ಕರ್ನಾಟಕ

karnataka

ವಿಶ್ವವ್ಯಾಪಿಯಾಗಿರುವ ಅಮೆರಿಕದ ಡಾಲರ್​ಗೆ ಬೇಕಿದೆ ಪೈಪೋಟಿ ನೀಡುವ ಇನ್ನೊಂದು ಕರೆನ್ಸಿ! - US dollar currency

By ETV Bharat Karnataka Team

Published : Jul 20, 2024, 10:47 PM IST

Updated : Jul 20, 2024, 10:52 PM IST

ಅಮೆರಿಕನ್​ ಡಾಲರ್​ ಕರೆನ್ಸಿಯು ವಿಶ್ವವ್ಯಾಪಿಯಾಗಿದೆ. ಅಂತಾರಾಷ್ಟ್ರೀಯ ವ್ಯಾಪಾರ, ವ್ಯವಹಾರಗಳಲ್ಲಿ ಇದರ ಬಳಕೆ ನಿರ್ಣಾಯಕವಾಗಿದೆ. ಇದಕ್ಕೆ ಪೈಪೋಟಿ ನೀಡುವ ಇನ್ನೊಂದು ಕರೆನ್ಸಿ ಬೆಳೆಯುವುದು ಅನಿವಾರ್ಯವಾಗಿದೆ.

ಅಮೆರಿಕದ ಡಾಲರ್​ಗೆ ಬೇಕಿದೆ ಪೈಪೋಟಿ ನೀಡುವ ಕರೆನ್ಸಿ
ಅಮೆರಿಕದ ಡಾಲರ್​ಗೆ ಬೇಕಿದೆ ಪೈಪೋಟಿ ನೀಡುವ ಕರೆನ್ಸಿ (ETV Bharat)

ಹೈದರಾಬಾದ್:ಅಮೆರಿಕ ವಿಶ್ವದ ಅತ್ಯಂತ ಬಲಿಷ್ಠ ಬಂಡವಾಳಶಾಹಿ ರಾಷ್ಟ್ರ. ಇಲ್ಲಿ ಮುಕ್ತ ಮಾರುಕಟ್ಟೆಗಳಿವೆ. ಹೀಗಾಗಿ ಆರ್ಥಿಕ ಪ್ರಗತಿ ಹೆಚ್ಚಿನ ಮಟ್ಟದಲ್ಲಿದೆ. ಈ ಮಾರುಕಟ್ಟೆಗಳ ಮೇಲೆ ಸರ್ಕಾರದ ಹಿಡಿತವಿದ್ದರೂ, ಭಾರತದಲ್ಲಿದ್ದಂತೆ, ಅಮೆರಿಕದಲ್ಲಿ ಅಂಚೆ ಕಚೇರಿಯನ್ನು ಹೊರತುಪಡಿಸಿ ಯಾವುದೇ ಸಾರ್ವಜನಿಕ ವಲಯದ ಉದ್ಯಮಗಳಿಲ್ಲ. ತಂತ್ರಜ್ಞಾನ, ಆರೋಗ್ಯ, ಕೃಷಿ, ಗಣಿಗಾರಿಕೆ, ಪರಿಶೋಧನೆ, ಉತ್ಪಾದನೆ, ಸಂಸ್ಕರಣೆ, ವಿದ್ಯುತ್ ಉತ್ಪಾದನೆ, ಅಥವಾ ಸೇವೆಗಳು ಸೇರಿದಂತೆ ಪ್ರತಿಯೊಂದು ವಲಯದಲ್ಲಿ ಶೂನ್ಯ ಸರ್ಕಾರಿ ಹೂಡಿಕೆಯೊಂದಿಗೆ ಎಲ್ಲಾ ಕಂಪನಿಗಳು ಖಾಸಗಿ ಒಡೆತನದಲ್ಲಿದೆ.

