ವಿಶಾಖಪಟ್ಟಣಂ (ಆಂಧ್ರಪ್ರದೇಶ):ಇಂಡಿಯನ್ ಪ್ರೀಮಿಯರ್ ಲೀಗ್ನ 13ನೇ ಪಂದ್ಯದಲ್ಲಿ ಆಲ್ರೌಂಡರ್ ಪ್ರದರ್ಶನ ತೋರಿದ ಡೆಲ್ಲಿ ಕ್ಯಾಪಿಟಲ್ಸ್ ಚೆನ್ನೈ ಸೂಪರ್ಕಿಂಗ್ಸ್ ವಿರುದ್ದ 20 ರನ್ಗಳಿಂದ ಗೆಲುವು ಸಾಧಿಸಿದೆ. ಭಾನುವಾರ (ನಿನ್ನೆ) ಇಲ್ಲಿಯ ವೈ.ಎಸ್ ರಾಜಶೇಖರ್ ರೆಡ್ಡಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ಗೆದ್ದ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್, ಪೃಥ್ವಿ ಶಾ, ವಾರ್ನರ್, ರಿಷಭ್ ಪಂತ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 191 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತು.
ಆರಂಭದಲ್ಲೇ ಬಿರುಸಿನ ಬ್ಯಾಟಿಂಗ್ ಮಾಡಿದ ವಾರ್ನರ್ ಮತ್ತು ಪೃಥ್ವಿ ಶಾ ಜೋಡಿ 93 ರನ್‌ಗಳ ಜೊತೆಯಾಟವಾಡಿ ಭದ್ರ ಬುನಾದಿ ಹಾಕಿತು. ಈ ವೇಳೆ ಹೊಡಿಬಡಿ ಬ್ಯಾಟಿಂಗ್ನಿಂದ ಅರ್ಧಶತಕ ಪೂರೈಸಿದ್ದ ವಾರ್ನರ್ ಪಥಿರಾಣ ಎಸೆತದಲ್ಲಿ ಕ್ಯಾಚೌಟ್ ಆಗುವ ಮೂಲಕ ಪೆವಿಲಿಯನ್ ಸೇರಿದರು. 35 ಎಸೆತಗಳನ್ನು ಎದುರಿಸಿದ್ದ ಅವರು 3 ಸಿಕ್ಸರ್ ಹಾಗೂ 5 ಬೌಂಡರಿ ಸಹಾಯದ ಮೂಲಕ 52 ರನ್ ಚಚ್ಚಿದರು. ನಂತರ ಕ್ರೀಸ್ಗೆ ಬಂದ ನಾಯಕ ರಿಷಭ್ ಪಂತ್ ಜೊತೆ ಗೂಡಿ ತಮ್ಮ ಇನ್ನಿಂಗ್ಸ್ ಮುಂದುವರೆಸಿದ ಶಾ 43 ರನ್ ಗಳಿಸಿದ್ದ ವೇಳೆ ಜಡೇಜಾ ಎಸೆತದಲ್ಲಿ ವಿಕೆಟ್ ಕೈಚೆಲ್ಲಿದರು.
ಮತ್ತೊಂದೆಡ ಭರ್ಜರಿ ಬ್ಯಾಟಿಂಗ್ ನಡೆಸಿದ ನಾಯಕ ರಿಷಭ್ ಪಂತ್ 32 ಎಸೆತಗಳಲ್ಲಿ 51 ರನ್ ಚಚ್ಚಿ ಅರ್ಧಶತಕ ಪೂರೈಸಿ ಜಡೇಜಾಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಇದು ಅಪಘಾತದ ಬಳಿಕ ಪಂತ್ ಸಿಡಿಸಿದ ಮೊದಲ ಅರ್ಧಶತಕವಾಗಿದೆ. ಉಳಿದಂತೆ ಮಾರ್ಷ್ (18), ಅಕ್ಸರ್ (7), ಅಭಿಷೇಕ್ ಪೊರೆಲ್ (9) ಬ್ಯಾಟಿಂಗ್ ನೆರವಿನಿಂದ ಮೊದಲ ಇನಿಂಗ್ಸ್ನ ಮುಕ್ತಾಯಕ್ಕೆ ಡೆಲ್ಲಿ 191 ರನ್‌ಗಳ ಕಲೆ ಹಾಕಿತು. ಚೆನ್ನೈ ಪರ ವೇಗಿ ಮತಿಶ ಪಥಿರಾನ 3 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ ಮತ್ತು ಮುಸ್ತಾಫಿಜುರ್ ರೆಹಮಾನ್ ತಲಾ 1 ವಿಕೆಟ್ ಉರುಳಿಸಿದರು.
ಇದಕ್ಕೆ ಉತ್ತರವಾಗಿ 20 ಓವರ್‌ಗಳಲ್ಲಿ ಚೆನ್ನೈ ತಂಡ 6 ವಿಕೆಟ್ ಕಳೆದುಕೊಂಡು 171 ರನ್ ಗಳಿಸಲಷ್ಟೇ ಶಕ್ತವಾಯಿತು. ತಂಡದ ಪರ ಅಜಿಂಕ್ಯ ರಹಾನೆ ಅತ್ಯಧಿಕ 45 ರನ್ಗಳಿಸಿದರೆ, ಡ್ಯಾರೆಲ್ ಮಿಚೆಲ್ (34), ದುಬೆ 18 ರನ್‌ಗಳ ಕೊಡುಗೆ ನೀಡಿದರು. ಕೊನೆಯಲ್ಲಿ ತಂಡದ ಗೆಲುವಿಗಾಗಿ ಜಡೇಜಾ (21*) ಮತ್ತು ಧೋನಿ (37*) ಹೊರಾಟ ನಡೆಸಿದರೂ ಗೆಲುವಿನ ದಡ ಸೇರಲು ಸಾಧ್ಯವಾಗಲಿಲ್ಲ. ಸಿಎಸ್ಕೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಈ ಋತುವಿನಲ್ಲಿ ಮೊದಲ ಬಾರಿಗೆ ಬ್ಯಾಟಿಂಗ್ ಮಾಡಿದ್ದು 16 ಎಸೆತದಲ್ಲಿ 4 ಬೌಂಡರಿ ಮತ್ತು 3 ಸಿಕ್ಸ್ರ ಸಿಡಿಸುವ ಮೂಲಕ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು. ಆದರೆ, ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಈ ಋತುವಿನಲ್ಲಿ ಡೆಲ್ಲಿಗೆ ಇದು ಮೊದಲ ಗೆಲುವು ಆದರೇ ಚೆನ್ನೈಗೆ ಇದು ಮೊದಲ ಸೋಲಾಗಿದೆ. ದೆಹಲಿ ಪರ ಮುಖೇಶ್ ಕುಮಾರ್ 3 ವಿಕೆಟ್ ಪಡೆದರೆ ಖಲೀಲ್ ಅಹ್ಮದ್ 2 ಮತ್ತು ಅಕ್ಷರ್ ಪಟೇಲ್ 1 ವಿಕೆಟ್ ಪಡೆದರು.
ಇದನ್ನೂ ಓದಿ:ಗುಜರಾತ್ ಎದುರು ಮಂಕಾದ ಸನ್‌ರೈಸರ್ಸ್: ಗಿಲ್ ಪಡೆಗೆ 7 ವಿಕೆಟ್ ಗೆಲುವು - IPL 2024