ನವದೆಹಲಿ/ಮಾಸ್ಕೋ: ಉಕ್ರೇನ್‌ನಲ್ಲಿ ರಷ್ಯಾ ಸೇನೆಗಾಗಿ ಹೋರಾಡುತ್ತಿರುವ ಎಲ್ಲ ಭಾರತೀಯರನ್ನು ಬಿಡುಗಡೆ ಮಾಡಲು ಮತ್ತು ವಾಪಸ್ ಕಳುಹಿಸಲು ರಷ್ಯಾ ನಿರ್ಧರಿಸಿದೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸ್ಕೋ ಭೇಟಿಯ ಸಂದರ್ಭದಲ್ಲಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿದ ನಂತರ ಈ ಮಹತ್ವದ ಬೆಳವಣಿಗೆ ನಡೆದಿದೆ.
ಎರಡು ದಿನಗಳ ಭೇಟಿಗಾಗಿ ಮಾಸ್ಕೋದಲ್ಲಿರುವ ಪ್ರಧಾನಿ ಮೋದಿ ಸೋಮವಾರ ಸಂಜೆ ಪುಟಿನ್ ಆಯೋಜಿಸಿದ್ದ ಖಾಸಗಿ ಔತಣಕೂಟದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದರು.
ದೊಡ್ಡ ಮೊತ್ತದ ಸಂಬಳದ ಕೆಲಸ ಕೊಡಿಸುವುದಾಗಿ ಹೇಳಿದ ಏಜೆಂಟ್ಗಳ ಮಾತನ್ನು ನಂಬಿ ಕನಿಷ್ಠ ಎರಡು ಡಜನ್ ಭಾರತೀಯರು ರಷ್ಯಾಗೆ ಹೋಗಿದ್ದರು. ಆದರೆ ರಷ್ಯಾದಲ್ಲಿ ಅವರನ್ನು ಸೇನೆಗೆ ಸೇರಿಸಿ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಹೋರಾಡಲು ನಿಯೋಜಿಸಲಾಗಿದೆ. ಏತನ್ಮಧ್ಯೆ, ರಷ್ಯಾದಲ್ಲಿ ಸಿಲುಕಿರುವ ಭಾರತೀಯರನ್ನು ಶೀಘ್ರವಾಗಿ ಮರಳಿ ಕರೆತರಲು ಭಾರತ ಸರ್ಕಾರವು ರಷ್ಯಾದ ಅಧಿಕಾರಿಗಳೊಂದಿಗೆ ಮುತುವರ್ಜಿಯಿಂದ ಮಾತುಕತೆ ನಡೆಸುತ್ತಿದೆ ಎಂದು ಮಾರ್ಚ್ನಲ್ಲಿ ಸರ್ಕಾರ ಹೇಳಿತ್ತು.
ವರದಿಗಳ ಪ್ರಕಾರ, ಯುದ್ಧದಲ್ಲಿ ನಾಲ್ವರು ಭಾರತೀಯರು ಸಾವನ್ನಪ್ಪಿದ್ದಾರೆ ಹಾಗೂ 10 ಮಂದಿ ದೇಶಕ್ಕೆ ಮರಳಿದ್ದಾರೆ. ಸುಮಾರು 35 ರಿಂದ 40 ಭಾರತೀಯರು ಇನ್ನೂ ರಷ್ಯಾದಲ್ಲಿ ಸಿಲುಕಿದ್ದಾರೆ ಎಂದು ನಂಬಲಾಗಿದೆ. ಉಕ್ರೇನ್ ಯುದ್ಧದಲ್ಲಿ ರಷ್ಯಾದ ಪರವಾಗಿ ಹೋರಾಡುತ್ತಿರುವ ಭಾರತೀಯರ ಸ್ಥಿತಿಯ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ.
ರಷ್ಯಾ ಸೇನೆಯಲ್ಲಿ ವಿದೇಶಿಯರನ್ನು ನೇಮಿಸಿಕೊಳ್ಳುವ ಅವಕಾಶವಿದೆ. ಇದೇ ವಿಷಯವನ್ನು ಬಳಸಿಕೊಂಡ ಏಜೆಂಟ್ರು, ದೊಡ್ಡ ಸಂಬಳದ ನೌಕರಿ ಕೊಡಿಸುವುದಾಗಿ ಹಲವಾರು ಭಾರತೀಯರನ್ನು ರಷ್ಯಾಕ್ಕೆ ಕಳುಹಿಸಿದ್ದರು. ಆದರೆ ಅಲ್ಲಿ ಅವರನ್ನು ರಷ್ಯಾ ಸೇನೆಗೆ ಸೇರಿಸಿ ಯುದ್ಧದಲ್ಲಿ ಹೋರಾಡುವಂತೆ ಬಲವಂತ ಮಾಡಲಾಗಿದೆ. ರಷ್ಯಾದಲ್ಲಿ ಸಿಲುಕಿಕೊಂಡ ಭಾರತೀಯ ನಾಗರಿಕರ ಗುಂಪೊಂದು ತಾವು ಎದುರಿಸುತ್ತಿರುವ ಅಪಾಯದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಪೋಸ್ಟ್ ಮಾಡಿತ್ತು.
ಈ ವರ್ಷದ ಆರಂಭದಲ್ಲಿ ಉಕ್ರೇನ್ ಯುದ್ಧದಲ್ಲಿ ಅಶ್ವಿನಿಭಾಯ್ ಮಂಗುಕಿಯಾ ಮತ್ತು ಮೊಹಮ್ಮದ್ ಅಸ್ಫಾನ್ (ಇಬ್ಬರೂ ಗುಜರಾತ್ನವರು) ಎಂಬ ಇಬ್ಬರು ಭಾರತೀಯರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇತರ ಇನ್ನಿಬ್ಬರು ಜೂನ್ ನಲ್ಲಿ ಕೊಲ್ಲಲ್ಪಟ್ಟರು ಎಂದು ತಿಳಿದು ಬಂದಿದೆ. ಪ್ರಧಾನಿ ಮೋದಿ ಸೋಮವಾರ ಸಂಜೆ ಮಾಸ್ಕೋಗೆ ಆಗಮಿಸಿದರು. ಉಕ್ರೇನ್ ವಿರುದ್ಧ ಯುದ್ಧ ಆರಂಭವಾದ ನಂತರ ಇದು ಮೋದಿಯವರ ಮೊದಲ ರಷ್ಯಾ ಭೇಟಿಯಾಗಿದೆ.
ಇದನ್ನೂ ಓದಿ:'ನೀವು ಇಡೀ ಜೀವನವನ್ನೇ ದೇಶಕ್ಕಾಗಿ ಸಮರ್ಪಿಸಿದ್ದೀರಿ': ಪ್ರಧಾನಿ ಮೋದಿಯನ್ನು ಕೊಂಡಾಡಿದ ರಷ್ಯಾಧ್ಯಕ್ಷ ಪುಟಿನ್ - Putin Praises Modi