ಪಿಎಲ್ಎ (ಪೀಪಲ್ಸ್ ಲಿಬರೇಶನ್ ಆರ್ಮಿ)ಯ ಸುಧಾರಣೆಗಳ ಭಾಗವಾಗಿ 2015 ರಲ್ಲಿ ಕ್ಸಿ ಜಿನ್ ಪಿಂಗ್ ಅವರು ರಚಿಸಿದ ಕಾರ್ಯತಂತ್ರದ ಬೆಂಬಲ ಪಡೆ (ಎಸ್ಎಸ್ಎಫ್) (Strategic Support Force -SSF) ಅನ್ನು ರದ್ದುಗೊಳಿಸುವುದಾಗಿ ಚೀನಾ ಏಪ್ರಿಲ್ 19 ರಂದು ಘೋಷಿಸಿತು. ಮೂರನೇ ಅವಧಿಗೆ ಅಧಿಕಾರ ಹಿಡಿಯಲು ಜಿನ್ ಪಿಂಗ್ ಈ ಪಡೆಯನ್ನು ಬಳಕೆ ಮಾಡಿಕೊಂಡಿದ್ದರು.
ಎಸ್ಎಸ್ಎಫ್ ಇದು ಇತರ ಸಂಸ್ಥೆಗಳಿಂದ ಸಂಯೋಜಿಸಲ್ಪಟ್ಟ ಇಲಾಖೆಗಳನ್ನು ಒಳಗೊಂಡಿತ್ತು. ಬಾಹ್ಯಾಕಾಶ, ಸೈಬರ್, ಮಾಹಿತಿ ಮತ್ತು ವಿದ್ಯುನ್ಮಾನ ಯುದ್ಧದ ಸಾಮರ್ಥ್ಯ ಹೆಚ್ಚಿಸುವುದು ಇದರ ಮೂಲ ಪಾತ್ರವಾಗಿತ್ತು. ಇತ್ತೀಚಿನ ಮರುಸಂಘಟನೆಯಲ್ಲಿ ಎಸ್ಎಸ್ಎಫ್ ಅನ್ನು ಮೂರು ಸ್ವತಂತ್ರ ಶಾಖೆಗಳಾಗಿ ವಿಂಗಡಿಸಲಾಗಿದೆ. ಮಾಹಿತಿ ಬೆಂಬಲ ಪಡೆ (ಐಎಸ್ಎಫ್), ಸೈಬರ್ ಸ್ಪೇಸ್ ಪಡೆ ಮತ್ತು ಏರೋಸ್ಪೇಸ್ ಫೋರ್ಸ್ ಎಂದು ಮೂರು ಭಾಗಗಳಾಗಿ ಇದನ್ನು ವಿಂಗಡಿಸಲಾಗಿದೆ.
ಈ ವಿಭಾಗಗಳು ನೇರವಾಗಿ ಕೇಂದ್ರ ಮಿಲಿಟರಿ ಆಯೋಗದ (ಸಿಎಂಸಿ) ಅಡಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಕ್ಸಿ ಜಿನ್ ಪಿಂಗ್ ನೇತೃತ್ವದ ಸಿಎಂಸಿ ಅವುಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲಿದೆ ಎಂಬ ಸಂದೇಶ ರವಾನಿಸಲಾಗಿದೆ. ಒಟ್ಟಾರೆಯಾಗಿ ಭೂಸೇನೆ, ನೌಕಾಪಡೆ, ವಾಯುಪಡೆ ಮತ್ತು ರಾಕೆಟ್ ಪಡೆ ಹೀಗೆ ಪಿಎಲ್ಎ ನಾಲ್ಕು ಪಡೆಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ಮೂರನ್ನು ಇತ್ತೀಚೆಗೆ ರಚಿಸಲಾಗಿದೆ ಮತ್ತು ಜಂಟಿ ಲಾಜಿಸ್ಟಿಕ್ಸ್ ಬೆಂಬಲ ಪಡೆ ಮುಂಚಿನಿಂದಲೇ ಅಸ್ತಿತ್ವದಲ್ಲಿದೆ.
