ಕರ್ನಾಟಕ

karnataka

ETV Bharat / international

ಇಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ: ಟ್ರಂಪ್​, ಕಮಲಾರಿಂದ ಕೊನೆ ಹಂತದ ಕಸರತ್ತು - PRESIDENTIAL CAMPAIGN

ಅಮೆರಿಕ ಅಧ್ಯಕ್ಷೀಯ ಆಕಾಂಕ್ಷಿಗಳಾದ ಕಮಲಾ ಹ್ಯಾರಿಸ್​ ಮತ್ತು ಡೊನಾಲ್ಡ್​​ ಟ್ರಂಪ್​ ಮತದಾನಕ್ಕೂ ಒಂದು ದಿನ ಮೊದಲು ಭರ್ಜರಿ ಪ್ರಚಾರ ನಡೆಸಿದರು. ಪ್ರಮುಖ 7 ರಾಜ್ಯಗಳಲ್ಲಿ ರ‍್ಯಾಲಿಗಳನ್ನು ನಡೆಸಿ ಅಧಿಕಾರದ ಗದ್ದುಗೆ ಏರಲು ಹವಣಿಸುತ್ತಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆ
ಅಮೆರಿಕ ಅಧ್ಯಕ್ಷೀಯ ಚುನಾವಣೆ (ETV Bharat)

By ETV Bharat Karnataka Team

Published : Nov 4, 2024, 10:11 PM IST

Updated : Nov 5, 2024, 7:58 AM IST

ವಾಷಿಂಗ್ಟನ್ (ಅಮೆರಿಕ):ಅಮೆರಿಕ ಅಧ್ಯಕ್ಷೀಯ ಚುನಾವಣೆ ಇಂದು(ಮಂಗಳವಾರ) ನಡೆಯಲಿದ್ದು, ರಿಪಬ್ಲಿಕನ್ ಪಾರ್ಟಿ ನಾಯಕ ಡೊನಾಲ್ಡ್ ಟ್ರಂಪ್​ ಗೆಲ್ಲುತ್ತಾರಾ ಅಥವಾ ಭಾರತೀಯ ಮೂಲದವರಾದ ಡೆಮಾಕ್ರೆಟಿಕ್ ಪಾರ್ಟಿ ಅಭ್ಯರ್ಥಿ, ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಗೆಲ್ಲುತ್ತಾರಾ ಎಂಬುದು ನಿರ್ಧಾರವಾಗಲಿದೆ. ಇಬ್ಬರ ನಡುವೆ ತುರುಸಿನ ಪೈಪೋಟಿ ನಡೆದಿದೆ. ಮತದಾನಕ್ಕೆ ಒಂದು ದಿನ ಮುಂಚೆ ಉಭಯ ಸ್ಪರ್ಧಿಗಳು ಕೊನೆಯ ಹಂತದ ಬಿರುಸಿನ ಪ್ರಚಾರ ನಡೆಸಿದರು.

ಅಮೆರಿಕದಲ್ಲಿ ಬೆಳಗ್ಗೆ 7 ರಿಂದ 9 ಗಂಟೆಯ ನಡುವೆ ಮತದಾನ ಆರಂಭವಾಗಲಿದೆ. ಇದು ಭಾರತೀಯ ಕಾಲಮಾನದ ಪ್ರಕಾರ, ಸಂಜೆ 4.30 ಆಗಿರುತ್ತದೆ. ಅಲ್ಲಿ ಸಂಜೆ 6ಕ್ಕೆ ಮತದಾನ ಮುಕ್ತಾಯವಾದರೆ, ಭಾರತದಲ್ಲಿ ಬೆಳಗ್ಗೆ 4.30ರ ಸಮಯವಾಗಿರುತ್ತದೆ.

ಡೆಮಾಕ್ರಟಿಕ್​ ಪಕ್ಷದ ಅಭ್ಯರ್ಥಿಯಾದ ಕಮಲಾ ಹ್ಯಾರಿಸ್ ಅವರು ಸೋಮವಾರ ಪೂರ್ತಿ ಪೆನ್ಸಿಲ್ವೇನಿಯಾದಲ್ಲಿ ಕಳೆದರು. ಚುನಾವಣಾ ಫಲಿತಾಂಶವನ್ನು ಬದಲಿಸುವ ರಾಜ್ಯಗಳಲ್ಲಿ ಒಂದಾದ ಇಲ್ಲಿಯೇ ಅವರು ಹೆಚ್ಚು ಪ್ರಚಾರ ನಡೆಸಿದರು. ಅಲೆನ್‌ಟೌನ್ ಸೇರಿದಂತೆ ಕಾರ್ಮಿಕ ವರ್ಗದ ಪ್ರದೇಶಗಳಿಗೆ ಭೇಟಿ ನೀಡಿದರು. ಲೇಡಿ ಗಾಗಾ ಮತ್ತು ಓಪ್ರಾ ವಿನ್‌ಫ್ರೇ ಅವರನ್ನು ಒಳಗೊಂಡ ತಂಡವು ತಡರಾತ್ರಿ ಫಿಲಡೆಲ್ಫಿಯಾ ರ‍್ಯಾಲಿಯಲ್ಲಿ ಕಾಣಿಸಿಕೊಂಡರು.

