ಸೂಪರ್ ರುಚಿಯ ಉಡುಪಿ ಸ್ಟೈಲ್ನ 'ಕಾಳುಮೆಣಸಿನ ರಸಂ': ಶೀತ, ಕೆಮ್ಮು, ಗಂಟಲು ನೋವಿಗೆ ಒಳ್ಳೆಯದು - UDUPI STYLE PEPPER RASAM
Udupi Style Pepper Rasam Recipe: ಬಾಯಲ್ಲಿ ನೀರೂರಿಸುವ ಉಡುಪಿ ಶೈಲಿಯ 'ಪೆಪ್ಪರ್ ರಸಂ' ಮಾಡುವುದು ಹೇಗೆ ಗೊತ್ತಾ? ಈ ರಸಂ ಶೀತ, ಕೆಮ್ಮು, ಗಂಟಲು ನೋವಿಗೆ ತುಂಬಾ ಒಳ್ಳೆಯದು ಎಂದು ತಜ್ಞರು ತಿಳಿಸುತ್ತಾರೆ.
Udupi Style Pepper Rasam Recipe:ವಾತಾವರಣ ತಂಪಾಗಿರುವಾಗ ಬಿಸಿ ಬಿಸಿಯಾದ ಅನ್ನದ ಜೊತೆಗೆ ಸಖತ್ ಹಾಟ್ ಆಗಿರುವ ಮಸಾಲೆಯುಕ್ತ ರಸಂ ಸೇವಿಸಿದರೆ ಆ ಅನುಭವ ಸೂಪರ್ ಆಗಿರುತ್ತದೆ. ಚಳಿಗಾಲದಲ್ಲಿ ಅನೇಕ ಜನರು ಶೀತ, ಕೆಮ್ಮು, ಗಂಟಲು ನೋವು ಮತ್ತು ಜ್ವರದಂತಹ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಏನೇ ತಿಂದರೂ ನಾಲಿಗೆ ರುಚಿ ದೊರೆಯುವುದಿಲ್ಲ.
ಇಂತಹ ಸಮಯದಲ್ಲಿ ಈ ಉಡುಪಿ ಶೈಲಿಯ ಪೆಪ್ಪರ್ ರಸಂ ಟ್ರೈ ಮಾಡಿ ನೋಡಿ. ಊಟ ಸೇರದೆ ಇರುವವರು ಅನ್ನ ಜೊತೆಗೆ ಈ ರಸಂ ಸೇವಿಸಿದರೆ ಮನಸ್ಸಿಗೆ ಸಮಾಧಾನ ದೊರೆಯುತ್ತದೆ. ಈ ರಸಂ ತಯಾರಿಸಲು ಟೊಮ್ಯಾಟೊ, ಈರುಳ್ಳಿ, ಬೆಳ್ಳುಳ್ಳಿ ಮತ್ತು ಹಸಿಮೆಣಸಿನಕಾಯಿ ಅಗತ್ಯವಿಲ್ಲ. ಈ ಸೂಪರ್ ಟೇಸ್ಟಿ ಮತ್ತು ಆರೋಗ್ಯಕರ ರಸಂ ರೆಡಿ ಮಾಡಲು ಬೇಕಾಗುವ ಪದಾರ್ಥಗಳು ಹಾಗೂ ತಯಾರಿಸುವ ವಿಧಾನ ಹೇಗೆ ಎಂಬುದನ್ನು ಇಲ್ಲಿ ನೋಡೋಣ.
ಉಡುಪಿ ಶೈಲಿಯ 'ಪೆಪ್ಪರ್ ರಸಂ'ಗೆ ಬೇಕಾಗುವ ಪದಾರ್ಥಗಳು:
ಕಾಳಮೆಣಸು - 1 ಟೀಸ್ಪೂನ್
ತುಪ್ಪ - ಅರ್ಧ ಟೀಸ್ಪೂನ್
ಕಪ್ಪು ತೊಗಡೆಯಿರುವ ಉದ್ದಿನ ಬೇಳೆ- ಒಂದೂವರೆ ಟೀಸ್ಪೂನ್
ಧನಿಯಾ ಪುಡಿ - 1 ಟೀಸ್ಪೂನ್
ಜೀರಿಗೆ - ಒಂದು ಟೀಸ್ಪೂನ್
ತುರಿದ ಕೊಬ್ಬರಿ - 2 ಟೀಸ್ಪೂನ್
ಹುಣಸೆಹಣ್ಣು - ನಿಂಬೆ ಗಾತ್ರದಷ್ಟು
ಅರಿಶಿನ - ಒಂದು ಟೀಸ್ಪೂನ್
ಕಲ್ಲು ಉಪ್ಪು - ರುಚಿಗೆ ತಕ್ಕಷ್ಟು
ತುರಿದ ಬೆಲ್ಲ - 1 ಟೀಸ್ಪೂನ್
ರಸಂ ಒಗ್ಗರಣೆಗಾಗಿ:
ತುಪ್ಪ - ಅರ್ಧ ಟೀಸ್ಪೂನ್
ಸಾಸಿವೆ - ಒಂದು ಟೀಸ್ಪೂನ್
ಕರಿಬೇವಿನ ಎಲೆಗಳು - 2 ಚಿಗುರು
ಇಂಗು - ಒಂದು ಚಿಟಿಕೆ
ಪೆಪ್ಪರ್ ರಸಂ ತಯಾರಿಸುವ ವಿಧಾನ:
ಮೊದಲು ಒಂದು ಚಿಕ್ಕ ಬಟ್ಟಲಿನಲ್ಲಿ ಹುಣಸೆ ಹಣ್ಣನ್ನು ತೊಳೆದು ನೆನೆಸಿಡಿ.
