ಹೈದರಾಬಾದ್:ಟೀಂ ಇಂಡಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟ್ರೋಫಿ ಗೆದ್ದ ಖುಷಿಯಲ್ಲಿರುವ ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಮುಂದಿನ ತಿಂಗಳು ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿಯಿಂದ ಪ್ರಮುಖ ಆಟಗಾರ ದೂರ ಉಳಿಯಲಿದ್ದಾರೆ ಎಂದು ವರದಿಯಾಗಿದೆ.
ಫೆ.19 ರಿಂದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದೆ. ಈ ಸರಣಿಯಲ್ಲಿ ಭಾರತ ಸೇರಿ ಒಟ್ಟು 8 ತಂಡಗಳು ಭಾಗಿಯಾಗುತ್ತಿವೆ. ಎ ಮತ್ತು ಬಿ ಎಂದು ಎರಡು ವಿಭಾಗಗಳು ಮಾಡಲಾಗಿದ್ದು, ಎ ಗ್ರೂಪ್ನಲ್ಲಿ ಭಾರತ, ಬಾಂಗ್ಲಾದೇಶ, ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ತಂಡಗಳಿದ್ದರೇ, ಬಿ ಗುಂಪಿನಲ್ಲಿ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳಿವೆ. ಪ್ರತಿ ತಂಡಗಳು ಸರಣಿಯಲ್ಲಿ ತಲಾ ಮೂರು ಪಂದ್ಯಗಳನ್ನು ಆಡಲಿವೆ. ಈಗಿನಿಂದಲೇ ಎಲ್ಲಾ ತಂಡಗಳು ಭರ್ಜರಿ ತಯಾರಿ ನಡೆಸಿಕೊಳ್ಳುತ್ತಿವೆ.
ಏತನ್ಮಧ್ಯೆ, ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ಫೆವರೀಟ್ ತಂಡಗಳಲ್ಲಿ ಒಂದಾಗಿರುವ ಆಸ್ಟ್ರೇಲಿಯಾಗೆ ಸರಣಿ ಆರಂಭಕ್ಕೂ ಮುನ್ನವೇ ಭಾರೀ ಸಂಕಷ್ಟ ಎದುರಾಗಿದೆ. ತಂಡದ ನಾಯಕ ಪ್ಯಾಟ್ ಕಮಿನ್ಸ್ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ. ಕಮ್ಮಿನ್ಸ್ ಪಾದದ ಗಾಯದಿಂದ ಬಳಲುತ್ತಿರುವ ಕಾರಣ ಅವರು ಚಾಂಪಿಯನ್ಸ್ ಟ್ರೋಫಿ ಆಡುವುದು ಡೌಟ್ ಎನ್ನಲಾಗುತ್ತಿದೆ.