ಹೂಸ್ಟನ್ (ಅಮೆರಿಕ):ಟೆಕ್ಸಾಸ್‌ನ ಹೂಸ್ಟನ್‌ನಲ್ಲಿರುವ ಚರ್ಚ್ವೊಂದರಲ್ಲಿ ಮಹಿಳೆಯೊಬ್ಬರು ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಮಗು ಮತ್ತು ವೃದ್ಧ ತೀವ್ರವಾಗಿ ಗಾಯಗೊಂಡಿದ್ದಾರೆ.
ಭಾನುವಾರ ಮಧ್ಯಾಹ್ನ 1.50 ರ ಸುಮಾರಿಗೆ ಆರೋಪಿ ಸುಮಾರು 30 ವರ್ಷದ ಮಹಿಳೆ ಉದ್ದವಾದ ಟ್ರೆಂಚ್ ಕೋಟ್ ಧರಿಸಿ ರೈಫಲ್ ಮತ್ತು ಐದು ವರ್ಷದ ಹುಡುಗನೊಂದಿಗೆ ಚರ್ಚ್‌ಗೆ ಪ್ರವೇಶಿಸಿದ್ದಳು. ಬಳಿಕ ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಜನರ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದ್ದಾಳೆ. ಈ ವೇಳೆ ಚರ್ಚ್‌ನಲ್ಲಿ ಕಾರ್ಯನಿರ್ವಹಿಸುವ ಇಬ್ಬರು ಭದ್ರತಾ ಸಿಬ್ಬಂದಿ ಆರೋಪಿ ಮಹಿಳಾ ಶೂಟರ್ನನ್ನು ಹೊಡೆದುರುಳಿಸಿದ್ದಾರೆ. ಘಟನೆಯಲ್ಲಿ ಐದು ವರ್ಷದ ಮಗು ಹಾಗೂ 57 ವರ್ಷದ ವೃದ್ಧನ ಸೊಂಟಕ್ಕೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತ ಆರೋಪಿಯ ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ.
ಸಾಯುವ ಮೊದಲು ಮಹಿಳೆ ತನ್ನ ಬಳಿ ಬಾಂಬ್ ಇದೆ ಎಂದು ಬೆದರಿಕೆ ಹಾಕಿದಳು. ಪ್ರತಿಸ್ಪಂದಕರು ಆಗಮಿಸುತ್ತಿದ್ದಂತೆ ರಾಸಯನಿಕ ವಸ್ತುವನ್ನು ಸಿಂಪಡಿಸಿದಳು. ಆದರೆ ಆ ರಾಸಯನಿಕ ವಸ್ತು ಯಾವುದು ಎಂಬುದು ತಿಳಿದು ಬಂದಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಈವರೆಗೆ ಯಾವುದೇ ಸ್ಫೋಟಕಗಳು ಪತ್ತೆಯಾಗಿಲ್ಲ ಎಂದು ಎಂದು ಅಲ್ಲಿನ ನಗರ ಪೊಲೀಸ್ ಮುಖ್ಯಸ್ಥ ಟ್ರಾಯ್ ಫಿನ್ನರ್ ತಿಳಿಸಿದ್ದಾರೆ.
ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿರುವ ಪಾದ್ರಿ ಜೋಯಲ್ ಒಸ್ಟೀನ್ ಅವರು, ಘಟನೆಯಲ್ಲಿ ಗಾಯಗೊಂಡವರು ಮತ್ತು ಮೃತಪಟ್ಟ ಮಹಿಳೆಗಾಗಿ ಪ್ರಾರ್ಥಿಸುತ್ತೇನೆ. ಚರ್ಚ್‌ನಲ್ಲಿ ಕಡಿಮೆ ಜನರು ಇದ್ದಾಗ ಗುಂಡಿನ ದಾಳಿ ಸಂಭವಿಸಿದೆ. ಸದ್ಯ ಜನರಿಗೆ ಯಾವುದೇ ಹೆಚ್ಚಿನ ಅಪಾಯವಾಗಿಲ್ಲ ಎಂದು ಹೇಳಿದ್ದಾರೆ. ಇವಾಂಜೆಲಿಕಲ್ ಕ್ರಿಶ್ಚಿಯನ್ ಪಾದ್ರಿ ಜೋಯಲ್ ಒಸ್ಟೀನ್ ಅವರು ನಡೆಸುತ್ತಿದ್ದ ಮೆಗಾಚರ್ಚ್ ಇದಾಗಿದೆ.