ಕರ್ನಾಟಕ

karnataka

ETV Bharat / international

ಇರಾನ್​ ಮೇಲೆ ಆರ್ಥಿಕ ಒತ್ತಡ, ಮಾನವ ಹಕ್ಕುಗಳ ಮಂಡಳಿಯಿಂದ ಅಮೆರಿಕ ಹೊರಕ್ಕೆ ಟ್ರಂಪ್​ ಆದೇಶ - DONALD TRUMP ORDERS

ಅಮೆರಿಕವನ್ನು ಡಬ್ಲ್ಯೂಎಚ್​​ಒದಿಂದ ಹೊರತಂದಿದ್ದ ಟ್ರಂಪ್​ ಇದೀಗ, ವಿಶ್ವವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದಲೂ ಹಿಂತೆಗೆದುಕೊಂಡಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​
ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ (ANI)

By ETV Bharat Karnataka Team

Published : Feb 5, 2025, 6:46 AM IST

ವಾಷಿಂಗ್ಟನ್ ಡಿಸಿ (ಅಮೆರಿಕ) :'ಅಮೆರಿಕ ಮೊದಲು' ಎಂಬ ತಮ್ಮ ಘೋಷಣೆಯ ಭಾಗವಾಗಿ ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆಯಿಂದ (ಡಬ್ಲ್ಯೂಎಚ್​​ಒ) ಹೊರಬಂದಿದ್ದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮತ್ತೊಂದು ಮಹತ್ವದ ನಿರ್ಧಾರಕ್ಕೆ ಸಹಿ ಹಾಕಿದ್ದಾರೆ.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ಹೊರಕ್ಕೆ, ಪ್ಯಾಲೆಸ್ಟೈನ್​ ನಿರಾಶ್ರಿತರ ಪರಿಹಾರ ಕಾರ್ಯಗಳಿಗೆ ನೀಡುತ್ತಿರುವ ಹಣ ಕಡಿತ ಮತ್ತು ಪರಮಾಣು ಒಪ್ಪಂದದಿಂದ ಹಿಂದೆ ಸರಿದಿರುವ ಇರಾನ್​ ಮೇಲೆ ಆರ್ಥಿಕ ಒತ್ತಡ ಹೇರುವ ಕಾರ್ಯಕಾರಿ ಆದೇಶಕ್ಕೆ ಟ್ರಂಪ್​ ಅಸ್ತು ಎಂದಿದ್ದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಈ ಬಗ್ಗೆ ಹೇಳಿಕೆ ನೀಡಿರುವ ಟ್ರಂಪ್​, "ಇರಾನ್​ ಮೇಲೆ ಒತ್ತಡ ಹೇರುವ ಬಗ್ಗೆ ಕಠಿಣ ನಿರ್ಧಾರ ಕೈಗೊಂಡಿದ್ದೇವೆ. ಇದು ಕಷ್ಟವಾದರೂ ಮತ್ತು ಇಷ್ಟವಿಲ್ಲದಿದ್ದರೂ ಆದೇಶ ಹೊರಡಿಸಿದ್ದೇನೆ. ಆದಾಗ್ಯೂ ಕಾಲ ನಿರ್ಣಯದಂತೆ ಕ್ರಮ ವಹಿಸಬೇಕಾಗಿದೆ" ಎಂದಿದ್ದಾರೆ.

ಇರಾನ್​ ಮೇಲೆ ಯುಎಸ್​​ ಪ್ರಹಾರ:ಇರಾನ್​ನ ತೈಲ ರಫ್ತಿನ ಮೇಲೆ ಹೆಚ್ಚಿನ ಸುಂಕ ಸೇರಿದಂತೆ ಗರಿಷ್ಠ ಪ್ರಮಾಣದಲ್ಲಿ ಆರ್ಥಿಕ ನಿರ್ಬಂಧಗಳನ್ನು ವಿಧಿಸಲು ಟ್ರಂಪ್​ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಖಜಾನೆ ಇಲಾಖೆಗೆ ನಿರ್ದೇಶನ ನೀಡಲಾಗಿದೆ.

ಮುಸ್ಲಿಂ ರಾಷ್ಟ್ರದ ಮೇಲೆ ಕ್ರಮಕ್ಕೆ ಅಮೆರಿಕದ ಹಲವು ಸೆನೆಟರ್​ಗಳು ಕೂಡ ಒತ್ತಾಯಿಸಿದ್ದಾರೆ. ಪರಮಾಣು ಬೆದರಿಕೆ ಹಾಕುತ್ತಿರುವ ಇರಾನ್ ​ಮೇಲೆ ನಿಯಂತ್ರಣ ಅಗತ್ಯವಿದೆ ಎಂದು ಸೆನೆಟರ್‌ಗಳಾದ ಲಿಂಡ್ಸೆ ಗ್ರಹಾಂ, ಆರ್-ಎಸ್​ಸಿ, ಜಾನ್ ಫೆಟರ್‌ಮ್ಯಾನ್, ಡಿ-ಪೆನ್ ಮತ್ತಿತರರು ನಿರ್ಣಯ ಮಂಡಿಸಿದ್ದಾರೆ.

ಪ್ಯಾಲೆಸ್ಟೈನ್​ಗೆ ಹಣ ಕಡಿತ:ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಡಬ್ಲ್ಯೂಎಚ್​​ಒದಿಂದ ಹಿಂದೆ ಸರಿಯುವ ಆದೇಶ ಹೊರಡಿಸಿದ್ದ ಟ್ರಂಪ್​, ಇದೀಗ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದಲೂ ಅಮೆರಿಕವನ್ನು ಹೊರತರುವ ಫರ್ಮಾನು ಹೊರಡಿಸಿದ್ದಾರೆ.

ಇದರ ಜೊತೆಗೆ, ಇಸ್ರೇಲ್​ ದಾಳಿಯಿಂದಾಗಿ ಕಂಗೆಟ್ಟಿರುವ ಪ್ಯಾಲೆಸ್ಟೈನ್ ನಿರಾಶ್ರಿತರಿಗಾಗಿ ವಿಶ್ವಸಂಸ್ಥೆಯ ಪರಿಹಾರ ಮತ್ತು ಕಾರ್ಯ ಸಂಸ್ಥೆ (ಯುಎನ್‌ಆರ್‌ಡಬ್ಲ್ಯೂಎ) ಗೆ ನೀಡುವ ಹಣವನ್ನೂ ಕಡಿತಗೊಳಿಸುವ ಆದೇಶಕ್ಕೂ ಸಹಿ ಹಾಕಿದ್ದಾರೆ.

ಓದಿ: WHO ನಿಂದ ಅಮೆರಿಕ ಹೊರಗೆ ಸೇರಿ ಮೊದಲ ದಿನವೇ ಹಲವು ಯೋಜನೆಗಳಿಗೆ ಟ್ರಂಪ್​ ಸಹಿ

ABOUT THE AUTHOR

...view details