ನಾವು 2024ರ ವರ್ಷಾಂತ್ಯದಲ್ಲಿದ್ದೇವೆ. ಈ ವರ್ಷ ಜಗತ್ತು ಹಲವು ರಾಜಕೀಯ ಘಟನೆಗಳು, ಬದಲಾವಣೆಗಳನ್ನು ಕಂಡಿದೆ. ಆಡಳಿತ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳ ಭವಿಷ್ಯ ರೂಪಿಸುವ ದಾಖಲೆ ಸಂಖ್ಯೆಯ ನಿರ್ಣಾಯಕ ಚುನಾವಣೆಗಳು ನಡೆದಿವೆ.
ಚೀನಾದ ಜೊತೆಗಿನ ಉದ್ವಿಗ್ನತೆಯ ನಡುವೆ ತೈವಾನ್‌ನ ರಕ್ಷಣಾ-ಕೇಂದ್ರಿತ ಅಧ್ಯಕ್ಷೀಯ ಚುನಾವಣೆಯಿಂದ ಹಿಡಿದು, ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಅಧಿಕಾರ ವಹಿಸಿಕೊಂಡ ಭಾರತದ ಪ್ರಮುಖ ಲೋಕಸಭಾ ಚುನಾವಣೆಗಳವರೆಗೆ ರಾಜಕೀಯ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ.
ಭಾರತದ ನೆರೆಹೊರೆಯ ದೇಶಗಳಲ್ಲಾದ ಪ್ರಮುಖ ಚುನಾವಣೆಗಳು:
ಬಾಂಗ್ಲಾದೇಶ:2024ರ ಜನವರಿ 7ರಂದು ನಡೆದ ಬಾಂಗ್ಲಾದೇಶ ಲೋಕಸಭಾ ಚುನಾವಣೆ ದೇಶದ ರಾಜಕೀಯ ಇತಿಹಾಸದಲ್ಲಿ ಮಹತ್ವದ ಹಾಗೂ ವಿವಾದಾತ್ಮಕ ಅಧ್ಯಾಯವಾಗಿ ಗುರುತಿಸಿಕೊಂಡಿತು. 350 ಸದಸ್ಯರ ರಾಷ್ಟ್ರೀಯ ಸಂಸತ್ಗೆ ನಡೆದ ಚುನಾವಣೆ ತನ್ನ ನ್ಯಾಯೋಚಿತತೆ, ಒಳಗೊಳ್ಳುವಿಕೆ ಹಾಗೂ ಪ್ರಜಾಪ್ರಭುತ್ವತ ಸಮಗ್ರತೆಗಾಗಿ ವ್ಯಾಪಕ ಟೀಕೆಗಳನ್ನು ಎದುರಿಸಿತು.
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ (AP) ಪ್ರಧಾನಮಂತ್ರಿ ಶೇಖ್ ಹಸೀನಾ ನೇತೃತ್ವದ ಆಡಳಿತಾರೂಢ ಅವಾಮಿ ಲೀಗ್ (AL) ಸ್ಪರ್ಧಿಸಿದ 300 ಸ್ಥಾನಗಳಲ್ಲಿ 224 ಸ್ಥಾನಗಳನ್ನು ಗೆದ್ದು ಸತತ ನಾಲ್ಕನೇ ಅವಧಿಗೆ ಅಧಿಕಾರ ವಹಿಸಿಕೊಂಡಿತ್ತು. ಆದಾಗ್ಯೂ, ಪ್ರಮುಖ ವಿರೋಧ ಪಕ್ಷವಾದ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ ಮತ್ತು ಅದರ ಮಿತ್ರಪಕ್ಷಗಳು ಚುನಾವಣೆ ಬಹಿಷ್ಕರಿಸಿದ್ದವು. ಚುನಾವಣೆಯಲ್ಲಿ ಅಕ್ರಮ ನಡೆಸಲಾಗಿದೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದವು.