ಇದರರ್ಥ ಸೈಬರ್, ಮಾಹಿತಿ ಮತ್ತು ಬಾಹ್ಯಾಕಾಶ ಇವು ಚೀನಾದ ಆಡಳಿತಕ್ಕೆ ನಿರ್ದಿಷ್ಟ ಆಸಕ್ತಿ ಎಂದು ಪರಿಗಣಿಸಲಾದ ಕ್ಷೇತ್ರಗಳಾಗಿವೆ. ಇದಲ್ಲದೆ, ಏಪ್ರಿಲ್ನಲ್ಲಿ ಘೋಷಣೆ ಮಾಡಿದ್ದರೂ, ಮರುಸಂಘಟನೆಗೆ ಮೊದಲು ಈ ವಿಷಯದ ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಿದ್ದವು. ಆದರೆ ಚೀನಾದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಗುಪ್ತವಾಗಿರುವುದರಿಂದ ಅಂತಿಮ ನಿರ್ಧಾರ ಘೋಷಿಸುವವರೆಗೆ ಯಾವುದೂ ಖಚಿತವಲ್ಲ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚೀನಾದ ರಕ್ಷಣಾ ಸಚಿವಾಲಯದ ವಕ್ತಾರ, ಸೈಬರ್ ಸ್ಪೇಸ್ ಪಡೆಯ ಪಾತ್ರವನ್ನು 'ರಾಷ್ಟ್ರೀಯ ಸೈಬರ್ ಗಡಿ ರಕ್ಷಣೆಯನ್ನು ಬಲಪಡಿಸುವುದು, ನೆಟ್ ವರ್ಕ್ ಒಳನುಸುಳುವಿಕೆಗಳನ್ನು ತ್ವರಿತವಾಗಿ ಪತ್ತೆಹಚ್ಚುವುದು ಮತ್ತು ಎದುರಿಸುವುದು ಮತ್ತು ರಾಷ್ಟ್ರೀಯ ಸೈಬರ್ ಸಾರ್ವಭೌಮತ್ವ ಮತ್ತು ಮಾಹಿತಿ ಭದ್ರತೆಯನ್ನು ಕಾಪಾಡಿಕೊಳ್ಳುವುದು' ಎಂದು ವ್ಯಾಖ್ಯಾನಿಸಿದ್ದಾರೆ. ಇದು 'ಆಕ್ರಮಣಕಾರಿ ಸೈಬರ್ ಕಾರ್ಯಾಚರಣೆಗಳಿಗೆ' ಜವಾಬ್ದಾರನಾಗಿರುತ್ತದೆ ಹಾಗೂ ಇದು ಯಾವ ಪಡೆಯು ಸೈಬರ್ ದಾಳಿಗಳನ್ನು ಎದುರಿಸಬೇಕು ಎಂಬುದನ್ನು ಸಿಎಂಸಿ ನಿರ್ಧರಿಸುತ್ತದೆ ಎಂದು ಹೇಳುತ್ತದೆ.
ಏರೋಸ್ಪೇಸ್ ಫೋರ್ಸ್ ಪಡೆಯು 'ಬಾಹ್ಯಾಕಾಶವನ್ನು ಸುರಕ್ಷಿತವಾಗಿ ಪ್ರವೇಶಿಸುವ, ನಿರ್ಗಮಿಸುವ ಮತ್ತು ಬಹಿರಂಗವಾಗಿ ಬಳಸುವ ಸಾಮರ್ಥ್ಯವನ್ನು ಬಲಪಡಿಸುತ್ತದೆ' ಎಂದು ಅವರು ಹೇಳಿದರು. ಬಾಹ್ಯಾಕಾಶವು ಯುದ್ಧದ ಮುಂದಿನ ಆಯಾಮವಾಗಿದೆ ಮತ್ತು ಪ್ರಪಂಚದಾದ್ಯಂತ ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ಭಾರತ ಸೇರಿದಂತೆ ಹೆಚ್ಚಿನ ಆಧುನಿಕ ಸಶಸ್ತ್ರ ಪಡೆಗಳು ಪ್ರತ್ಯೇಕ ಬಾಹ್ಯಾಕಾಶ ಕಮಾಂಡ್ ಅನ್ನು ಹೊಂದಿವೆ. ಈ ಬಗ್ಗೆ ಇತ್ತೀಚೆಗೆ ಮಾತನಾಡಿದ್ದ ಭಾರತೀಯ ಸಿಡಿಎಸ್ ಜನರಲ್ ಅನಿಲ್ ಚೌಹಾಣ್, ಬಾಹ್ಯಾಕಾಶವು ವಾಯು, ಕಡಲ ಮತ್ತು ಭೂ ಡೊಮೇನ್ಗಳ ಮೇಲೆ ತನ್ನ ಪ್ರಭಾವ ಬೀರುತ್ತದೆ ಎಂದು ಹೇಳಿದ್ದರು.
