ವಾಷಿಂಗ್ಟನ್, ಅಮೆರಿಕ:ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಚುನಾವಣಾ ಹಸ್ತಕ್ಷೇಪದ ವಿಚಾರಣೆಗೆ ಇನ್ನಷ್ಟು ದಿನಗಳ ಕಾಲ ಮುಂದೂಡಿಕೆ ಮಾಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ. 2020ರ ಚುನಾವಣಾ ಫಲಿತಾಂಶವನ್ನು ರದ್ದುಗೊಳಿಸಲು ಸಂಚು ರೂಪಿಸಿದ ಆರೋಪದ ಮೇಲೆ ಕಾನೂನು ಕ್ರಮದಿಂದ ನಾನು ಮುಕ್ತನಾಗಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಅಮೆರಿಕ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ನ್ಯಾಯಾಲಯದಿಂದ ದೊಡ್ಡ ಹಿನ್ನಡೆಯಾಗಿತ್ತು. ಟ್ರಂಪ್ ಅವರು ಚುನಾವಣಾ ಫಲಿತಾಂಶಗಳನ್ನು ತಡೆ ಹಿಡಿಯಲು ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಲಾಗಿರುವ 2020 ರ ಪ್ರಕರಣದಲ್ಲಿ ಹೂಡಲಾಗಿರುವ ಮೊಕದ್ದಮೆಯಿಂದ ವಿನಾಯಿತಿ ನೀಡಲಾಗುವುದಿಲ್ಲ ಎಂದು ವಾಷಿಂಗ್ಟನ್ನ ಫೆಡರಲ್ ಮೇಲ್ಮನವಿ ನ್ಯಾಯಾಲಯವು ಹೇಳಿತ್ತು. ಈ ಹಿನ್ನೆಲೆ ಟ್ರಂಪ್ ನ್ಯಾಯಾಲಯಕ್ಕೆ ತುರ್ತು ಮೇಲ್ಮನವಿ ಸಲ್ಲಿಸಿದ್ದಾರೆ.
ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ ಸರ್ಕ್ಯೂಟ್ ಕೋರ್ಟ್‌ನ ತ್ರಿಸದಸ್ಯ ನ್ಯಾಯಾಧೀಶರ ಸಮಿತಿಯು ಟ್ರಂಪ್ ಅವರ ಹೇಳಿಕೆಯನ್ನು ತಿರಸ್ಕರಿಸಿತ್ತು. ಏಕೆಂದರೆ ಆರೋಪಗಳು ಅಧ್ಯಕ್ಷರಾಗಿ ಅವರ ಅಧಿಕೃತ ಜವಾಬ್ದಾರಿಗಳಿಗೆ ಸಂಬಂಧಿಸಿವೆ ಎಂದು ಅಭಿಪ್ರಾಯಪಟ್ಟಿತ್ತು. ಈ ಕ್ರಿಮಿನಲ್ ಪ್ರಕರಣದಲ್ಲಿ ಮಾಜಿ ರಾಷ್ಟ್ರಪತಿ ಯಾವುದೇ ಬೆಲೆ ತೆತ್ತಾದರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ನಿಗದಿತ ನಿಯಮಗಳ ಅಡಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದೂ ಹೇಳಿತ್ತು.
2020 ರ ಅಮೆರಿಕದ ಚುನಾವಣೆಯ ಫಲಿತಾಂಶಗಳನ್ನು ರದ್ದುಗೊಳಿಸುವ ಟ್ರಂಪ್ ಅವರ ಪ್ರಯತ್ನಗಳನ್ನು ತನಿಖೆಗೆ ಒಳಪಡಿಸುವಂತೆ ಕೋರಲಾಗಿತ್ತು. ಟ್ರಂಪ್ ವಿರುದ್ಧ ಅಮೆರಿಕಕ್ಕೆ ವಂಚನೆ, ಅಧಿಕೃತ ಪ್ರಕ್ರಿಯೆಗೆ ಅಡ್ಡಿಪಡಿಸುವ ಯತ್ನ, ಹಕ್ಕುಗಳ ವಿರುದ್ಧ ತಡೆ ಮತ್ತು ಪಿತೂರಿ ನಡೆಸಿದ್ದಾರೆ ಎಂಬ ನಾಲ್ಕು ಆರೋಪಗಳನ್ನು ಹೊರಿಸಲಾಗಿದೆ.
ಓದಿ:ಭಾರತೀಯ ನೌಕಾಪಡೆ ಮಾಜಿ ಸಿಬ್ಬಂದಿ ಬಿಡುಗಡೆ ಬೆನ್ನಲ್ಲೇ ಫೆ.14ರಂದು ಮೋದಿ ಕತಾರ್ ಭೇಟಿ