ಮಾಸ್ಕೋ (ರಷ್ಯಾ):ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಭಾರೀ ಭಯೋತ್ಪಾದಕ ದಾಳಿ ನಡೆದಿದೆ. ಹಲವು ದಾಳಿಕೋರರು ಕ್ರಾಕೋವ್‌ನ ಕನ್ಸರ್ಟ್ ಹಾಲ್‌ಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ಸುಮಾರು 140ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 145 ಜನರು ಗಾಯಗೊಂಡಿದ್ದಾರೆ. ಭಯೋತ್ಪಾದಕ ದಾಳಿ ನಡೆದಿರುವ ಕುರಿತು ರಷ್ಯಾದ ಫೆಡರಲ್ ಭದ್ರತಾ ಸೇವಾ ಅಧಿಕಾರಿಗಳು ದೃಢಪಡಿಸಿದ್ದಾರೆ. ರಷ್ಯಾದ ಪ್ರಸಿದ್ಧ ರಾಕ್ ಬ್ಯಾಂಡ್ 'ಫಿಕ್ನಿಕ್' ಸಂಗೀತ ಕಚೇರಿಯಲ್ಲಿ ಈ ದಾಳಿ ನಡೆದಿದೆ.
ಇಸ್ಲಾಮಿಕ್ ಸ್ಟೇಟ್ ಗುಂಪು ಸಾಮಾಜಿಕ ಜಾಲತಾಣದಲ್ಲಿ ಅಂಗಸಂಸ್ಥೆ ಚಾನಲ್‌ಗಳಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಮಾಸ್ಕೋ ಮೇಯರ್ ಸೆರ್ಗೆಯ್ ಸೊಬಯಾನಿನ್ ಅವರು, ಇದೊಂದು ದೊಡ್ಡ ದುರಂತ ಎಂದು ಹೇಳಿದ್ದಾರೆ. ಮತ್ತು ಅಧಿಕಾರಿಗಳು ಭಯೋತ್ಪಾದಕ ದಾಳಿ ಕುರಿತು ತನಿಖೆ ನಡೆಸುತ್ತಿದ್ದಾರೆ.
145 ಗಾಯಾಳುಗಳ ಪಟ್ಟಿ ಬಿಡುಗಡೆ:ಮೊದಲು ಕಟ್ಟಡಕ್ಕೆ ನುಗ್ಗಿದ ದುಷ್ಕರ್ಮಿಗಳು ಒಳಗಿದ್ದವರ ಮೇಲೆ ಗುಂಡು ಹಾರಿಸಿ ಆತಂಕ ಸೃಷ್ಟಿಸಿದ್ದರು. ಸಂಗೀತಗೋಷ್ಠಿ ಮುಗಿದು ಹೊರಗೆ ಹೋಗುತ್ತಿದ್ದಾಗ ಒಮ್ಮೆ ಗುಂಡು ಹಾರಿಸಲಾಯಿತು. ಏನಾಗುತ್ತೆ ಎಂಬುದನ್ನು ತಿಳಿಯದೆ ಅಲ್ಲಿದ್ದ ಜನರು ತುಂಬಾ ಭಯದಿಂದ ಆಸನಗಳ ನಡುವೆ ಅಡಗಿ ಕುಳಿತಿದ್ದರು. ಮಾಹಿತಿ ಪಡೆದ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಸಭಾಂಗಣದಲ್ಲಿ ಸಿಲುಕಿದ್ದ ಹಲವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದರು. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿವೆ. ಆರೋಗ್ಯ ಅಧಿಕಾರಿಗಳು 145 ಗಾಯಾಳುಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಅವರಲ್ಲಿ ಐವರು ಮಕ್ಕಳು ಸೇರಿದಂತೆ 115 ಮಂದಿಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಪೊಲೀಸರ ಕೈಗೆ ಸಿಕ್ಕಿಬಿದ್ದ ಓರ್ವ ದಾಳಿಕೋರ:ಈ ದಾಳಿಗೆ ಸಂಬಂಧಿಸಿದಂತೆ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಬಂದೂಕುಧಾರಿಗಳು ಗುಂಡು ಹಾರಿಸುತ್ತಿರುವ ದೃಶ್ಯಗಳು ಕಂಡುಬಂದಿದ್ದು, ಇಲ್ಲಿದ್ದ ಜನರು ಭಯಭೀತರಾಗಿ ಸ್ಥಳದಿಂದ ಪರಾರಿಯಾಗಿದ್ದಾರೆ. ದಾಳಿ ನಡೆದ ಸಮಯದಲ್ಲಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಟ್ಟಡದ ತುಂಬಾ ಕಪ್ಪು ಹೊಗೆ ಹರಡಿತು. ಐವರು ಬಂದೂಕುಧಾರಿಗಳು ಗುಂಡಿನ ಮಳೆಗರಿದಿದ್ದಾರೆ. ಈ ಪೈಕಿ ಓರ್ವ ದಾಳಿಕೋರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ ಎಂದು ವರದಿಯಾಗಿದೆ. ಸಭಾಂಗಣಕ್ಕೆ ನುಗ್ಗಿದ ಶಸ್ತ್ರಧಾರಿಗಳು ಬಾಂಬ್‌ಗಳನ್ನು ಎಸೆದಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದರಿಂದ ಬೆಂಕಿ ಕಟ್ಟಡದಾದ್ಯಂತ ವ್ಯಾಪಿಸಿದೆ. 11 ದಾಳಿಕೋರರ ಪೈಕಿ ನಾಲ್ವರು ಬಂದೂಕುದಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ.