ಕರ್ನಾಟಕ

karnataka

ETV Bharat / international

ಜೆಡ್ಡಾ ಶಾಂತಿ ಮಾತುಕತೆಯಲ್ಲಿ ಭಾಗವಹಿಸಲ್ಲ ಎಂದ ಸುಡಾನ್: ಅಮೆರಿಕದ ಆಹ್ವಾನ ತಿರಸ್ಕಾರ - Sudan Peace Talks - SUDAN PEACE TALKS

ಸುಡಾನ್​ನಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಕೊನೆಗಾಣಿಸಲು ಶಾಂತಿ ಮಾತುಕತೆಗಳಲ್ಲಿ ಪಾಲ್ಗೊಳ್ಳುವಂತೆ ಅಮೆರಿಕ ನೀಡಿದ ಆಹ್ವಾನವನ್ನು ಸುಡಾನ್ ಸರ್ಕಾರ ತಿರಸ್ಕರಿಸಿದೆ.

Sudan rejects US calls to return to Jeddah negotiations
Sudan rejects US calls to return to Jeddah negotiations (IANS image)

By ETV Bharat Karnataka Team

Published : May 30, 2024, 2:56 PM IST

ಖಾರ್ಟೂಮ್ : ಸುಡಾನ್ ಸಶಸ್ತ್ರ ಪಡೆಗಳು (ಎಸ್ಎಎಫ್) ಮತ್ತು ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆಗಳ (ಆರ್​ಎಸ್ಎಫ್) ನಡುವೆ ನಡೆಯುತ್ತಿರುವ ಹೋರಾಟದ ಕದನ ವಿರಾಮ ಮಾತುಕತೆಗಳಲ್ಲಿ ಭಾಗವಹಿಸುವಂತೆ ಅಮೆರಿಕ ನೀಡಿದ ಆಹ್ವಾನವನ್ನು ಸುಡಾನ್ ಸರ್ಕಾರ ತಿರಸ್ಕರಿಸಿದೆ.

"ಜೆಡ್ಡಾ ಶಾಂತಿ ಮಾತುಕತೆಗಳಲ್ಲಿ ಭಾಗವಹಿಸುವಂತೆ ಸುಡಾನ್ ನ ಟ್ರಾನ್ಸಿಷನಲ್ ಸಾರ್ವಭೌಮ ಮಂಡಳಿಯ ಅಧ್ಯಕ್ಷ ಅಬ್ದೆಲ್ ಫತಾಹ್ ಅಲ್-ಬುರ್ಹಾನ್ ಅವರಿಗೆ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಥೋನಿ ಬ್ಲಿಂಕೆನ್ ನೀಡಿದ ಆಹ್ವಾನವು ಸುಡಾನ್ ಬಗ್ಗೆ ತಿರಸ್ಕಾರದ ಭಾವನೆಯನ್ನು ಹೊಂದಿರುವುದರಿಂದ ಅದನ್ನು ಒಪ್ಪಿಕೊಳ್ಳಲಾಗುತ್ತಿಲ್ಲ" ಎಂದು ಸುಡಾನ್​ನ ಟ್ರಾನ್ಸಿಷನಲ್ ಸಾರ್ವಭೌಮ ಮಂಡಳಿಯ ಉಪಾಧ್ಯಕ್ಷ ಮಲಿಕ್ ಅಗರ್ ಬುಧವಾರ ಹೇಳಿದ್ದಾರೆ.

ಪೂರ್ವ ಸುಡಾನ್​ನ ರಾಜಧಾನಿ ಪೋರ್ಟ್ ಸುಡಾನ್​ನಲ್ಲಿ ರಾಜಕೀಯ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. "ಸುಡಾನ್ ಜೆಡ್ಡಾ ಮಾತುಕತೆಗಳಲ್ಲಿ ಭಾಗವಹಿಸುತ್ತಿಲ್ಲ. ಆದರೆ, ಹಾಗಂತ ನಾವು ಶಾಂತಿಯನ್ನು ಬಯಸುತ್ತಿಲ್ಲ ಎಂದರ್ಥವಲ್ಲ. ಆದರೆ, ಶಾಂತಿ ಮಾತುಕತೆಗಳಿಗೆ ಅಡಿಪಾಯ ಇರಬೇಕು. ನಮ್ಮೊಂದಿಗೆ ಯಾವುದೇ ಸಮಾಲೋಚನೆ ಇಲ್ಲದೇ ನಡೆಸಲಾಗುತ್ತಿರುವ ಶಾಂತಿ ಸಂಧಾನದಲ್ಲಿ ಭಾಗವಹಿಸಲು ನಾವು ಒಪ್ಪುವುದಿಲ್ಲ" ಎಂದು ಅಗರ್ ಹೇಳಿದರು.