ರಿಪಬ್ಲಿಕನ್​ ಪಕ್ಷದ ಸ್ಪರ್ಧಾಳುವಾದ ಡೊನಾಲ್ಡ್ ಟ್ರಂಪ್ ಉತ್ತರ ಕೆರೊಲಿನಾ, ಪೆನ್ಸಿಲ್ವೇನಿಯಾ, ಪಿಟ್ಸ್‌ಬರ್ಗ್‌ನಲ್ಲಿ ರ‍್ಯಾಲಿಗಳನ್ನು ಹಮ್ಮಿಕೊಂಡರು. ಮಾಜಿ ಅಧ್ಯಕ್ಷರು ಮಿಚಿಗನ್‌ನ ಗ್ರ್ಯಾಂಡ್ ರಾಪಿಡ್ಸ್‌ನಲ್ಲಿ ಸೋಮವಾರ ತಡರಾತ್ರಿ ಕಾರ್ಯಕ್ರಮದೊಂದಿಗೆ ತಮ್ಮ ಪ್ರಚಾರ ಕೊನೆಗೊಳಿಸಲಿದ್ದಾರೆ. ಸುಮಾರು 77 ಮಿಲಿಯನ್ ಅಮೆರಿಕನ್ನರು ಈಗಾಗಲೇ ಮೊದಲೇ ಮತ ಚಲಾಯಿಸಿದ್ದಾರೆ.

ಚುನಾವಣೆಯಲ್ಲಿ ಟ್ರಂಪ್ ಗೆಲುವು ಸಾಧಿಸಿದಲ್ಲಿ ಹಲವು ಪ್ರಕರಣಗಳಲ್ಲಿ ದೋಷಾರೋಪ ಹೊತ್ತು ಅಧ್ಯಕ್ಷರಾದ ಮೊದಲಿಗ ಎನ್ನಿಸಿಕೊಳ್ಳಲಿದ್ದಾರೆ. ಈ ಮೂಲಕ ತನ್ನ ಮೇಲಿನ ಬಾಕಿ ಕೇಸ್​ಗಳನ್ನು ಕೊನೆಗೊಳಿಸುವ ಅಧಿಕಾರವನ್ನೂ ಪಡೆಯಲಿದ್ದಾರೆ. ಕಮಲಾ ಅವರು ಗೆಲುವು ಸಾಧಿಸಿದಲ್ಲಿ ಮೊದಲ ಕಪ್ಪು ಮಹಿಳೆ ಮತ್ತು ದಕ್ಷಿಣ ಏಷ್ಯಾ ಮೂಲದ ಮೊದಲ ವ್ಯಕ್ತಿಯಾಗಲಿದ್ದಾರೆ.

