ವಾಷಿಂಗ್ಟನ್: ಖಲಿಸ್ತಾನಿ ಹೋರಾಟಗಾರ ಗುರುಪತ್ವಂತ್ ಸಿಂಗ್ ಪನ್ನು ಹತ್ಯೆ ಯತ್ನದಲ್ಲಿ ಭಾರತ ಸರ್ಕಾರದ ಮಾಜಿ ಅಧಿಕಾರಿಯ ಪಾತ್ರವಿದೆ ಎಂದು ಅಮೆರಿಕದ ಅಧಿಕಾರಿಗಳು ಆರೋಪಿಸಿದ್ದಾರೆ.
ನ್ಯೂಯಾರ್ಕ್ ನ್ಯಾಯಾಲಯದಲ್ಲಿ ಈ ಕುರಿತು ಗುರುವಾರ ದೋಷರೋಪಣಾ ಪಟ್ಟಿ ಸಲ್ಲಿಸಲಾಗಿದೆ.
ಭಾರತದ ಕ್ಯಾಬಿನೆಟ್ ಸೆಕ್ರೆಟಿರಿಯೇಟ್ ಉದ್ಯೋಗಿ ವಿಕಾಸ್ ಯಾದವ್ (39) ಎಂಬವರು ಭಾರತದ ವಿದೇಶಿ ಗುಪ್ತಚರ ಸಂಸ್ಥೆ 'ರಾ' (RAW) ಸೇವೆಗೆ ನಿಯೋಜನೆಗೊಂಡಿದ್ದರು ಎಂದು ಫೆಡರಲ್ ಪ್ರಾಸಿಕ್ಯೂಷನ್ ಆರೋಪಿಸಿದೆ. ಯಾದವ್ ಅವರ ಮೇಲೆ ಪನ್ನು ಹತ್ಯೆಗೆ ಯೋಜನೆ ರೂಪಿಸಿ ಹಣ ನೀಡಿ ಹಂತಕರ ನೇಮಿಸಿರುವುದು ಮತ್ತು ಅಕ್ರಮ ಹಣ ವರ್ಗಾವಣೆ ಆರೋಪಗಳ ಕುರಿತು ಪ್ರಕರಣ ದಾಖಲಿಸಲಾಗಿದೆ.
ಈ ಪಿತೂರಿಯಲ್ಲಿ ಯಾದವ್ ಅವರನ್ನು ಸಿಸಿ-1 (ಸಹ ಪಿತೂರಿ)ಯಾಗಿ ಗುರುತಿಸಲಾಗಿದೆ. ಅಮೆರಿಕದ ಈ ಆರೋಪಕ್ಕೆ ಭಾರತ ವಿದೇಶಾಂಗ ಇಲಾಖೆಯ ವಕ್ತಾರ ರಂದೀರ್ ಜೈಸ್ವಾಲ್ ಪ್ರತಿಕ್ರಿಯಿಸಿದ್ದು, ಯಾದವ್ ಭಾರತ ಸರ್ಕಾರದ ಉದ್ಯೋಗಿಯಾಗಿಲ್ಲ ಎಂದು ದೃಢಪಡಿಸಿದ್ದಾರೆ.
ಅಮೆರಿಕದ ಅಟಾರ್ನಿ ಜನರಲ್ ಮೆರ್ರಿಕ್ ಬಿ ಗಾರ್ಲಂಡ್ ಪ್ರತಿಕ್ರಿಯಿಸಿ, ಅಮೆರಿಕನ್ನರನ್ನು ಗುರಿಯಾಗಿಸಿ ಈ ರೀತಿ ಪ್ರಯತ್ನ ನಡೆಸುವುದನ್ನು ನ್ಯಾಯಾಲಯ ಸಹಿಸುವುದಿಲ್ಲ. ಅಮೆರಿಕ ಪ್ರಜೆಗಳ ಹಕ್ಕನ್ನು ನಾವು ದುರ್ಬಲಗೊಳಿಸುವುದಿಲ್ಲ ಎಂದಿದ್ದಾರೆ.
ಆದರೆ, ಅಮೆರಿಕದ ನೆಲದಲ್ಲಿ ಅಲ್ಲಿನ ಪ್ರಜೆಯನ್ನು ಕೊಲ್ಲುವ ಯತ್ನದಲ್ಲಿ ಭಾಗಿಯಾಗಿರುವ ವಾದವನ್ನು ಭಾರತ ಅಲ್ಲಗಳೆದಿದೆ.
ಇದನ್ನೂ ಓದಿ: ಖಲಿಸ್ತಾನಿ ಉಗ್ರ ಪನ್ನುನ್ ಹತ್ಯೆ ಯತ್ನ ಪ್ರಕರಣ: ಅಮೆರಿಕದ ಮಾಹಿತಿಗಳನ್ನು ಗಂಭೀರವಾಗಿ ತೆಗೆದುಕೊಂಡ ಭಾರತ