ಮಾಸ್ಕೋ:ಅಮೆರಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಡೊನಾಲ್ಡ್ ಟ್ರಂಪ್ ಅವರನ್ನು ಅಭಿನಂದಿಸಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಮುಂದಿನ ಧೈರ್ಯವಂತ ಅಧ್ಯಕ್ಷರೊಂದಿಗೆ ಮಾತನಾಡಲು ಸಿದ್ಧ ಎಂದು ಹೇಳಿದ್ದಾರೆ. ಯುಎಸ್ ಚುನಾವಣಾ ಫಲಿತಾಂಶದ ಬಗ್ಗೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡಿರುವ ರಷ್ಯಾ ನಾಯಕ ಪುಟಿನ್, ಯುಎಸ್-ರಷ್ಯಾ ಸಂಬಂಧಗಳನ್ನು ಪುನಃಸ್ಥಾಪಿಸುವ ಮತ್ತು ಉಕ್ರೇನ್ನಲ್ಲಿ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಅಗತ್ಯವಿದೆ ಎಂದು ಗುರುವಾರ ಒತ್ತಿ ಹೇಳಿದರು.
ರಷ್ಯಾದ ಸೋಚಿಯಲ್ಲಿ ನಡೆದ ನೀತಿ ನಿಯಮಗಳ ಚರ್ಚಾಸಭೆಯಲ್ಲಿ ಪುಟಿನ್ ಈ ಹೇಳಿಕೆ ನೀಡಿದ್ದಾರೆ. ಸುದೀರ್ಘ ಭಾಷಣದ ಕೊನೆಯಲ್ಲಿ ಪ್ರಶ್ನೆಗಳಿಗೆ ಉತ್ತರಿಸಿದ ಪುಟಿನ್, "ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಟ್ರಂಪ್ ಅವರನ್ನು ಅಭಿನಂದಿಸಲು ಈ ಅವಕಾಶವನ್ನು ಬಳಸಿಕೊಳ್ಳಲು ಬಯಸುತ್ತೇನೆ" ಎಂದು ಹೇಳಿದರು. ಟ್ರಂಪ್ ಅವರೊಂದಿಗೆ ಚರ್ಚೆಗೆ ಸಿದ್ಧರಿದ್ದೀರಾ ಎಂದು ಕೇಳಿದಾಗ, "ನಾವು ಸಿದ್ಧರಿದ್ದೇವೆ" ಎಂದು ಪುಟಿನ್ ಪ್ರತಿಕ್ರಿಯಿಸಿದರು.
ಉಕ್ರೇನ್ ಯುದ್ಧವನ್ನು ತ್ವರಿತವಾಗಿ ಕೊನೆಗೊಳಿಸುವ ಟ್ರಂಪ್ ಅವರ ಭರವಸೆ ಏನಾಗಲಿದೆ ಎಂಬುದು ನನಗೆ ತಿಳಿದಿಲ್ಲ ಎಂದು ಪುಟಿನ್ ಹೇಳಿದರು. ಆದರೆ ಮುಂದಿನ ಯುಎಸ್ ಅಧ್ಯಕ್ಷರ ಪ್ರಸ್ತಾಪಗಳು ಪರಿಗಣಿಸಲು ಯೋಗ್ಯವಾಗಿವೆ ಎಂದು ಅವರು ಸಲಹೆ ನೀಡಿದರು.
ಈ ವರ್ಷದ ಆರಂಭದಲ್ಲಿ ಪೆನ್ಸಿಲ್ವೇನಿಯಾದ ರ್ಯಾಲಿಯಲ್ಲಿ ತಮ್ಮ ಮೇಲೆ ನಡೆದ ಹತ್ಯಾ ಯತ್ನವನ್ನು ಅವರು ನಿಭಾಯಿಸಿದ ರೀತಿಯಿಂದ ಪ್ರಭಾವಿತನಾಗಿದ್ದೇನೆ ಎಂದು ಅವರು ನುಡಿದರು.