ಈಗ ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ತುಪ್ಪ ಹಾಕಿ. ಅದು ಕರಗಿ ಸ್ವಲ್ಪ ಬಿಸಿಯಾದ ನಂತರ ಕಾಳುಮೆಣಸು ಹಾಕಿ ಹುರಿದುಕೊಳ್ಳಿ.
ಕಾಳುಮೆಣಸು ಫ್ರೈ ಆಗುತ್ತಿರುವಾಗಲೇ ಉದ್ದಿನಬೇಳೆ, ಧನಿಯಾ ಪುಡಿ ಹಾಕಿ ಸಣ್ಣ ಉರಿಯಲ್ಲಿ ಸ್ವಲ್ಪ ಹೊತ್ತು ಹುರಿದುಕೊಳ್ಳಬೇಕಾಗುತ್ತದೆ.
ಅದಕ್ಕೆ ಜೀರಿಗೆ ಸೇರಿಸಿ ಮತ್ತು ಅವುಗಳನ್ನು ಫ್ರೈ ಮಾಡಿ. ಎಲ್ಲಾ ಕಾಳುಗಳು ಬೆಂದ ನಂತರ ಸುವಾಸನೆ ಬರುತ್ತದೆ. ಅಂತಿಮವಾಗಿ ತುರಿದ ಕೊಬ್ಬರಿ ಸೇರಿಸಿ. ಅದು ಸ್ವಲ್ಪ ಕೆಂಪಾಗುವವರೆಗೆ ಹುರಿಯಿರಿ ಬಳಿಕ ಒಲೆ ಆಫ್ ಮಾಡಿ.
ಈಗ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಹುರಿದ ಕಾಳುಮೆಣಸಿನ ಮಿಶ್ರಣವನ್ನು ಹಾಕಿ ಸ್ವಲ್ಪ ನೀರು ಹಾಕಿ ಸ್ವಲ್ಪ ಒರಟಾಗಿ ರುಬ್ಬಿಕೊಳ್ಳಿ.
ಅದರ ನಂತರ, ನೆನೆಸಿದ ಹುಣಸೆಹಣ್ಣನ್ನು ತೆಗೆದುಕೊಂಡು ಅದನ್ನು ಕೈಯಿಂದ ಹಿಸುಕಿ ಅದರ ರಸವನ್ನು ಹೊರತೆಗೆದು ಅದನ್ನು ಪಕ್ಕಕ್ಕೆ ಇರಿಸಿ.
ಈಗ ಒಲೆಯ ಮೇಲೆ ಕಾಳುಮೆಣಸು ಹುರಿದ ಕಡಾಯಿಯನ್ನು ಇಡಿ ಮತ್ತು ಹುಣಸೆ ರಸವನ್ನು ಸುರಿದುಕೊಳ್ಳಬೇಕಾಗುತ್ತದೆ. ನಂತರ ಅದಕ್ಕೆ ಅರಿಶಿನ, ಲೀಟರ್ ನೀರು ಮತ್ತು ಉಪ್ಪನ್ನು ಸೇರಿಸಿ ಮತ್ತು ರಸಂ ಮಧ್ಯದಲ್ಲಿ ಗುಳ್ಳೆಗಳು ಬರುವಂತೆ ಹೆಚ್ಚಿನ ಉರಿಯಲ್ಲಿ ಕುದಿಸಿ.
ಅದು ಕುದಿಸಿದ ನಂತರ ಬೆಲ್ಲವನ್ನು ತುರಿದು ರುಬ್ಬಿದ ಕಾಳುಮೆಣಸಿನ ಪೇಸ್ಟ್ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ನಂತರ ಮತ್ತೆ 3 ರಿಂದ 4 ನಿಮಿಷಗಳ ಕಾಲ ಹೆಚ್ಚಿನ ಉರಿಯಲ್ಲಿ ಕುದಿಸಿ. ನಂತರ ಸ್ಟೌ ಅನ್ನು ಕಡಿಮೆ ಉರಿಯಲ್ಲಿ ಇಡಿ ಮತ್ತು ಸ್ವಲ್ಪಹೊತ್ತು ಹಾಗೆ ಬಿಡಿ.
ಅದರ ನಂತರ ಮತ್ತೊಂದು ಬರ್ನರ್ ಮೇಲೆ ಸಣ್ಣ ಪಾತ್ರೆ ಇಡಿ. ಅದರೊಳಗೆ ತುಪ್ಪ ಸೇರಿಸಿ. ಅದು ಕರಗಿ ಸ್ವಲ್ಪ ಬಿಸಿಯಾದ ನಂತರ ಸಾಸಿವೆ ಹಾಕಿ ಫ್ರೈ ಮಾಡಿ. ನಂತರ ಕರಿಬೇವು ಹಾಗೂ ಇಂಗು ಹಾಕಿ ಚೆನ್ನಾಗಿ ಹುರಿದುಕೊಳ್ಳಿ.
ಒಗ್ಗರಣೆ ರೆಡಿಯಾದ ಬಳಿಕ ಅದನ್ನು ತೆಗೆದುಕೊಂಡು ಇನ್ನೊಂದು ಬರ್ನರ್‌ನಲ್ಲಿ ಕುದಿಯುತ್ತಿರುವ ರಸಂಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ನಂತರ ಒಂದು ನಿಮಿಷ ಕುದಿಸಿ. ಆಗ ಬಾಯಲ್ಲಿ ನೀರೂರಿಸುವ ಉಡುಪಿ ಸ್ಟೈಲ್ನ ಪೆಪ್ಪರ್ ರಸಂ ರೆಡಿ.