ನವದೆಹಲಿ:ಮುಂದಿನ ವರ್ಷ ಪಾಕಿಸ್ತಾನದಲ್ಲಿ ಆಯೋಜಿಸಲು ಉದ್ದೇಶಿಸಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಚಾಂಪಿಯನ್ಸ್ ಟ್ರೋಫಿಗೆ ಸಂಬಂಧಿಸಿದಂತೆ ಅಲ್ಲಿಯ ವ್ಯವಸ್ಥೆಗಳ ಬಗ್ಗೆ ಐಸಿಸಿ ಉನ್ನತ ಮಂಡಳಿಯ ನಿಯೋಗವು ಬಿಗ್ ಅಪ್ಡೇಟ್ವೊಂದನ್ನು ನೀಡಿದೆ.
ಇತ್ತೀಚೆಗೆ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ತಪಾಸಣಾ ನಿಯೋಗವು, ಚಾಂಪಿಯನ್ಸ್ ಟ್ರೋಫಿ ನಡೆಯಲಿರುವ ಲಾಹೋರ್‌ನ ಪ್ರಸಿದ್ಧ ಗಡಾಫಿ ಕ್ರೀಡಾಂಗಣ, ರಾವಲ್ಪಿಂಡಿ ಮೈದಾನ ಮತ್ತು ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣವನ್ನು ಒಳಗೊಂಡೊಂತೆ ಅಲ್ಲಿಯ ಸ್ಥಳಗಳನ್ನು ಪರೀಶಿಲಿಸಿತ್ತು. ಅದರಲ್ಲೂ ಮುಖ್ಯವಾಗಿ ತಪಾಸಣಾ ತಂಡವು ಕ್ರೀಡಾಂಗಣದ ಭದ್ರತಾ ವ್ಯವಸ್ಥೆ, ಮೂಲಸೌಕರ್ಯ ಮತ್ತು ಇತರ ಪ್ರಮುಖ ವ್ಯವಸ್ಥೆಗಳನ್ನು ಪರಿಶೀಲಿಸಿ ತೃಪ್ತಿ ವ್ಯಕ್ತಪಡಿಸಿದೆ. ಅಂದರೆ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿಗಾಗಿ ಆಗಮಿಸುವ ತಂಡಗಳಿಗೆ ಬೇಕಾಗಿರುವ ಮೂಲಭೂತ ಸೌಕರ್ಯಗಳ ಕುರಿತು ಸಕಾರಾತ್ಮಕ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಈ ಸುದ್ದಿ ತಿಳಿಯುತ್ತಿದ್ದಂತೆ ಪಾಕಿಸ್ತಾನ ಮಾಧ್ಯಮಗಳು ಹಾಗೂ ಕ್ರಿಕೆಟ್ ಮಂಡಳಿ ಸಂತಸ ವ್ಯಕ್ತಪಡಿಸಿದೆ. ಇದರೊಂದಿಗೆ ಈ ಮೆಗಾ ಟೂರ್ನಮೆಂಟ್‌ಗಾಗಿ ಟೀಂ ಇಂಡಿಯಾ ಮುಂದಿನ ವರ್ಷ ಪಾಕಿಸ್ತಾನ ಪ್ರವಾಸ ಮಾಡಲಿದೆ ಎಂದು ನೆರೆಯ ದೇಶದ ಮಾಧ್ಯಮಗಳು ಸುದ್ದಿ ಬಿತ್ತರಿಸಿವೆ. ಆದ್ರೆ ಈ ಬಗ್ಗೆ ಬಿಸಿಸಿಐ ಮತ್ತು ಭಾರತ ಸರ್ಕಾರ ಯಾವುದೇ ಅಧಿಕೃತ ಹೇಳಿಕೆಗಳನ್ನು ನೀಡಿಲ್ಲ.