ಹೈದರಾಬಾದ್: ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ನಮನ್ ಓಜಾ ಅವರ ತಂದೆ ವಿನಯ್ ಓಜಾ ಸೇರಿದಂತೆ ನಾಲ್ವರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಒಂದು ದಶಕಕ್ಕೂ ಹೆಚ್ಚು ಕಾಲ ನಡೆದ ಕಾನೂನು ಪ್ರಕ್ರಿಯೆ ಬಳಿಕ ನ್ಯಾಯಾಲಯ ಈ ಆದೇಶ ಮಾಡಿದೆ.
ಈ ಹಿಂದೆ 2013ರಲ್ಲಿ ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ವಿನಯ್ ಓಜಾ, ಅಭಿಷೇಕ್ ರತ್ನಂ, ಸೇರಿದಂತೆ ನಾಲ್ವರು ₹1.25 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು. ಇದೀಗ ಸುಮಾರು 11 ವರ್ಷಗಳ ನಂತರ ಎಲ್ಲಾ ಆರೋಪಿಗಳು ದೋಷಿ ಎಂದು ತೀರ್ಪು ನೀಡಿರುವ ಮುಲ್ತಾಯಿ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ, ವಿನಯ್ ಓಜಾ ಸೇರಿದಂತೆ ಮೂವರಿಗೆ ಜೈಲು ಶಿಕ್ಷೆ ಸಮೇತ ದಂಡ ವಿಧಿಸಿದೆ.
ಹಗರಣದ ಮಾಸ್ಟರ್ ಮೈಂಡ್ ಆಗಿರುವ ಅಭಿಷೇಕ್ ರತ್ನಂಗೆ 10 ವರ್ಷ ಜೈಲು ಸಮೇತ ರೂ. 80 ಲಕ್ಷ ದಂಡ ವಿಧಿಸಿದರೇ, ವಿನಯ್ ಓಜಾಗೆ ₹14 ಲಕ್ಷ ದಂಡ ಮತ್ತು 7 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಮಾಡಿದೆ.
ಏನಿದು ಪ್ರಕರಣ:2013ರಲ್ಲಿ ಮಧ್ಯಪ್ರದೇಶದ ಬೆತುಲ್ ಜಿಲ್ಲೆಯ, ಮುಲ್ತಾಯಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ, ಬ್ಯಾಂಕ್ ಆಫ್ ಮಹಾರಾಷ್ಟ್ರ ಜೌಳಖೇಡ ಶಾಖೆಯಲ್ಲಿ ₹1.23 ಕೋಟಿ ರೂಪಾಯಿ ವಂಚನೆ ನಡೆದಿತ್ತು. ಈ ಬ್ಯಾಂಕ್ನ ವ್ಯವಸ್ಥಾಪಕರಾಗಿದ್ದ ಅಭಿಷೇಕ್ ರತ್ನಂ ಮತ್ತು ಇದೇ ಬ್ಯಾಂಕ್ನಲ್ಲಿ ಸಹಾಯಕ ವಿನಯ್ ಓಜಾ ಸಹಾಯಕ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಇಬ್ಬರೂ ಸೇರಿದ ಅಧಿಕಾರಿಗಳ ಪಾಸ್‌ವರ್ಡ್ ಬಳಸಿ ನಕಲಿ ಖಾತೆಗಳನ್ನು ತೆರೆದು ಸಾಲದ ಹೆಸರಲ್ಲಿ ಕೋಟ್ಯಂತರ ರೂಪಾಯಿ ವಂಚಿಸಿದ್ದರು.