ಇಸ್ಲಾಮಾಬಾದ್ :ಪಾಕಿಸ್ತಾನದಲ್ಲಿ ಅಚ್ಚರಿಯ ರಾಜಕೀಯ ಬೆಳವಣಿಗೆಯೊಂದರಲ್ಲಿ, ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಯಸಿದಲ್ಲಿ ಅವರ ಪಾಕಿಸ್ತಾನ ತೆಹ್ರೀಕ್-ಎ-ಇನ್ಸಾಫ್ ಪಕ್ಷದೊಂದಿಗೆ ಮಾತುಕತೆಗೆ ಸಿದ್ಧ ಎಂದು ಬಿಲಾವಲ್ ಭುಟ್ಟೊ ಜರ್ದಾರಿ ನೇತೃತ್ವದ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಹೇಳಿದೆ. ಆರ್ಥಿಕ ಬಿಕ್ಕಟ್ಟು ಹಾಗೂ ರಾಜಕೀಯ ಅಸ್ಥಿರತೆಯಿಂದ ದೇಶ ಹೆಣಗಾಡುತ್ತಿರುವ ಮಧ್ಯೆ ಬಿಲಾವಲ್ ಪಕ್ಷದ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
"ಪಿಟಿಐ ಸಂಸ್ಥಾಪಕ ಇಮ್ರಾನ್ ಖಾನ್ ಮಾತುಕತೆಗೆ ಸಿದ್ಧರಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ಮಾತುಕತೆಗೆ ಸಿದ್ಧರಿದ್ದರೆ ಅದು ಸಕಾರಾತ್ಮಕ ವಿಷಯ" ಎಂದು ಹಿರಿಯ ಪಿಪಿಪಿ ನಾಯಕ ಖುರ್ಷಿದ್ ಶಾ ಬಲೂಚಿಸ್ತಾನದ ಪ್ರಾಂತೀಯ ರಾಜಧಾನಿ ಕ್ವೆಟ್ಟಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದರು.
"ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಯಾವಾಗಲೂ ಮಾತುಕತೆಗಳ ಮೂಲಕ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿದ್ದಾರೆ ಮತ್ತು ಅಗತ್ಯವಿದ್ದರೆ ಪಿಪಿಪಿ ಇದರಲ್ಲಿ ತನ್ನ ಪಾತ್ರವನ್ನು ನಿರ್ವಹಿಸಲಿದೆ" ಎಂದು ಶಾ ಹೇಳಿದ್ದಾರೆ ಎಂದು ಎಕ್ಸ್ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.
ಪ್ರಸ್ತುತ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ನೇತೃತ್ವದ ಸರ್ಕಾರದ ವಿರುದ್ಧ ಪಿಟಿಐನ ಕಠಿಣ ನಿಲುವು ತಳೆದಿದೆ. ಸದ್ಯ ರಾಜಕೀಯ ಅಸ್ಥಿರತೆಯ ಮಧ್ಯೆ ಖಾನ್ ಅವರ ಪಕ್ಷದೊಂದಿಗೆ ಮಾತುಕತೆ ನಡೆಸಲು ಪಿಪಿಪಿ ಸಿದ್ಧವಾಗಿದೆ ಎಂದು ಹೇಳಿರುವುದು ಗಮನಾರ್ಹ.