ಬಂಡವಾಳಶಾಹಿಯಲ್ಲಿನ ನಂಬಿಕೆಯಿಂದಾಗಿ ಪ್ರಪಂಚದ ಅತ್ಯಂತ ಶ್ರೀಮಂತ ಆರ್ಥಿಕತೆಯಾಗಿ ಬೆಳೆದಿದೆ. ಇದರಿಂದಾಗಿ ಅದು ಚೀನಾ, ಜಪಾನ್, ಜರ್ಮನಿ, ಭಾರತ, ಇಂಗ್ಲೆಂಡ್​ಮ ಫ್ರಾನ್ಸ್, ರಷ್ಯಾ, ಕೆನಡಾ ಮತ್ತು ಇಟಲಿಗಳಿಗಿಂತ ಜಿಡಿಪಿಯಲ್ಲಿ ಮುಂದಿದೆ. ಜೊತೆಗೆ ಅದರ ಕರೆನ್ಸಿಯಾದ ಡಾಲರ್​ ಕೂಡ ವಿಶ್ವಮಾನ್ಯವಾಗಿ ಬೆಳೆದಿದೆ.

ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಡಾಲರ್​ ಮಹತ್ವ:ಎರಡನೇ ವಿಶ್ವ ಸಮರದ ಅಂತ್ಯದ ನಂತರ ಅಮೆರಿಕನ್​​ ಡಾಲರ್ ಅಂತಾರಾಷ್ಟ್ರೀಯ ವ್ಯಾಪಾರಕ್ಕಾಗಿ ವಿಶ್ವದ ಮೊದಲ ಆಯ್ಕೆಯ ಕರೆನ್ಸಿಯಾಗಿದೆ. ಚಿನ್ನ, ಬೆಳ್ಳಿ, ಕಚ್ಚಾ ತೈಲ ಸೇರಿದಂತೆ ವಿಶ್ವದ ಹಲವು ಅಗತ್ಯ ವಸ್ತುಗಳ ವ್ಯಾಪಾರವನ್ನು ಡಾಲರ್‌ಗಳಲ್ಲಿ ನಡೆಸಲಾಗುತ್ತದೆ. ಅಂತಾರಾಷ್ಟ್ರೀಯ ವ್ಯಾಪಾರದ ಅರ್ಧದಷ್ಟು ಮೊತ್ತವು ಡಾಲರ್‌ಗಳಲ್ಲಿಯೇ ವರ್ಗಾವಣೆಯಾಗುತ್ತದೆ. ಅಂತಾರಾಷ್ಟ್ರೀಯ ಸಾಲಗಳಲ್ಲಿ ಅರ್ಧದಷ್ಟು ಅಮೆರಿಕನ್ ಡಾಲರ್​ನಲ್ಲಿಯೇ ಇದೆ.

ಡಾಲರ್ ಪ್ರಾಬಲ್ಯದಿಂದಾಗಿ ಈ ಕರೆನ್ಸಿಯನ್ನು 11 ದೇಶಗಳು ತಮ್ಮ ಅಧಿಕೃತ ಕರೆನ್ಸಿಯನ್ನಾಗಿ ಮಾಡಿಕೊಂಡಿವೆ. ಇದಲ್ಲದೇ, 65 ಕರೆನ್ಸಿಗಳಿಗೆ ಇದು ಮುಖ್ಯಸ್ಥ ಎಂಬಂತಾಗಿದೆ. ಈ ಡಾಲರ್ ಎಲ್ಲಾ ಜಾಗತಿಕ ಕರೆನ್ಸಿಗಳಲ್ಲಿ ಸುಮಾರು ಶೇಕಡಾ 58 ರಷ್ಟು ವ್ಯಾಪ್ತಿಯನ್ನು ಹರಡಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ನಂತಹ ಕೇಂದ್ರೀಯ ಬ್ಯಾಂಕುಗಳು ಕೂಡ ತಮ್ಮ ವಿದೇಶಿ ವಿನಿಮಯಗಳನ್ನು ಡಾಲರ್‌ಗಳಲ್ಲಿಯೇ ನಡೆಸಬೇಕಾಗಿದೆ.

'ಜಾಗತಿಕ ಏಕಸ್ವಾಮ್ಯ':ಡಾಲರ್ ಕರೆನ್ಸಿಯು ಜಾಗತಿಕವಾಗಿ ಏಕಸ್ವಾಮ್ಯವಾಗಿದೆ. ಯೂರೋ, ಯೆನ್, ಯುವಾನ್, ಪೌಂಡ್ ಕೂಡ ಅಷ್ಟೇ ಬಲಾಢ್ಯವಾಗಿದ್ದರೂ, ಎಲ್ಲ ಕರೆನ್ಸಿಗಳ ರಾಜನಾಗಿ ಡಾಲರ್ ಕರೆನ್ಸಿಯು ಗುರುತಿಸಿಕೊಂಡಿದೆ. ಇದು ಸಾರ್ವಕಾಲಿಕ ಸತ್ಯವಾಗಿದೆ.

ಏಕಸ್ವಾಮ್ಯವನ್ನು ಯಾರೂ ಇಷ್ಟಪಡುವುದಿಲ್ಲವಾದರೂ, ಅನಿವಾರ್ಯವಾಗಿದೆ. ಉದಾಹರಣೆಗೆ ರೈಲ್ವೆ ಪ್ರಯಾಣವು ಕೆಲವರಿಗೆ ಇಷ್ಟವಾಗದಿದ್ದರೆ, ಅದರ ಮೇಲೆ ದೂರಲು ಸಾಧ್ಯವಿಲ್ಲ. ಕಾರಣ ಅದರ ವ್ಯಾಪ್ತಿ. ಇನ್ನೊಬ್ಬರಿಗೆ ವಿಮಾನ ಅಥವಾ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುವುದು ಅಸಾಧ್ಯವಾದರೆ, ಅದರ ಮೇಲಿನ ದೂರು ನಗಣ್ಯವಾಗುತ್ತದೆ. ಬೇಡವಾದರೂ, ಬೇಕಾದರೂ ಅದನ್ನು ನಾವು ಸ್ವೀಕರಿಸಲೇಬೇಕು.

ಕಳೆದ ಇಪ್ಪತ್ತು ವರ್ಷಗಳಲ್ಲಿ ಡಾಲರ್ ಪ್ರಾಬಲ್ಯವು ಭಾರತ ಸೇರಿದಂತೆ ಹಲವು ದೇಶಗಳ ಕರೆನ್ಸಿಗಳ ಮೇಲೆ ಗಮನಾರ್ಹ ಪ್ರಭಾವ ಬೀರಿದೆ. ಅಮೆರಿಕ ಸರ್ಕಾರವು ಡಾಲರ್ ಮೇಲೆ ತನ್ನ ಅಧಿಕಾರವನ್ನು ಬಳಸಿ ಇತರ ದೇಶಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಬಯಸುತ್ತದೆ. ತನ್ನ ಮಾತಿನಂತೆ ನಡೆದುಕೊಳ್ಳದಿದ್ದಲ್ಲಿ ಅಂತಹ ರಾಷ್ಟ್ರಗಳ ಮೇಲೆ ಡಾಲರ್​ ಎಂಬ ಅಸ್ತ್ರದಿಂದ ಆರ್ಥಿಕ ದಿಗ್ಬಂಧನ ಹೇರಲು ಮುಂದಾಗುತ್ತದೆ.