ಚುನಾವಣೆಯ ನಂತರದಲ್ಲಿ ಜಾಗತಿಕ ನಾಯಕರುಗಳಿಂದ ಟೀಕೆಗಳು ಕೇಳಿಬಂದವು. ಪ್ರತಿಭಟನೆಗಳಿಗೂ ದೇಶ ಸಾಕ್ಷಿಯಾಯಿತು. ಯುಎಸ್ ಮತ್ತು ಯುಕೆನಂತಹ ಪಾಶ್ಚಿಮಾತ್ಯ ರಾಷ್ಟ್ರಗಳು ಚುನಾವಣಾ ಪ್ರಕ್ರಿಯೆಯ ಪ್ರಜಾಪ್ರಭುತ್ವದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದವು. 2024ರ ಜುಲೈ ಹಾಗೂ ಆಗಸ್ಟ್ನಲ್ಲಿ ಉದ್ಯೋಗ ಮೀಸಲಾತಿಯ ವಿರುದ್ಧ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ, ಸಾಮೂಹಿಕ ದಂಗೆಯಾಗಿ ಭುಗಿಲೆದ್ದು, ಶೇಖ್ ಹಸೀನಾ ರಾಜೀನಾಮೆ ನೀಡುವಂತೆ ಮಾಡಿತ್ತು. ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಹಿಂಸಾಚಾರ 12ನೇ ರಾಷ್ಟ್ರೀಯ ಸಂಸತ್ತು ವಿಸರ್ಜನೆಗೆ ಕಾರಣವಾಗಿ, ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ಸ್ಥಾಪನೆಗೆ ಕಾರಣವಾಯಿತು.
ಬಾಂಗ್ಲಾದೇಶದಲ್ಲಿ ಪ್ರತಿಭಟನೆ (AP) 2025ರ ಕೊನೆಯಲ್ಲಿ ಅಥವಾ 2026ರ ಆರಂಭದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ ಎಂದು ಇತ್ತೀಚಿಗೆ ಮಧ್ಯಂತರ ಸರ್ಕಾರದ ನಾಯಕ ಮುಹಮ್ಮದ್ ಯೂನುಸ್ ತಿಳಿಸಿದ್ದಾರೆ.
ಭೂತಾನ್:ಹಿಮಾಲಯದ ದೇಶ ಭೂತಾನ್ನಲ್ಲಿ ರಾಷ್ಟ್ರೀಯ ಅಸೆಂಬ್ಲಿ ಚುನಾವಣೆ ಎರಡು ಸುತ್ತುಗಳಲ್ಲಿ ನಡೆದಿತ್ತು. ಪ್ರಾಥಮಿಕ ಸುತ್ತು 2023ರ ನವೆಂಬರ್ 30ರಂದು ಹಾಗೂ ಎರಡನೇ ಸುತ್ತು 2024ರ ಜನವರಿ 9ರಂದು ನಡೆದಿತ್ತು. 2008ರಲ್ಲಿ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಪರಿವರ್ತನೆಗೊಂಡ ನಂತರ ದೇಶದಲ್ಲಿ ನಡೆದ ನಾಲ್ಕನೇ ಸಂಸತ್ ಚುನಾವಣೆಯಾಗಿದೆ.
ಪ್ರಾಥಮಿಕ ಸುತ್ತಿನಿಂದ ಹೊರಹೊಮ್ಮಿದ ಅಗ್ರ ಎರಡು ಪಕ್ಷಗಳಾದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮತ್ತು ಭೂತಾನ್ ಟೆಂಡ್ರೆಲ್ ಪಾರ್ಟಿ (ಬಿಟಿಪಿ) ನಡುವೆ ಅಂತಿಮ ಸ್ಪರ್ಧೆ ನಡೆಯಿತು. ರಾಷ್ಟ್ರೀಯ ಅಸೆಂಬ್ಲಿಯಲ್ಲಿ 47 ಸ್ಥಾನಗಳಲ್ಲಿ 30 ಸ್ಥಾನಗಳನ್ನು ಪಡೆದುಕೊಂಡು PDP ವಿಜಯ ಸಾಧಿಸಿತು. ಈ ವಿಜಯದ ಮೂಲಕ ತ್ಶೆರಿಂಗ್ ಟೊಬ್ಗೇ ಎರಡನೇ ಅವಧಿಗೆ ಮತ್ತೆ ಪ್ರಧಾನ ಮಂತ್ರಿಯಾಗಿ ಗದ್ದುಗೆ ಏರಿದರು.
