ಇಸ್ಲಾಮಾಬಾದ್:ಆರ್ಥಿಕ ಬಿಕ್ಕಟ್ಟಿನಿಂದ ನಲುಗುತ್ತಿರುವ ಪಾಕಿಸ್ತಾನವನ್ನು ಸಂಕಷ್ಟದಿಂದ ಪಾರು ಮಾಡಲು ನೂತನ ಪ್ರಧಾನಿ ಶೆಹಬಾಜ್ ಷರೀಫ್ ಅವರು ತಮ್ಮ ಸಂಪುಟದ ಸಚಿವರಿಗೆ ಟಾಸ್ಕ್ ನೀಡಿದ್ದಾರೆ. ಹಣಕಾಸು ದುರಿತದಿಂದ ದೇಶವನ್ನು ಪಾರು ಮಾಡಲು "ಮಾಡು ಇಲ್ಲವೇ ಮಡಿ" ಎಂಬಂತೆ ಕೆಲಸ ಮಾಡಬೇಕಿದೆ. ದೇಶದ ಆರ್ಥಿಕತೆ ಚೇತರಿಕೆಗೆ "ದೊಡ್ಡ ಶಸ್ತ್ರಚಿಕಿತ್ಸೆ"ಯೇ ಮಾಡಬೇಕಿದೆ ಎಂದಿದ್ದಾರೆ.
ಮೊದಲ ಸಚಿವ ಸಂಪುಟ ಸಭೆ ನಡೆಸಿದ ಪ್ರಧಾನಿ ಷರೀಫ್, ದೇಶವು ಈಗ ದೊಡ್ಡ ಸವಾಲುಗಳನ್ನು ಎದುರಿಸುತ್ತಿದೆ. ಆರ್ಥಿಕ ಬಿಕ್ಕಟ್ಟಿನಿಂದ ದೇಶವನ್ನು ಹೊರತರಲು ಭಾರೀ ಹೋರಾಟದ ಅಗತ್ಯವಿದೆ. ನಾವು ಈಗ ಏನನ್ನಾದರೂ ಮಾಡದಿದ್ದರೆ, ಮುಂದೆ ಎಂದಿಗೂ ದೇಶವನ್ನು ಮೇಲೆತ್ತಲು ಸಾಧ್ಯವಿಲ್ಲ. ಇದು ನಮಗೆ ಮಾಡು ಇಲ್ಲವೇ ಮಡಿ ಸವಾಲಾಗಿದೆ ಎಂದು ಹೇಳಿದ್ದಾರೆ.
ಸರ್ಕಾರ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಸಮಯವನ್ನು ವ್ಯರ್ಥ ಮಾಡದೆ ಪ್ರತಿಯೊಬ್ಬರು ಕೆಲಸ ಮಾಡಬೇಕಿದ. ದೇಶದ ಆರ್ಥಿಕತೆಗೆ ನೀಡಲಾದ ಈವರೆಗಿನ ಯಾವುದೇ ಆ್ಯಂಟಿಬಯೋಟಿಕ್‌ಗಳು ಕಾರ್ಯನಿರ್ವಹಿಸದ ಕಾರಣ ದೊಡ್ಡ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ಹಣದುಬ್ಬರವನ್ನು ನಿಯಂತ್ರಣಕ್ಕೆ ತರುವುದು ದೊಡ್ಡ ಸವಾಲಾಗಿದೆ. ಸ್ಥಳೀಯ ಆಡಳಿತದೊಂದಿಗೆ ಜೊತೆಗೂಡಿ ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಯಬೇಕಿದೆ. ಇದು ನಮ್ಮ ಮೊದಲ ಪರೀಕ್ಷೆಯಾಗಿದೆ. ಇದನ್ನು ನಾವು ಜಯಿಸಲೇಬೇಕಿದೆ ಎಂದು ಶೆಹಬಾಜ್ ಷರೀಫ್ ಸಚಿವರಿಗೆ ಹುರಿದುಂಬಿಸಿದ್ದಾರೆ.