ಪ್ರಸ್ತುತ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಹಸ್ತಕ್ಷೇಪದಿಂದ ಯಾವುದೇ ಲಾಭವಾಗದು. ಸುಡಾನ್​ ಒಳಗೆ ಆಂತರಿಕವಾಗಿ ಮಾತುಕತೆಯ ಮೂಲಕ ರಾಷ್ಟ್ರೀಯ ಒಮ್ಮತ ಸಾಧಿಸಬೇಕಿದೆ ಮತ್ತು ಸಂಘರ್ಷವನ್ನು ಕೊನೆಗೊಳಿಸಿ ಸ್ಥಿರತೆಯನ್ನು ಸಾಧಿಸಲು ಆದ್ಯತೆ ನೀಡಬೇಕು ಎಂದು ಅವರು ಒತ್ತಿ ಹೇಳಿದರು. ಇದಕ್ಕೂ ಮೊದಲು ಬ್ಲಿಂಕೆನ್ ಮತ್ತು ಅಲ್-ಬುರ್ಹಾನ್ ಮಧ್ಯೆ ದೂರವಾಣಿ ಸಂಭಾಷಣೆ ನಡೆಯಿತು. ಸುಡಾನ್​ನಲ್ಲಿ ಸಂಘರ್ಷವನ್ನು ಕೊನೆಗೊಳಿಸಲು ಜೆಡ್ಡಾದಲ್ಲಿ ನಡೆಯುವ ಸಂಧಾನ ಮಾತುಕತೆಗಳಲ್ಲಿ ಭಾಗವಹಿಸುವಂತೆ ಬ್ಲಿಂಕೆನ್ ಆಹ್ವಾನ ನೀಡಿದರು ಎಂದು ಸಾರ್ವಭೌಮ ಮಂಡಳಿಯ ಹೇಳಿಕೆ ತಿಳಿಸಿದೆ.

ಮೇ 6, 2023 ರಂದು ಸೌದಿ ಅರೇಬಿಯಾ ಮತ್ತು ಯುಎಸ್ ಸುಡಾನ್​ನಲ್ಲಿನ ಹೋರಾಟವನ್ನು ಕೊನೆಗೊಳಿಸುವ ಮೊದಲ ಗಂಭೀರ ಪ್ರಯತ್ನವಾಗಿ ಜೆಡ್ಡಾದಲ್ಲಿ ಶಾಂತಿ ಮಾತುಕತೆಗಳ ಪ್ರಸ್ತಾಪವನ್ನು ಮುಂದಿಟ್ಟವು. ಇದನ್ನು ನಂತರ ಜೆಡ್ಡಾ ಸಮಾಲೋಚನಾ ವೇದಿಕೆ ಎಂದು ಕರೆಯಲಾಯಿತು. ಆದರೆ ಯುದ್ಧದಲ್ಲಿ ನಿರತವಾಗಿರುವ ಗುಂಪುಗಳ ನಡುವಿನ ಮೂಲಭೂತ ಭಿನ್ನಾಭಿಪ್ರಾಯಗಳಿಂದಾಗಿ ಕಳೆದ ಡಿಸೆಂಬರ್ ನಲ್ಲಿ ಜೆಡ್ಡಾ ಮಾತುಕತೆಗಳನ್ನು ಸ್ಥಗಿತಗೊಳಿಸಲಾಗಿತ್ತು.

ಸುಡಾನ್​ನಲ್ಲಿ 2023 ರ ಏಪ್ರಿಲ್ 15 ರಿಂದ ಎಸ್ಎಎಫ್ ಮತ್ತು ಆರ್​ಎಸ್ಎಫ್ ಭೀಕರ ಸಂಘರ್ಷ ನಡೆಯುತ್ತಿದೆ. ಸಂಘರ್ಷದಲ್ಲಿ ಈವರೆಗೆ 15,550 ಜನ ಸಾವಿಗೀಡಾಗಿದ್ದು, 8.8 ಮಿಲಿಯನ್ ಜನ ಸ್ಥಳಾಂತರಗೊಂಡಿದ್ದಾರೆ ಎಂದು ಯುಎನ್ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿಯ ಇತ್ತೀಚಿನ ಅಂದಾಜುಗಳು ತಿಳಿಸಿವೆ.

ಇದನ್ನೂ ಓದಿ : ಗಾಜಾ-ಈಜಿಪ್ಟ್​ ಗಡಿಮಾರ್ಗದ ನಿಯಂತ್ರಣ ಪಡೆದ ಐಡಿಎಫ್: 20 ಸುರಂಗ ಪತ್ತೆ - IDF Control Gaza Egypt Border

ABOUT THE AUTHOR

...view details