ಧರ್ಮಶಾಲಾ, ಹಿಮಾಚಲಪ್ರದೇಶ: ಯಂಗ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್‌ಗಳ ಸರಣಿಯನ್ನು 4-1 ರಿಂದ ಕೈವಶ ಮಾಡಿಕೊಂಡಿದೆ. ಯುವಕರಿಂದಲೇ ಕೂಡಿದ್ದ ತಂಡ ಬಲಿಷ್ಠ ಇಂಗ್ಲೆಂಡ್ ವಿರುದ್ಧ ಪ್ರಾಬಲ್ಯ ಸಾಧಿಸಿರುವುದು ಗಮನಾರ್ಹ. ಯಶಸ್ವಿ ಜೈಸ್ವಾಲ್, ಸರ್ಫರಾಜ್, ಧ್ರುವ ಮತ್ತು ಗಿಲ್ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲೂ ಇಂಗ್ಲೆಂಡ್ ಬ್ಯಾಟ್ಸ್ಮನ್ಗಳು ತತ್ತರಿಸಿದರೆ, ಟೀಂ ಇಂಡಿಯಾ ಆಟಗಾರರು ಲೀಲಾ ಜಾಲವಾಗಿ ಆಡಿ ಅಮೋಘ ರನ್ ಗಳಿಸಿದರು. ಸರಣಿ ಗೆಲುವಿನ ಬಳಿಕ ಮಾತನಾಡಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬೌಲರ್‌ಗಳ ಆಟವನ್ನೂ ಮುಕ್ತ ಕಂಠದಿಂದ ಶ್ಲಾಘಿಸಿದರು.
“ಈ ಮಟ್ಟದಲ್ಲಿ ಸರಣಿಯನ್ನು ಸಾಧಿಸುವುದು ಸಾಮಾನ್ಯ ವಿಷಯವಲ್ಲ. ಒಂದು ಹಂತದಲ್ಲಿ ನಮ್ಮ ತಂಡದ ಬಗ್ಗೆ ಕೆಲವರು ಮಾಡಿದ ಟೀಕೆಗಳು, ನಮ್ಮ ತಂಡದ ಹುಡುಗರು ಹೆಚ್ಚಿನ ಶ್ರಮ ಹಾಕಲು ಅನುವು ಮಾಡಿಕೊಟ್ಟವು. ಅನನುಭವಿಗಳ ಪಡೆಯನ್ನು ಕಟ್ಟಿಕೊಂಡು ನಾವು ಮೈದಾನ ಪ್ರವೇಶಿಸಿದ್ದೆವು. ಆದರೂ ಅವರು ತೋರಿಸಿದ ಪ್ರದರ್ಶನ ಅದ್ಭುತವಾಗಿದೆ. ಇಂಗ್ಲೆಂಡ್ ತಂಡದ ವಿರುದ್ಧ ನಮ್ಮ ಬಳಗ ಅದ್ಬುತ ಪ್ರದರ್ಶನ ತೋರಿತು‘‘ ಎಂದು ಸಹ ಆಟಗಾರರನ್ನು ಗುಣಗಾನ ಮಾಡಿದರು.
ಎಲ್ಲರೂ ಶತಕಗಳ ಬಗ್ಗೆ ಮಾತನಾಡುತ್ತಾರೆ. ಆದರೆ, ಎದುರಾಳಿಯ 20 ವಿಕೆಟ್‌ಗಳನ್ನು ಕಬಳಿಸುವುದು ಕೂಡ ಮುಖ್ಯವಾಗಿದೆ. ನಮ್ಮ ಬೌಲರ್‌ಗಳು ತಮ್ಮ ಕರ್ತವ್ಯವನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ ಕುಲದೀಪ್ ಯಾದವ್ ಅವರ ಬೌಲಿಂಗ್ ಪ್ರದರ್ಶನ ಸೂಪರ್ ಆಗಿತ್ತು. ಗಾಯದ ನಂತರ ತಂಡಕ್ಕೆ ಬಂದ ಅವರು ಬೌಲಿಂಗ್ ಮಾಡುತ್ತಿರುವ ರೀತಿ ಶ್ಲಾಘನೀಯ ಎಂದರು.