ಪಾಕಿಸ್ತಾನ:ಭಾರತದ ಮತ್ತೊಂದು ನೆರೆ ರಾಷ್ಟ್ರವಾದ ಪಾಕಿಸ್ತಾನದಲ್ಲಿ ಫೆಬ್ರವರಿ 8ರಂದು ರಾಷ್ಟ್ರೀಯ ಅಸೆಂಬ್ಲಿಗೆ ಚುನಾವಣೆಗಳು ನಡೆದವು. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪಕ್ಷವಾದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಅನ್ನು ಬದಿಗೊತ್ತಿದ್ದು ಚುನಾವಣೆಯ ಪ್ರಮುಖ ಅಂಶವಾಗಿತ್ತು. ಇಮ್ರಾನ್ ಖಾನ್ ಅವರ ಜೈಲುವಾಸ ಹಾಗೂ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಚುನಾವಣಾ ಚಿಹ್ನೆಯನ್ನು ನಿಷೇಧಿಸಿದ ಕಾರಣ, ಇಮ್ರಾನ್ ಖಾನ್ ಬೆಂಬಲಿತರು ಪಕ್ಷದ ಚಿನ್ಹೆಯಿಲ್ಲದೆ, ಸ್ವತಂತ್ರವಾಗಿ ಸ್ಪರ್ಧಿಸಿದ್ದರು. 100ಕ್ಕೂ ಹೆಚ್ಚು ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.
ಪತ್ನಿ ಬುಶ್ರಾ ಬೀಬಿ ಜೊತೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (AP) ಆದರೆ, ಸರ್ಕಾರ ರಚನೆಗೆ ಅಗತ್ಯವಾದ ಮೈತ್ರಿಕೂಟದ ಕೊರತೆ ಅವರಿಗಿತ್ತು. ನವಾಜ್ ಷರೀಫ್ ನೇತೃತ್ವದ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) 75 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) 54 ಸ್ಥಾನಗಳೊಂದಿಗೆ ನಂತರದ ಸ್ಥಾನದಲ್ಲಿತ್ತು. ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದಲ್ಲಿ ಸಣ್ಣ ಪಕ್ಷಗಳ ಜೊತೆಗೆ PML-N ಮತ್ತು PPP ಸಮ್ಮಿಶ್ರ ಸರ್ಕಾರ ರಚಿಸಿತು.
ಶ್ರೀಲಂಕಾ:ಶ್ರೀಲಂಕಾದಲ್ಲಿ ಸೆಪ್ಟೆಂಬರ್ 21ರಂದು ಅಧ್ಯಕ್ಷೀಯ ಚುನಾವಣೆ ನಡೆಯಿತು. ನ್ಯಾಷನಲ್ ಪೀಪಲ್ಸ್ ಪವರ್ (NPP) ಮೈತ್ರಿಕೂಟದ ಅನುರಾ ಕುಮಾರ ದಿಸ್ಸನಾಯಕೆ ಅವರು ಪ್ರತಿಸ್ಪರ್ಧಿಗಳನ್ನು ಸೋಲಿಸಿ ಅಧ್ಯಕ್ಷ ಸ್ಥಾನಕ್ಕೇರಿದರು. 2022ರಲ್ಲಿ ದೇಶ ಕಂಡ ಅತಿದೊಡ್ಡ ಆರ್ಥಿಕ ಬಿಕ್ಕಟ್ಟಿನ ನಂತರ ನಡೆದ ಮೊದಲ ಚುನಾವಣೆಯಲ್ಲಿ, ಶ್ರೀಲಂಕಾದ 10ನೇ ಅಧ್ಯಕ್ಷರಾಗಿ ಆಯ್ಕೆಯಾದರು.
ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸ್ಸನಾಯಕೆ (AP) ಅಧ್ಯಕ್ಷೀಯ ಚುನಾವಣೆ ಬಳಿಕ, ನವೆಂಬರ್ 14ರಂದು ಸಂಸತ್ತಿನ ಚುನಾವಣೆ ನಡೆಯಿತು. ನ್ಯಾಷನಲ್ ಪೀಪಲ್ಸ್ ಪವರ್ ಪಕ್ಷ 225 ಸ್ಥಾನಗಳಲ್ಲಿ 159 ಸ್ಥಾನಗಳನ್ನು ಗೆದ್ದು ಐತಿಹಾಸಿಕ ಗೆಲುವು ಸಾಧಿಸಿತು. ಈ ಬಹುಮತ, ಸಾಂವಿಧಾನಿಕ ಬದಲಾವಣೆಗಳು ಮತ್ತು ಆರ್ಥಿಕ ಪುನರ್‌ರಚನೆ ಸೇರಿದಂತೆ ಅವರ ಮಹತ್ವಾಕಾಂಕ್ಷೆಯ ಸುಧಾರಣಾ ಕಾರ್ಯಸೂಚಿಯನ್ನು ಮುಂದುವರಿಸಲು ದಾರಿಯಾಯಿತು. 21 ಮಹಿಳಾ ಸಂಸದರು ಆಯ್ಕೆಯಾಗುವ ಮೂಲಕ ಶ್ರೀಲಂಕಾದ ಇತಿಹಾಸದಲ್ಲಿ ದಾಖಲೆ ನಿರ್ಮಿಸಿತು.
ಇಂಡೋನೇಷ್ಯಾ:ಆಗ್ನೇಯ ಏಷ್ಯಾದ ರಾಷ್ಟ್ರವಾದ ಇಂಡೋನೇಷ್ಯಾ ಕೂಡ 2024ರಲ್ಲಿ ಸಾರ್ವತ್ರಿಕ ಚುನಾವಣೆ ಕಂಡಿತು. ಅಧ್ಯಕ್ಷೀಯ ಚುನಾವಣೆಯು ಸಾರ್ವತ್ರಿಕ ಚುನಾವಣೆಯ ಕೇಂದ್ರಬಿಂದುವಾಗಿತ್ತು. ಈ ಚುನಾವಣೆಯಲ್ಲಿ ಪ್ರಬೋವೊ ಸುಬಿಯಾಂಟೊ ವಿಜಯ ಸಾಧಿಸಿದ್ದರು. 'ಆನ್‌ವರ್ಡ್ ಇಂಡೋನೇಷ್ಯಾ ಒಕ್ಕೂಟ' ಅಡಿಯಲ್ಲಿ ಓಡಿ ಗಿಬ್ರಾನ್ ರಕಬುಮಿಂಗ್ ರಾಕಾ (ಅಂದಿನ ಹಾಲಿ ಅಧ್ಯಕ್ಷ ಜೊಕೊ ವಿಡೋಡೊ ಅವರ ಮಗ) ಜೊತೆ ಕೈಜೋಡಿಸಿಕೊಂಡು, ಪ್ರಬೋವೊ ಅವರು ತಮ್ಮ ಪ್ರಮುಖ ಪ್ರತಿಸ್ಪರ್ಧಿಗಳಾದ ಗಂಜಾರ್ ಪ್ರನೊವೊ ಮತ್ತು ಆನಿಸ್ ಬಸ್ವೆಡನ್ ಅವರನ್ನು ಸೋಲಿಸುವ ಮೂಲಕ ಸರಿಸುಮಾರು 58 ಪ್ರತಿಶತ ಮತಗಳನ್ನು ಗಳಿಸಿದರು. ಚುನಾವಣಾ ಅಭಿಯಾನದಲ್ಲಿ ರಾಷ್ಟ್ರೀಯ ಏಕತೆ, ಆರ್ಥಿಕ ಬೆಳವಣಿಗೆ ಮತ್ತು ಹಿಂದಿನ ಆಡಳಿತದ ನೀತಿಗಳನ್ನು ಮುಂದುವರಿಸುವ ಬಗ್ಗೆ ಪ್ರಬೋವೋ ಒತ್ತಿ ಹೇಳಿದ್ದರು.
