ವಾಷಿಂಗ್ಟನ್(ಅಮೆರಿಕ):ಅಮೆರಿಕದ ಸೆನೆಟರ್ (ಸಂಸದೆ) ತುಳಸಿ ಗಬ್ಬಾರ್ಡ್ ಅವರು 18 ಭದ್ರತಾ ಸಂಸ್ಥೆಗಳ ಮೇಲ್ವಿಚಾರಕ ಸಂಸ್ಥೆಯಾದ 'ರಾಷ್ಟ್ರೀಯ ಗುಪ್ತಚರ ವಿಭಾಗ'ದ ನಿರ್ದೇಶಕಿಯಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದರು. ಈ ಮೂಲಕ ವಿಶ್ವದ ಅತಿ ಬಲಿಷ್ಠ ದಳದ ನೇತೃತ್ವ ವಹಿಸಿದ ಮೊದಲ ಹಿಂದು ನಾಯಕಿ ಎಂಬ ಗರಿಮೆಗೂ ಪಾತ್ರರಾದರು.
ಗುಪ್ತಚರ ದಳದ ಮುಖ್ಯಸ್ಥೆಯಾಗಿ ತುಳಸಿ ಗಬ್ಬಾರ್ಡ್ ಅವರನ್ನು ಶ್ವೇತಭವನ ಅಂಗೀಕರಿಸಿತು. ಇದರ ಬೆನ್ನಲ್ಲೇ, ಅವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮ್ಮುಖದಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ. ಯುಎಸ್ ಅಟಾರ್ನಿ ಜನರಲ್ ಪ್ಯಾಮ್ ಗೊಂಡಿ ಅವರು ಇಲ್ಲಿನ ಓವಲ್ ಕಚೇರಿಯಲ್ಲಿ ಗಬ್ಬಾರ್ಡ್‌ಗೆ ಪ್ರಮಾಣ ಬೋಧಿಸಿದರು.
ಗಬ್ಬಾರ್ಡ್ ಪ್ರಮಾಣ ಸ್ವೀಕಾರ ಕಾರ್ಯಕ್ರಮದ ವಿಡಿಯೋವನ್ನು ಶ್ವೇತಭವನ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. "ಓವಲ್ ಕಚೇರಿಯಲ್ಲಿ ಅಟಾರ್ನಿ ಜನರಲ್ ಪಾಮ್ ಬೋಂಡಿ ಅವರಿಂದ ತುಳಸಿ ಗಬ್ಬಾರ್ಡ್ ಅಧಿಕೃತವಾಗಿ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಮೆರಿಕ ಮತ್ತೆ ಸುರಕ್ಷಿತವಾಗಿರಲಿದೆ" ಎಂದು ಹೇಳಿದೆ.
ಗಬ್ಬಾರ್ಡ್ ನೇಮಕಕ್ಕೆ ವಿರೋಧ:43 ವರ್ಷದ ತುಳಸಿ ಗಬ್ಬಾರ್ಡ್ ಅವರನ್ನು ಕೇಂದ್ರ ಗುಪ್ತಚರ ಸಂಸ್ಥೆ (CIA), ರಾಷ್ಟ್ರೀಯ ಭದ್ರತಾ ಸಂಸ್ಥೆ (NSA) ಮತ್ತು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI) ಸೇರಿದಂತೆ 18 ಸಂಸ್ಥೆಗಳನ್ನು ಒಳಗೊಂಡಿರುವ ರಾಷ್ಟ್ರೀಯ ಗುಪ್ತಚರ ವಿಭಾಗಕ್ಕೆ ಮುಖ್ಯಸ್ಥರನ್ನಾಗಿ ನೇಮಿಸುವುದಕ್ಕೆ ವಿಪಕ್ಷ ಡೆಮಾಕ್ರಟಿಕ್ನಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.