ವಿಶ್ವಸಂಸ್ಥೆಯ ಚಾರ್ಟರ್ ಪ್ರಕಾರ, ಎಲ್ಲಾ ರಾಷ್ಟ್ರಗಳು ಸಮಾನ ಎಂದು ಸ್ಪಷ್ಟವಾಗಿ ಸೂಚಿಸಿದಾಗ್ಯೂ ಅಮೆರಿಕ ವಿಶ್ವದ ಮಹಾಶಕ್ತಿಯಾಗಿ, ತನ್ನ ವಿದೇಶಿ ನೀತಿಗಳನ್ನು ವಿಸ್ತರಿಸಲು ಡಾಲರ್​ ಆರ್ಥಿಕ ಅಸ್ತ್ರಗಳನ್ನು ಬಳಸುತ್ತದೆ.

ಡಾಲರ್​ ಎಂಬ ಬಲವಾದ ಅಸ್ತ್ರ:ಅಮೆರಿಕವು ಡಾಲರ್​ ಕರೆನ್ಸಿಯನ್ನು ದೊಡ್ಡ ಅಸ್ತ್ರವನ್ನಾಗಿ ಬಳಸುತ್ತಿದೆ. ಪ್ರಪಂಚದ ಎಲ್ಲಾ ವಾಣಿಜ್ಯ ವ್ಯವಹಾರ ಅಮೆರಿಕದ ಮೂಗಿನ ನೇರಕ್ಕೆ ನಡೆಯುತ್ತವೆ. ಸಿಟಿಬ್ಯಾಂಕ್, ಡಾಯ್ಚ ಬ್ಯಾಂಕ್, HSBC ಯಂತಹ ವಿಶ್ವದ ದೊಡ್ಡ ಬ್ಯಾಂಕ್‌ಗಳು ಮೂರನೇ ವ್ಯಕ್ತಿಯ ಹಣಕಾಸು ಸಂಸ್ಥೆಗಳಾಗಿ ಕಾರ್ಯನಿರ್ವಹಿಸುತ್ತವೆ. ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್‌ನೊಂದಿಗೆ ಇವು ವ್ಯವಹರಿಸುತ್ತವೆ. ಅಂತಾರಾಷ್ಟ್ರೀಯ ವಾಣಿಜ್ಯ ವಹಿವಾಟಿನಲ್ಲಿ ಮಧ್ಯವರ್ತಿಯಂತೆ ಕಾರ್ಯನಿರ್ವಹಿಸುತ್ತವೆ.

ನಿಯಂತ್ರಣ:ಡಾಲರ್​ ಕರೆನ್ಸಿಯು ವಿದೇಶಿ ಆಸ್ತಿ ನಿಯಂತ್ರಣಗಳ ಕಚೇರಿಗೆ (OFAC) ಅಗಾಧ ಶಕ್ತಿಯನ್ನು ನೀಡುತ್ತದೆ. ತನ್ನ ವಿರುದ್ಧ ತಿರುಗಿಬಿದ್ದ ರಷ್ಯಾ ಅಥವಾ ಟರ್ಕಿಯ ಮೇಲೆ ಆರ್ಥಿಕ ದಿಗ್ಬಂಧನ ಹೇರಿ, OFAC ವಹಿವಾಟನ್ನು ಸಂಪೂರ್ಣವಾಗಿ ನಿರ್ಬಂಧಿಸುತ್ತಿದೆ.

ಅಮೆರಿಕದ ನಡವಳಿಕೆಯಿಂದಾಗಿ ಜಾಗತಿಕ ಮಟ್ಟದಲ್ಲಿ ವೆನೆಜುವೆಲಾ, ಇರಾನ್, ರಷ್ಯಾ, ಉತ್ತರ ಕೊರಿಯಾ, ಇರಾಕ್, ಸಿರಿಯಾಗಳು ಒಂದಲ್ಲ ಒಂದು ರೀತಿಯಲ್ಲಿ ದಿಗ್ಬಂಧನಕ್ಕೆ ಒಳಪಟ್ಟಿವೆ. ಭೌಗೋಳಿಕವಾಗಿ ಬಲಿಷ್ಠವಾಗಿರುವ ದೇಶಗಳಾದ ಭಾರತ, ಬ್ರೆಜಿಲ್, ದಕ್ಷಿಣ ಆಫ್ರಿಕಾ ಮತ್ತು ಚೀನಾವು ಸ್ವಾಯತ್ತವಾಗಿ ವ್ಯವಹಾರ ನಡೆಸಿದರೆ, ಅಮೆರಿಕದ ಕೋಪಕ್ಕೆ ತುತ್ತಾಗಬೇಕಾಗುತ್ತದೆ.

