ಹೈದರಾಬಾದ್: ಕ್ಯಾಪ್ಟನ್ ಕೂಲ್ ಎಂದಾಕ್ಷಣ ತಕ್ಷಣಕ್ಕೆ ನೆನೆಪಿಗೆ ಬರುವ ಹೆಸರು ಎಂದರೆ ಅದು ಎಮ್ ಎಸ್ ಧೋನಿ. ತಾಳ್ಮೆ ಮತ್ತು ಶಾಂತಿಗೆ ಹೆಸರುವಾಸಿಯಾಗಿರುವ ಧೋನಿಗೆ ಕ್ರೀಡಾಲೋಕವೇ ಕ್ಯಾಪ್ಟನ್ ಕೂಲ್ ಎಂಬ ಬಿರುದನ್ನು ನೀಡಿದೆ. ಈ ಬಿರುದಿಗೆ ತಕ್ಕಂತೆ ಧೋನಿ ಕೂಡ ಹಲವಾರು ಕಠಿಣ ಸನ್ನಿವೇಶಗಳಲ್ಲೂ ಶಾಂತವಾಗೆ ತಂಡವನ್ನು ಮುನ್ನಡೆಸಿ ಪಂದ್ಯವನ್ನು ಗೆಲ್ಲಿಸಿರುವ ಅದೆಷ್ಟೋ ನಿದರ್ಶನಗಳು ನಮ್ಮ ಮುಂದಿವೆ. ಈ ಸ್ವಭಾವದಿಂದಲೇ ಹೆಚ್ಚಿನ ಕ್ರಿಕೆಟರ್ಗಳು ಅವರನ್ನು ಮೆಚ್ಚಿಕೊಳ್ಳುತ್ತಾರೆ.
ಆದರೆ, ಇತ್ತೀಚೆಗಷ್ಟೇ ಸಿಎಸ್‌ಕೆ ತಂಡದ ಮಾಜಿ ಆಟಗಾರ ಸುಬ್ರಮಣಿಯನ್ ಬದ್ರಿನಾಥ್ ಮಾಹಿ ಬಗ್ಗೆ ಯಾರಿಗೂ ಗೊತ್ತಿಲ್ಲದ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಆದಿನ ಕ್ಯಾಪ್ಟನ್ ಕೂಲ್ ತಾಳ್ಮೆಕಳೆದುಕೊಂಡು ಕೋಪದಿಂದ ವರ್ತಿಸಿದ್ದ ಬಗ್ಗೆ ಮಾತನಾಡಿದ್ದಾರೆ.
ಹೌದು, ಐಪಿಎಲ್‌ನ ಚೊಚ್ಚಲ ಆವೃತ್ತಿಯಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವೆ ಚಿದಂಬರಂ ಸ್ಟೇಡಿಯಂನಲ್ಲಿ ಪಂದ್ಯ ನಡೆದಿತ್ತು. ಇದರಲ್ಲಿ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ತಂಡ 8 ವಿಕೆಟ್ ನಷ್ಟಕ್ಕೆ ಕೇವಲ 126 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಆದರೆ, ಸಿಎಸ್‌ಕೆ ಪರ ಅಲ್ಬಿ ಮಾರ್ಕೆಲ್ ನಾಲ್ಕು ವಿಕೆಟ್ ಕಬಳಿಸಿ ಆರ್ಸಿಬಿಯನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದ್ದರು.
ಆದರೆ, ಈ ಗುರಿ ತಲುಪುವಲ್ಲಿ ಸಿಎಸ್‌ಕೆ ವಿಫಲವಾಗಿತ್ತು. 111 ರನ್ಗಳಿಸಿದ್ದ ವೇಳೆ ತಂಡ 8 ವಿಕೆಟ್ ಕಳೆದುಕೊಂಡಿತ್ತು. ಈ ಸಂದರ್ಭದಲ್ಲಿ ಬ್ಯಾಟಿಂಗ್ಗೆ ಬಂದಿದ್ದ ಧೋನಿ, ಅನಿಲ್ ಕುಂಬ್ಳೆ ಎಸೆತದಲ್ಲಿ ಕೇವಲ ಒಂದು ರನ್ಗಳಿಸಿ ಔಟ್ ಆಗಿ ಪೆವಿಲಿಯನ್ ಸೇರಿದ್ದರು. ತಮ್ಮ ಈ ಪ್ರದರ್ಶನದಿಂದಾಗಿ ಸಿಟ್ಟಾದ ಮಾಹಿ ಮೈದಾನದಲ್ಲಿ ಕೋಪವನ್ನು ಹೊರಹಾಕದೇ ಡ್ರೆಸ್ಸಿಂಗ್ ರೂಮ್ ಒಳಗೆ ಹೋಗುತ್ತಿದ್ದಂತೆ ಅಲ್ಲಿದ್ದ ನೀರಿನ ಬಾಟಲಿಯನ್ನು ಕಾಲಿನಲ್ಲಿ ಜೋರಾಗಿ ಒದ್ದು ಕೋಪ ಹೊರಹಾಕಿದ್ದರು ಎಂದು ತಿಳಿಸಿದ್ದಾರೆ.
"ಈ ಘಟನೆ ದಿನ ನಾನು ಡ್ರೆಸ್ಸಿಂಗ್ ರೂಮ್ನಲ್ಲಿದ್ದೆ, ಆಗ ಮೈದಾನದಿಂದ ಒಳ ಪ್ರವೇಶಿಸಿದ ಧೋನಿ ಜೋರಾಗಿ ಬಾಟಲಿಯನ್ನು ಕಾಲಿನಿಂದ ಒದ್ದಿದ್ದರು. ಅಂದು ಅವರಿಗೆ ಬಂದಿದ್ದ ಸಿಟ್ಟಿನ ತಾಪ ನೋಡಿದ ನಾನು ಮತ್ತು ಉಳಿದ ಕ್ರಿಕೆಟರ್ಗಳು ಅವರನ್ನು ಮಾತನಾಡಿಸುವ ಧೈರ್ಯವನ್ನೂ ಮಾಡಲಿಲ್ಲ. ಅವರಿಗೆ ಮಾತನಾಡಿಸಲು ನಮಗೆ ಹೆದರಿಕೆ ಆಗಿತ್ತು. ಅಲ್ಲದೇ ಆ ದಿನ ಮಾಹಿ ಕೂಡ ಯಾರೊಂದಿಗೆ ಮಾತನಾಡದೇ ಮೌನವಾಗಿದ್ದರು, ಇದರಿಂದಾಗಿ ಅಂದು ನಡೆಯಬೇಕಿದ್ದ ತಂಡದ ಮೀಟಿಂಗ್ ಕೂಡ ಮಾಡಲಾಗಲಿಲ್ಲ" ಎಂದು ಸುಬ್ರಮಣ್ಯಂ ಬದ್ರಿನಾಥ್ ಹೇಳಿದ್ದಾರೆ.
ಇದನ್ನೂ ಓದಿ:92 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್ನಲ್ಲಿ ಐತಿಹಾಸಿಕ ದಾಖಲೆ ಬರೆಯಲು ಸಜ್ಜು: ಒಂದು ಹೆಜ್ಜೆಯಷ್ಟೇ ದೂರದಲ್ಲಿರುವ ಟೀಂ ಇಂಡಿಯಾ! - Team India rare record