತಂಡದ ಲೀಗ್ ಪಂದ್ಯಗಳು:
ಜೂನ್ 5 ರಂದು, ಭಾರತ vs ಐರ್ಲೆಂಡ್ (ನ್ಯೂಯಾರ್ಕ್)
ಜೂನ್ 9 ರಂದು, ಭಾರತ vs ಪಾಕಿಸ್ತಾನ (ನ್ಯೂಯಾರ್ಕ್)