ಕಳೆದ 20 ವರ್ಷಗಳಿಂದ ಸಾಧ್ಯವಾದಾಗಲೆಲ್ಲಾ ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಡಾಲರ್ ಮೀರಿ ವ್ಯವಹಾರ ನಡೆಸಲು ಹಲವು ದೇಶಗಳು ಪ್ರಯತ್ನಿಸುತ್ತಿವೆ. ಹೀಗಾಗಿ ಸೆಂಟ್ರಲ್ ಬ್ಯಾಂಕ್‌ಗಳ ವಿದೇಶಿ ವಿನಿಮಯದ ಪಾಲು 2020 ರಲ್ಲಿ ಸುಮಾರು ಶೇಕಡಾ 72 ರಷ್ಟಿದ್ದರೆ, 2024 ರಲ್ಲಿ ಅದು ಶೇಕಡಾ 58 ಕ್ಕೆ ಕುಸಿದಿದೆ.

ಭಾರತದ ರೂಪಾಯಿಯ ಜಾಗತಿಕ ಹೆಜ್ಜೆಗುರುತು:ಭಾರತವು ಇತ್ತೀಚೆಗೆ ವಹಿವಾಟಿನಲ್ಲಿ ಡಾಲರ್​ ಬದಲಿಗೆ ರೂಪಾಯಿಯಲ್ಲಿ ವ್ಯಾಪಾರ ನಡೆಸಲು ಮುಂದಾಗಿದೆ. ಮೊದಲು ಥಾಯ್ಲಾಂಡ್​​ನಲ್ಲಿ ಭಾರತೀಯ ರೂಪಾಯಿಯನ್ನು ಸ್ವೀಕರಿಸಲಾಯಿತು. ಭಾರತೀಯ ಸಂದರ್ಶಕರು ತಮ್ಮ ರೂಪಾಯಿಗಳನ್ನು ಡಾಲರ್‌ಗೆ ಪರಿವರ್ತಿಸಬೇಕಾಗಿಲ್ಲ. ಥೈಲ್ಯಾಂಡ್‌ನಲ್ಲಿ ಅದನ್ನು ಬಹ್ತ್‌ಗೆ ವರ್ಗ ಮಾಡಬೇಕಿಲ್ಲ. ಅದರಂತೆ ಸಿಂಗಾಪುರ್, ಮಲೇಷ್ಯಾ, ಇಂಡೋನೇಷಿಯಾ, ಹಾಂಕಾಂಗ್, ಶ್ರೀಲಂಕಾ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಕುವೈತ್, ಓಮನ್, ಕತಾರ್ ಮತ್ತು ಇಂಗ್ಲೆಂಡ್​​ನಲ್ಲಿ ಸಣ್ಣ ಮೌಲ್ಯದ ವಹಿವಾಟುಗಳಿಗೆ ಭಾರತೀಯ ರೂಪಾಯಿಯನ್ನು ಬಳಸಲಾಗುತ್ತಿದೆ.