ಅಧ್ಯಕ್ಷರನ್ನು ಜನರು ಆರಿಸುವುದಿಲ್ಲ:ಅಮೆರಿಕದ ಅಧ್ಯಕ್ಷೀಯ ಚುನಾವಣೆ ಇತರ ದೇಶಗಳಿಂದ ವಿಭಿನ್ನವಾಗಿದೆ. ಇಲ್ಲಿ 50 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು 538 ಎಲೆಕ್ಟರ್ಸ್‌ ಚುನಾಯಿತರಾಗುತ್ತಾರೆ. ಪ್ರತಿ ರಾಜ್ಯದಿಂದ ಆಯ್ಕೆಯಾದ ಎಲೆಕ್ಟರ್ಸ್‌ ಸಂಖ್ಯೆ ಭಿನ್ನವಾಗಿರುತ್ತದೆ. ಸಾಮಾನ್ಯವಾಗಿ, ಹೆಚ್ಚು ಮತಗಳನ್ನು ಪಡೆದ ಅಭ್ಯರ್ಥಿಗಳಿಗೆ ಆಯಾ ರಾಜ್ಯದ ಅಧಿಕಾರ ಲಭಿಸುತ್ತದೆ. 54 ಸ್ಥಾನಗಳನ್ನು ಹೊಂದಿರುವ ಕ್ಯಾಲಿಫೋರ್ನಿಯಾ ಜನಸಂಖ್ಯಾ ದೃಷ್ಟಿಯಲ್ಲಿ ದೊಡ್ಡ ರಾಜ್ಯವಾಗಿದೆ. ಈ ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆದ್ದವರು ಸಂಪೂರ್ಣ 54 ಸ್ಥಾನಗಳಲ್ಲೂ ವಿಜಯಿಶಾಲಿಗಳಾಗಲಿದ್ದಾರೆ. ಇದನ್ನು ‘ವಿನ್ನರ್‌ಟೇಕ್ಸ್‌ ಆಲ್‌’ ನಿಯಮ ಎಂದು ಕರೆಯಲಾಗುತ್ತದೆ. ಉದಾಹರಣೆಗೆ ಕಮಲಾ ಹ್ಯಾರಿಸ್‌ 34 ಸ್ಥಾನ ಗೆದ್ದು ಡೊನಾಲ್ಡ್‌ ಟ್ರಂಪ್‌ 20 ಜಯಿಸಿದರೆ, ಎಲ್ಲ 54 ಸ್ಥಾನಗಳು ಕಮಲಾ ಹ್ಯಾರಿಸ್‌ ಪಾಲಾಗುತ್ತದೆ. ಈ ಕಾರಣದಿಂದ 2016ರ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್‌ಗಿಂತ 28.6 ಲಕ್ಷ ಕಡಿಮೆ ಮತಗಳನ್ನು ಪಡೆದರೂ ಡೊನಾಲ್ಡ್ ಟ್ರಂಪ್‌ ಅಧ್ಯಕ್ಷರಾಗಿದ್ದರು.

ಮಂಗಳವಾರವೇ ಏಕೆ ಮತದಾನ:ಅಮೆರಿಕದ ಚುನಾವಣಾ ಮತದಾನ ಮಂಗಳವಾರವೇ ನಡೆಯುತ್ತದೆ. ಇದಕ್ಕೆ ತನ್ನದೇ ಆದ ಇತಿಹಾಸವಿದೆ. ಅಮೆರಿಕದಲ್ಲಿ ಪ್ರತಿ 4 ವರ್ಷಗಳಿಗೊಮ್ಮೆ ಅಧ್ಯಕ್ಷೀಯ ಚುನಾವಣೆ ನಡೆಯುತ್ತದೆ. ಅದೂ ನವೆಂಬರ್‌ನ ಮೊದಲ ಮಂಗಳವಾರ. ಈ ಕಾನೂನನ್ನು 1845ರಲ್ಲಿ ಜಾರಿಗೊಳಿಸಲಾಯಿತು. 180 ವರ್ಷಗಳ ಹಿಂದೆ ಅಮೆರಿಕ ಬಹುತೇಕ ಕೃಷಿ ಪ್ರಧಾನ ರಾಷ್ಟ್ರವಾಗಿತ್ತು. ನವೆಂಬರ್‌ ಆರಂಭದ ದಿನಗಳಲ್ಲಿ ರೈತರಿಗೆ ಕೃಷಿ ಕೆಲಸಗಳು ಇರುತ್ತಿದ್ದವು. ಕ್ರಿಶ್ಚಿಯನ್ನರು ಭಾನುವಾರದಂದು ಚರ್ಚ್‌ಗೆ ಹೋಗುತ್ತಿದ್ದರು. ಬುಧವಾರ ಹಲವೆಡೆ ಸಂತೆಗಳು ನಡೆಯುತ್ತಿದ್ದವು. ಅಲ್ಲಿಂದ ಬರಲು ಒಂದು ದಿನ ಹಿಡಿಯುತ್ತಿತ್ತು. ಹೀಗಾಗಿ ಸೋಮವಾರ ಮತ್ತು ಬುಧವಾರ ಮತದಾನ ನಡೆಸುತ್ತಿರಲಿಲ್ಲ. ಇದರ ಮಧ್ಯದ ದಿನವಾದ ಮಂಗಳವಾರವನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಅಂದಿನಿಂದ ಇದು ಹಾಗೆಯೇ ಮುಂದುವರೆದಿದೆ.

ಇದನ್ನೂ ಓದಿ:ಅಮೆರಿಕ ಮತದಾರರಿಂದ ಏನನ್ನು ನಿರೀಕ್ಷಿಸಬಹುದು: ಏನಾಗಲಿದೆ ಫಲಿತಾಂಶ?

Last Updated : Nov 5, 2024, 7:58 AM IST

ABOUT THE AUTHOR

...view details