ತೈವಾನ್:ಪೂರ್ವ ಏಷ್ಯಾದ ರಾಷ್ಟ್ರವಾದ ತೈವಾನ್ ಕೂಡ ಜನವರಿ 13ರಂದು ಪ್ರಮುಖ ಅಧ್ಯಕ್ಷೀಯ ಮತ್ತು ಶಾಸಕಾಂಗ ಚುನಾವಣೆಗಳನ್ನು ಎದುರಿಸಿತು. ಆಡಳಿತಾರೂಢ ಡೆಮಾಕ್ರಟಿಕ್ ಪ್ರೋಗ್ರೆಸ್ಸಿವ್ ಪಾರ್ಟಿಯ (DPP) ಅಭ್ಯರ್ಥಿ ಲೈ ಚಿಂಗ್-ಟೆ 40 ಪ್ರತಿಶತ ಮತಗಳನ್ನು ಗಳಿಸುವ ಮೂಲಕ ಕೌಮಿಂಟಾಂಗ್ (KMT) ಪಕ್ಷದ ಹೌ ಯು-ಐಹ್ ಹಾಗೂ ತೈವಾನ್ ಪೀಪಲ್ಸ್ ಪಾರ್ಟಿಯ (TPP) ಕೊ ವೆನ್-ಜೆ ಅವರನ್ನು ಸೋಲಿಸಿ, ಅಧ್ಯಕ್ಷ ಸ್ಥಾನವನ್ನು ಗೆದ್ದರು.
ಲೈ ಅವರ ಗೆಲುವು DPPಗೆ ಸತತ ಮೂರನೇ ಅಧ್ಯಕ್ಷೀಯ ಗೆಲುವು. ಈ ಮೂಲಕ DPP ಐತಿಹಾಸಿಕ ಮೈಲಿಗಲ್ಲು ಸಾಧಿಸಿತು. ಚುನಾವಣಾ ಅಭಿಯಾನ ವೇಳೆ ಬೀಜಿಂಗ್‌ನ "ಒಂದು ದೇಶ, ಎರಡು ವ್ಯವಸ್ಥೆಗಳು" ಚೌಕಟ್ಟನ್ನು ತಿರಸ್ಕರಿಸಿ ತೈವಾನ್‌ನ ಸಾರ್ವಭೌಮತ್ವವನ್ನು ಒತ್ತಿಹೇಳಲಾಗಿತ್ತು. ಮತ್ತು ಪ್ರಜಾಸತ್ತಾತ್ಮಕ ಮಿತ್ರರಾಷ್ಟ್ರಗಳೊಂದಿಗೆ, ವಿಶೇಷವಾಗಿ ಯುಎಸ್‌ನೊಂದಿಗೆ ನಿಕಟ ಸಂಬಂಧ ಹೊಂದುವ ಭರವಸೆ ನೀಡಿತ್ತು.
ಜಪಾನ್:ಪ್ರಧಾನಮಂತ್ರಿ ಶಿಗೆರು ಇಶಿಬಾ ಅವರು ರಾಷ್ಟ್ರೀಯ ಡಯಟ್‌ನ ಕೆಳಮನೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅನ್ನು ಅವಧಿಗೂ ಮುನ್ನ ವಿಸರ್ಜಿಸಿದ ಕಾರಣ ಈ ವರ್ಷದ ಅಕ್ಟೋಬರ್‌ನಲ್ಲಿ ಪೂರ್ವ ಏಷ್ಯಾದ ಮತ್ತೊಂದು ರಾಷ್ಟ್ರವಾದ ಜಪಾನ್‌ನಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದವು. ಸೆಪ್ಟೆಂಬರ್‌ನಲ್ಲಿ ನಡೆದ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ (ಎಲ್‌ಡಿಪಿ) ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದು, ಇಶಿಬಾ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಒಂದು ತಿಂಗಳ ನಂತರ ಚುನಾವಣೆ ನಡೆಸಲಾಯಿತು. ಸ್ಲಶ್ ಫಂಡ್ ಭ್ರಷ್ಟಾಚಾರ ಹಗರಣದಿಂದಾಗಿ ಪಕ್ಷದಲ್ಲಿ ವಿರೋಧ ಎದ್ದ ಕಾರಣ ಪಕ್ಷದ ನಾಯಕರಾಗಿ ಫ್ಯೂಮಿಯೊ ಕಿಶಿಡಾ ರಾಜೀನಾಮೆ ನೀಡಿದ್ದರು. ನಂತರ ಈ ಸ್ಥಾನಕ್ಕೆ ಚುನಾವಣೆ ನಡೆಯಿತು.