ಕಳೆದ ವರ್ಷ, ರಷ್ಯಾ ಮತ್ತು ಇರಾನ್ ದೇಶಗಳೂ ರೂಬಲ್ಸ್ ಮತ್ತು ರಿಯಾಲ್​ನಲ್ಲಿ ಪರಸ್ಪರ ವ್ಯಾಪಾರ ಮಾಡುವ ಒಪ್ಪಂದವನ್ನು ಘೋಷಿಸಿದವು. ಜೂನ್‌ನಲ್ಲಿ, ಸೌದಿ ಅರೇಬಿಯಾ ತನ್ನ "ಪೆಟ್ರೋಡಾಲರ್" ಒಪ್ಪಂದವನ್ನು ವಿಸ್ತರಿಸಲು ನಿರಾಕರಿಸಿತು.

ಡಾಲರ್​ಗೆ ಪರ್ಯಾಯ ಶುರು:ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾವು ಡಾಲರ್ ವಿರುದ್ಧ ಸ್ಪರ್ಧಿಸಲು ತನ್ನ ಕರೆನ್ಸಿಯನ್ನು ಜಾಗತಿಕವಾಗಿ ಪರಿಚಯಿಸಲು ಆರಂಭಿಸಿವೆ. "BRICS" ಕೂಡ ತನ್ನ ಕರೆನ್ಸಿಯ ಬಗ್ಗೆಯೂ ಚರ್ಚಿಸಿದೆ. ಆದರೂ, ಜಾಗತಿಕ ವಾಣಿಜ್ಯದ ಪ್ರಯೋಜನ, ಅಮೆರಿಕದ ರಾಜಕೀಯ ವಿಸ್ತರಣೆಯಿಂದಾಗಿ ಇಂಥದ್ದೊಂದು ಸಾಹಸ ಕಾರ್ಯಗತಕ್ಕೆ ಬರಲು ತುಸು ಸಮಯ ಹಿಡಿಯುತ್ತದೆ.

ಲೇಖಕರ ಪರಿಚಯ:ಈ ಲೇಖನವನ್ನು ರಾಜ್​ಕಮಲ್ ರಾವ್ ಅವರು ಬರೆದಿದ್ದಾರೆ. ಇವರು ಅಮೆರಿಕದ ವಾಣಿಜ್ಯೋದ್ಯಮಿ, ಅಂಕಣಕಾರ, ಭಾರತೀಯ ಮಾಧ್ಯಮ ನಿರೂಪಕರಾಗಿದ್ದಾರೆ. ಆರ್ಥಿಕತೆ, ರಾಜಕೀಯ, ವಲಸೆ, ವಿದೇಶಾಂಗ ವ್ಯವಹಾರಗಳು, ಭಾರತ-ಅಮೆರಿಕ ದ್ವಿಪಕ್ಷೀಯ ಸಂಬಂಧಗಳು ಮತ್ತು ಕ್ರೀಡೆಗಳ ಬಗ್ಗೆಯೂ ಬರೆಯುತ್ತಾರೆ. ನಾಲ್ಕು ಪುಸ್ತಕಗಳನ್ನೂ ಬರೆದಿದ್ದು, ಅವುಗಳನ್ನು ಅಮೆರಿಕ ವಿವಿಗಳಲ್ಲಿ ಅಧ್ಯಯನಕ್ಕೆ ಬಳಸಲಾಗುತ್ತಿದೆ.

ಗಮನಿಸಿ:ಈ ಲೇಖನದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಲೇಖಕರ ಸ್ವಃತದ್ದಾಗಿವೆ. ಇಲ್ಲಿರುವ ಮಾಹಿತಿ ETV BHARATನ ಅಭಿಪ್ರಾಯವಾಗಿರುವುದಿಲ್ಲ.

ಇದನ್ನೂ ಓದಿ:ಅತೀ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್​ಫೋನ್​ ಖರೀದಿಸಬೇಕೆಂದಿದ್ದೀರಾ? ಹಾಗಾದ್ರೆ ಇವೇ ನೋಡಿ ಬೆಸ್ಟ್ ಫೋನ್ಸ್​​ - best camera phones under 10k

Last Updated : Jul 20, 2024, 10:52 PM IST

ABOUT THE AUTHOR

...view details