ನವದೆಹಲಿ: 2025ರ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಎಲ್ಲ ಪಂದ್ಯಗಳನ್ನು ತನ್ನ ದೇಶದಲ್ಲಿಯೇ ಆಯೋಜಿಸುವುದಾಗಿ ದೃಢ ನಿಲುವಿಗೆ ಅಂಟಿಕೊಂಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿಯನ್ನು ಆಯೋಜಿಸುವ ಪ್ರಸ್ತಾವನೆಗಳನ್ನು ತಳ್ಳಿ ಹಾಕಿದೆ.
ಒಂದು ವೇಳೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲು ಪಾಕಿಸ್ತಾನಕ್ಕೆ ಬರಲು ಭಾರತ ತಂಡ ಒಪ್ಪದಿದ್ದರೆ, ಭಾರತ, ಶ್ರೀಲಂಕಾ ಮತ್ತು ಪಾಕಿಸ್ತಾನಗಳ ಸಹ-ಪ್ರಾಯೋಜಕತ್ವದಲ್ಲಿ 2026ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯಾವಳಿಯಿಂದ ಹಿಂದೆ ಸರಿಯುವುದಾಗಿ ಪಾಕಿಸ್ತಾನ ಬೆದರಿಕೆ ಹಾಕುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನದ ಮಾಧ್ಯಮ ಸಂಸ್ಥೆ ಜಿಯೊ ನ್ಯೂಸ್ ಪ್ರಕಾರ, ಚಾಂಪಿಯನ್ಸ್ ಟ್ರೋಫಿಯ ಎಲ್ಲ ಪಂದ್ಯಗಳನ್ನು ತನ್ನ ನೆಲದಲ್ಲಿಯೇ ನಡೆಸಲು ಪಾಕಿಸ್ತಾನ ಹಠಮಾರಿ ನಿಲುವು ತಳೆದಿದ್ದು, ಜುಲೈ 19 ರಿಂದ 22ರವರೆಗೆ ಕೊಲಂಬೊದಲ್ಲಿ ನಡೆಯಲಿರುವ ಐಸಿಸಿಯ ವಾರ್ಷಿಕ ಸಭೆಯಲ್ಲಿ ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿ ಆಯೋಜಿಸುವುದನ್ನು ಸ್ಪಷ್ಟವಾಗಿ ವಿರೋಧಿಸಲಿದೆ.
ಮುಂದಿನ ವರ್ಷ ಫೆಬ್ರವರಿ ಮತ್ತು ಮಾರ್ಚ್ ನಡುವೆ ನಡೆಯಲಿರುವ ಪ್ರತಿಷ್ಠಿತ ಪಂದ್ಯಾವಳಿಗಾಗಿ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಿಂಜರಿಯುತ್ತಿದೆ ಎಂಬ ಭಾರತೀಯ ಮಾಧ್ಯಮಗಳ ವರದಿಗಳಿಗೆ ಪ್ರತಿಕ್ರಿಯೆಯಾಗಿ ಪಿಸಿಬಿ ಈ ಅಚಲ ನಿಲುವನ್ನು ತಳೆದಿದೆ. ಭಾರತ ಮತ್ತು ಪಾಕಿಸ್ತಾನಗಳ ಮಧ್ಯದ ತ್ವೇಷಮಯ ಸಂಬಂಧಗಳಿಂದಾಗಿ 2008ರ ಏಷ್ಯಾಕಪ್ ಬಳಿಕ ಭಾರತ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡಿಲ್ಲ.