'ಆಧುನಿಕ ಯುದ್ಧದಲ್ಲಿ, ಗೆಲುವು ಮಾಹಿತಿಯ ಮೇಲೆ ಅವಲಂಬಿತವಾಗಿದೆ. ವ್ಯವಸ್ಥೆಗಳ ನಡುವೆ ಹೋರಾಟವಿದೆ ಮತ್ತು ಮಾಹಿತಿಯ ಶ್ರೇಷ್ಠತೆಯನ್ನು ಯಾರು ನಿಯಂತ್ರಿಸುತ್ತಾರೋ ಅವರೇ ಯುದ್ಧದಲ್ಲಿ ಮುನ್ನಡೆ ಸಾಧಿಸುತ್ತಾರೆ." ಎಂದು ಐಎಸ್ಎಫ್ ಬಗ್ಗೆ ಪಿಎಲ್ಎ ದಿನಪತ್ರಿಕೆ ಬರೆದಿದೆ. ಐಎಸ್ಎಫ್ ಮಿಲಿಟರಿ ಆಧುನೀಕರಣವನ್ನು ವೇಗಗೊಳಿಸುತ್ತದೆ ಮತ್ತು ಹೊಸ ಯುಗದಲ್ಲಿ ಸಶಸ್ತ್ರ ಪಡೆಗಳ ಧ್ಯೇಯವನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುತ್ತದೆ ಎಂದು ಕ್ಸಿ ಜಿನ್ ಪಿಂಗ್ ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಮಾಹಿತಿ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸುವುದರ ಹೊರತಾಗಿ ಐಎಸ್ಎಫ್ ಪಿಎಲ್ಎಗಾಗಿ ಸಂವಹನ ಮತ್ತು ನೆಟ್ ವರ್ಕ್ ರಕ್ಷಣೆಯ ಉಸ್ತುವಾರಿಯನ್ನು ವಹಿಸಿಕೊಳ್ಳಲಿದೆ. ಭವಿಷ್ಯದ ಯಾವುದೇ ಯುದ್ಧದ ಸಂದರ್ಭದಲ್ಲಿ, ಇತರ ವಿರೋಧಿಗಳು ಕಾರ್ಯನಿರ್ವಹಿಸುವ ಮೊದಲು ಮಾಹಿತಿಯ ವಲಯದಲ್ಲಿ ಪ್ರಾಬಲ್ಯ ಸಾಧಿಸುವ ಉದ್ದೇಶವನ್ನು ಐಎಸ್ಎಫ್ ಮುಂದಾಳತ್ವ ವಹಿಸುತ್ತದೆ ಎಂಬ ನಂಬಿಕೆಯೂ ಇದೆ.
ಎಲ್ಎಸಿ ಉದ್ದಕ್ಕೂ ತನ್ನ ಕಾರ್ಯಾಚರಣೆಗಳ ಭಾಗವಾಗಿ ಭಾರತವು ಚೀನಾದ ಮಾಹಿತಿ ಯುದ್ಧವನ್ನು ಎದುರಿಸುತ್ತಿದೆ. ಅರುಣಾಚಲ ಪ್ರದೇಶದ ಕೆಲ ಭಾಗಗಳನ್ನು ನಿಯಮಿತವಾಗಿ ಮರುನಾಮಕರಣ ಮಾಡುವುದು ಮತ್ತು ಅನೇಕ ಮಾಧ್ಯಮ ವೇದಿಕೆಗಳಲ್ಲಿ ಚೀನಾದ ನಿರೂಪಣೆಯನ್ನು ಬಿಂಬಿಸುವುದು ಇವುಗಳಲ್ಲಿ ಸೇರಿವೆ. ಈ ಕ್ರಮಗಳು ಸಾರ್ವಜನಿಕ ಅಭಿಪ್ರಾಯ, ಮಾನಸಿಕ ಮತ್ತು ಕಾನೂನು ಯುದ್ಧವನ್ನು ಒಳಗೊಂಡ ಚೀನಾದ 'ಮೂರು ಯುದ್ಧ' ಪರಿಕಲ್ಪನೆಯ ಭಾಗವಾಗಿದೆ. ಈ ಯುದ್ಧವನ್ನು ಈಗ ಐಎಸ್ಎಫ್ ಮುನ್ನಡೆಸಲಿದೆ.
ಚೀನಾದ ಸೇನಾಪಡೆಗಳ ಪುನರ್ ರಚನೆಗೆ ಅನೇಕ ಕಾರಣಗಳನ್ನು ನೀಡಲಾಗುತ್ತಿದೆ. ಒಂದು, ಪ್ರಸ್ತುತ ಎಸ್ಎಸ್ಎಫ್ ಯಶಸ್ವಿಯಾಗಲಿಲ್ಲ ಮತ್ತು ಬಾಹ್ಯಾಕಾಶ, ಸೈಬರ್ ಮತ್ತು ನೆಟ್ವರ್ಕ್ ರಕ್ಷಣಾ ಪಡೆಗಳ ನಡುವಿನ ಸಮನ್ವಯವನ್ನು ಸುಧಾರಿಸಲಿಲ್ಲ ಮತ್ತು ಅವುಗಳು ಮತ್ತು ಪಿಎಲ್ಎಯ ಇತರ ಅಂಗಗಳ ನಡುವಿನ ಸಮನ್ವಯವನ್ನು ಸುಧಾರಿಸಲಿಲ್ಲ. ಎಸ್ಎಸ್ಎಫ್ ಈ ರಚನೆಗಳಲ್ಲಿ ಅಪೇಕ್ಷಿತ ಸಾಮರ್ಥ್ಯಗಳನ್ನು ತಂದಿರಬಹುದು.