ನವದೆಹಲಿ:ಐಪಿಎಲ್ ಇತಿಹಾಸದಲ್ಲೇ ಎರಡು ಬಾರಿ ಅತಿಹೆಚ್ಚು ರನ್ ದಾಖಲಿಸಿ ಅಬ್ಬರಿಸುತ್ತಿರುವ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಪಂದ್ಯ ನಡೆಯುತ್ತಿದೆ. ಭರ್ಜರಿ ಗೆಲುವಿನ ಲಯದಲ್ಲಿರುವ ಹೈದರಾಬಾದ್, ಡೆಲ್ಲಿ ತಂಡವನ್ನು ಕಟ್ಟಿಹಾಕುತ್ತಾ ಎಂಬುದು ಪ್ರಶ್ನೆಯಾಗಿದೆ.
ರಿಷಬ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಸತತ ಎರಡು ಗೆಲುವು ದಾಖಲಿಸಿದ್ದು, ಇದೇ ಲಯವನ್ನು ಮುಂದುವರಿಸಿಕೊಂಡು ಹೋಗುವ ಇರಾದೆಯಲ್ಲಿದೆ. ಆಡಿರುವ 7 ಪಂದ್ಯಗಳಲ್ಲಿ 3 ಗೆಲುವು 4 ಸೋಲು ಕಂಡಿದೆ. ಪ್ಯಾಟ್ ಕಮಿನ್ಸ್ ನೇತೃತ್ವದ ಹೈದರಾಬಾದ್ 6 ರಲ್ಲಿ 4 ಪಂದ್ಯ ಗೆದ್ದು, 2 ರಲ್ಲಿ ಸೋತಿದೆ.
ಡೆಲ್ಲಿಯಲ್ಲಿ ಎರಡು ಬದಲು:ಇನ್ನು ಕಳೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಭರ್ಜರಿ ಆಟವಾಡಿದ್ದ ಡೆಲ್ಲಿ ಇಂದಿನ ಪಂದ್ಯದಲ್ಲಿ ಎರಡು ಬದಲಾವಣೆ ಮಾಡಿದೆ. ಸುಮಿತ್ ಕುಮಾರ್ ಬದಲಿಗೆ ಲಲಿತ್ ಯಾದವ್, ಪಂದ್ಯ ಆರಂಭಕ್ಕೂ ಮುನ್ನ ಕೆಲವೇ ನಿಮಿಷಗಳ ಮುನ್ನ ಬೆನ್ನು ನೋವಿಗೆ ತುತ್ತಾದ ಇಶಾಂತ್ ಶರ್ಮಾ ಅವರ ಬದಲಿಗೆ ಆ್ಯನ್ರಿಚ್ ನೋಕಿಯಾರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಹೈದರಾಬಾದ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.