ಎಲ್‌ಡಿಪಿ ಹಾಗೂ Komeito ಜೊತೆಯಾಗಿ ಚುನಾವಣೆ ಎದುರಿಸಿ ಐತಿಹಾಸಿಕ ಸೋಲನ್ನು ಅನುಭವಿಸಿತು. 2009ರಿಮದ ಮೊದಲ ಬಾರಿಗೆ ಪಕ್ಷ ತನ್ನ ಬಹುಮತ ಗಳಿಸುವಲ್ಲಿ ಸೋತಿತು. ಸರ್ಕಾರ ರಚಿಸಲು ಅಗತ್ಯವಿರುವ 233 ಸ್ಥಾನಗಳನ್ನು ಗಳಿಸಲು ವಿಫಲವಾಗಿ, LDP ಮತ್ತು Komeito ಕೇವಲ 215 ಸ್ಥಾನಗಳಿಗೆ ತೃಪ್ತಿಪಡುವಂತಾಯಿತು. ಈ ಹಿಂದೆ ಇದೇ ಸಮ್ಮಿಶ್ರ 279 ಸ್ಥಾನಗಳನ್ನು ಗಳಿಸಿತು. ಪಕ್ಷದ ನಿಧಿ ಸಂಗ್ರಹದಲ್ಲಾದ ಅಕ್ರಮ ಬಗ್ಗೆ ಸಾರ್ವಜನಿಕ ಅತೃಪ್ತಿ ಈ ಫಲಿತಾಂಶದ ಮೇಲೆ ಪರಿಣಾಮ ಬೀರಿತ್ತು. ಪ್ರಮುಖ ವಿರೋಧ ಪಕ್ಷವಾದ ಸಾಂವಿಧಾನಿಕ ಡೆಮಾಕ್ರಟಿಕ್ ಪಾರ್ಟಿ (CDP), ಈ ಅತೃಪ್ತಿಯನ್ನು ಬಂಡವಾಳವಾಗಿಟ್ಟುಕೊಂಡು ತನ್ನ ಪ್ರಾತಿನಿಧ್ಯವನ್ನು 98 ರಿಂದ 148 ಸ್ಥಾನಗಳಿಗೆ ಹೆಚ್ಚಿಸಿಕೊಂಡಿತು.
ಮಾರಿಷಸ್:ದ್ವೀಪ ರಾಷ್ಟ್ರವಾದ ಮಾರಿಷಸ್ನಲ್ಲಿ ಈ ವರ್ಷ ಸಂಸತ್ತಿನ ಚುನಾವಣೆ ನಡೆದಿದೆ. ಚುನಾವಣೆಯಲ್ಲಿ ಮಾಜಿ ಪ್ರಧಾನಿ ನವೀನ್ ರಾಮ್‌ಗೂಲಂ ನೇತೃತ್ವದ ಅಲಯನ್ಸ್ ಡು ಚೇಂಜ್‌ಮೆಂಟ್ ಎಂಬ ವಿರೋಧ ಪಕ್ಷದ ಒಕ್ಕೂಟ ಜಯ ಸಾಧಿಸಿತು. ಅಲಯನ್ಸ್ ಡು ಚೇಂಜ್‌ಮೆಂಟ್ ರಾಷ್ಟ್ರೀಯ ಅಸೆಂಬ್ಲಿಯ 62 ಸ್ಥಾನಗಳಲ್ಲಿ 60 ಸ್ಥಾನಗಳನ್ನು ಪಡೆದು ರಾಜಕೀಯ ಕ್ಷೇತ್ರದಲ್ಲಿ ಪ್ರಮುಖ ಬದಲಾವಣೆಗೆ ನಾಂದಿ ಹಾಡಿತು. ಈ ಗೆಲುವಿನ ಮೂಲಕ ನಿರ್ಗಮಿತ ಪ್ರಧಾನ ಮಂತ್ರಿ ಪ್ರವಿಂದ್ ಜುಗ್ನೌತ್ ನೇತೃತ್ವದ ಪೀಪಲ್ಸ್ ಅಲೈಯನ್ಸ್ ಅಧಿಕಾರಾವಧಿ ಪರಿಣಾಮಕಾರಿಯಾಗಿ ಕೊನೆಗೊಂಡಿತು. ಹೆಚ್ಚುತ್ತಿರುವ ಜೀವನ ವೆಚ್ಚಗಳು, ಭ್ರಷ್ಟಾಚಾರ ಆರೋಪಗಳು ಮತ್ತು ಆರ್ಥಿಕ ಹೋರಾಟಗಳಂತಹ ಸವಾಲು ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಿತ್ತು. ಪರಿಣಾಮ ಜುಗ್ನೌತ್ ಅವರ ಪಕ್ಷ ಒಂದೇ ಒಂದು ಸ್ಥಾನವನ್ನು ಗೆಲ್ಲುವಲ್ಲಿ ವಿಫಲವಾಯಿತು.
ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ (AP) ಫ್ರಾನ್ಸ್:ಈ ವರ್ಷ ಫ್ರಾನ್ಸ್ ರಾಷ್ಟ್ರೀಯ ಅಸೆಂಬ್ಲಿಯ ಎಲ್ಲಾ 577 ಸದಸ್ಯರನ್ನು ಆಯ್ಕೆ ಮಾಡಲು ಜೂನ್ 30 (ಮೊದಲ ಸುತ್ತು) ಮತ್ತು ಜುಲೈ 7 (ಎರಡನೇ ಸುತ್ತು) ರಂದು ಕ್ಷಿಪ್ರ ಸಂಸತ್ತಿನ ಚುನಾವಣೆ ನಡೆಯಿತು. ಯುರೋಪಿಯನ್ ಪಾರ್ಲಿಮೆಂಟ್ ಚುನಾವಣೆಯಲ್ಲಿ ತನ್ನ ಒಕ್ಕೂಟ ಗಮನಾರ್ಹವಾದ ಸೋಲು ಅನುಭವಿಸಿದ ಪರಿಣಾಮ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅಸೆಂಬ್ಲಿಯನ್ನು ವಿಸರ್ಜಿಸಿದರು. ಶಾಸಕಾಂಗದ ಓಟದಲ್ಲಿ ಮೂರು ಪ್ರಮುಖ ಬಣಗಳಾದ ಮ್ಯಾಕ್ರನ್‌ರ ಸರ್ಕಾರದ ಪರವಾದ ಎನ್‌ಸೆಂಬಲ್, ಎಡಪಂಥೀಯ ನ್ಯೂ ಪಾಪ್ಯುಲರ್ ಫ್ರಂಟ್ (NFP), ಮತ್ತು ಬಲಪಂಥೀಯ ನ್ಯಾಷನಲ್ ರ‍್ಯಾಲಿ (RN) ಪ್ರಾಬಲ್ಯ ಹೊಂದಿತ್ತು. ನ್ಯಾಷನಲ್ ರ‍್ಯಾಲಿ ಹೆಚ್ಚು ಸ್ಥಾನಗಳನ್ನು ಪಡೆಯಿತಾದರೂ, ಸರ್ಕಾರ ರಚಿಸಲು ಬೇಕಾದ ಬಹುಮತ ಸಾಧಿಸುವಲ್ಲಿ ವಿಫಲವಾಯಿತು. ಪ್ರಧಾನ ಮಂತ್ರಿ ಮೈಕೆಲ್ ಬಾರ್ನಿಯರ್ ಅವರ ಸರ್ಕಾರಕ್ಕೆ ಮ್ಯಾಕ್ರನ್ ಅವರ ಸೆಂಟ್ರಿಸ್ಟ್ ಕ್ಯಾಂಪ್ ಮತ್ತು ಅವರ ಸ್ವಂತ ಸಂಪ್ರದಾಯವಾದಿ ರಾಜಕೀಯ ಕುಟುಂಬದಿಂದ ಮಾತ್ರ ಬೆಂಬಲ ದೊರಕಿತ್ತು. ಮ್ಯಾಕ್ರನ್ ಅವರು ನಂತರ ಕೇಂದ್ರೀಯ ಮಿತ್ರ ಪಕ್ಷದ ಫ್ರಾಂಕೋಯಿಸ್ ಬೇರೊ ಅವರನ್ನು ಪ್ರಧಾನ ಮಂತ್ರಿಯಾಗಿ ಘೋಷಿಸಿದರು.
ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ (AP) ಯುನೈಟೆಡ್ ಕಿಂಗ್ಡಮ್:ಈ ವರ್ಷ ಯುಕೆಯಲ್ಲಿ ನಡೆದ ಸಂಸತ್ತಿನ ಚುನಾವಣೆಯಲ್ಲಿ ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಾರ್ಟಿ ಭಾರಿ ಗೆಲುವು ಸಾಧಿಸಿತು. ಜುಲೈ 4ರಂದು ನಡೆದ ಚುನಾವಣೆಯಲ್ಲಿ ಲೇಬರ್ ಪಕ್ಷ 650 ಸಂಸತ್ತಿನ ಸ್ಥಾನಗಳಲ್ಲಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ 14 ವರ್ಷಗಳ ಕನ್ಸರ್ವೇಟಿವ್ ಆಡಳಿತಕ್ಕೆ ಕೊನೆ ಹಾಡಿತು. ಈ ದಶಕದಲ್ಲೇ ಇದು ಅತಿದೊಡ್ಡ ಬಹುಮತ. ಮಾಜಿ ಪ್ರಧಾನಿ ಅವರ ಕನ್ಸರ್ವೇಟಿವ್ ಪಾರ್ಟಿ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಸೋಲನ್ನು ಕಂಡಿತು. ಕಳೆದ ಚುನಾವಣೆಗೆ ಹೋಲಿಸಿದರೆ, 224 ಸ್ಥಾನಗಳನ್ನು ಸೋತು, 121 ಸ್ಥಾನಗಳನ್ನು ಮಾತ್ರ ಉಳಿಸಿಕೊಂಡಿತು.
ಯುನೈಟೆಡ್ ಸ್ಟೇಟ್ಸ್:ಭಾರತದಲ್ಲಿ ಲೋಕಸಭೆ ಚುನಾವಣೆಯ ಹೊರತಾಗಿ, ವಿಶ್ವದ ಗಮನ ಸೆಳೆದ ಈ ವರ್ಷದ ಪ್ರಮುಖ ಚುನಾವಣೆ (ಯುಎಸ್) ಅಮೆರಿಕ ಅಧ್ಯಕ್ಷೀಯ ಚುನಾವಣೆ. ನವೆಂಬರ್ 5 ರಂದು ಚುನಾವಣೆ ನಡೆಯಿತು. ರಿಪಬ್ಲಿಕನ್ ಪಕ್ಷದ, 2017 ರಿಂದ 2021 ರವರೆಗೆ ಯುಎಸ್ ನ 45ನೇ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್, ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಅವರನ್ನು ಸೋಲಿಸಿದರು. ಟ್ರಂಪ್ ಮತ್ತು ಜೆಡಿ ವ್ಯಾನ್ಸ್ 47ನೇ ಅಧ್ಯಕ್ಷರಾಗಿ ಮತ್ತು 50ನೇ ಉಪಾಧ್ಯಕ್ಷರಾಗಿ 2025ರ ಜನವರಿ 20ರಿಂದ ಔಪಚಾರಿಕವಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ:ಲೋಕಸಭೆಯಲ್ಲಿ ಮಂಡನೆಯಾದ ಒಂದು ದೇಶ, ಒಂದು ಚುನಾವಣೆ ವಿಧೇಯಕ: ವಿಸ್ತೃತ ಚರ್ಚೆಗಾಗಿ ಜೆಪಿಸಿಗೆ ರವಾನೆ