ಜೆರುಸಲೇಂ:ಲೆಬನಾನ್ನಿಂದ ಉಡಾವಣೆಯಾದ ಟ್ಯಾಂಕ್ ಉಡಾವಣಾ ಕ್ಷಿಪಣಿಯೊಂದು ಇಸ್ರೇಲ್ ಮೇಲೆ ಅಪ್ಪಳಿಸಿ ಓರ್ವ ಭಾರತೀಯ ಸಾವನ್ನಪ್ಪಿ, ಇಬ್ಬರು ಗಾಯಗೊಂಡಿದ್ದಾರೆ. ಮೂವರನ್ನೂ ಕೇರಳ ರಾಜ್ಯದವರೆಂದು ಗುರುತಿಸಲಾಗಿದೆ.
ಸೋಮವಾರ ಬೆಳಗ್ಗೆ 11 ಗಂಟೆ ಸುಮಾರಿನಲ್ಲಿ ಈ ಘಟನೆ ನಡೆದಿದೆ. ಉತ್ತರ ಇಸ್ರೇಲ್ನ ಗಡಿಯಲ್ಲಿರುವ ಮಾರ್ಗಲಿಯೊಟ್ ಪ್ರದೇಶದ ತೋಟದಲ್ಲಿ ಕ್ಷಿಪಣಿ ಸಿಡಿದಿದೆ. ಇದರಿಂದ ಕೇರಳದ ಕೊಲ್ಲಂ ನಿವಾಸಿ ಪಟ್ನಿಬನ್ ಮ್ಯಾಕ್ಸ್ವೆಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನುಳಿದಂತೆ ಬುಶ್ ಜೋಸೆಫ್ ಜಾರ್ಜ್, ಪೌಲ್ ಮಾಲ್ವಿನ್ ದಾಳಿಯಲ್ಲಿ ತೀವ್ರ ಗಾಯಗೊಂಡಿದ್ದಾರೆ. ಇಬ್ಬರಿಗೂ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ಮ್ಯಾಕ್ಸ್ವೆಲ್ ಅವರ ಪಾರ್ಥಿವ ಶರೀರವನ್ನು ಝಿವ್ ಆಸ್ಪತ್ರೆಯಲ್ಲಿ ಇಡಲಾಗಿದೆ. ಇನ್ನಿಬ್ಬರಿಗೆ ಮುಖ ಮತ್ತು ದೇಹದ ಮೇಲೆ ಗಾಯಗಳಾಗಿವೆ. ಇವರು ಕೇರಳದ ಇಡುಕ್ಕಿ ಜಿಲ್ಲೆಯವರು ಎಂದು ಗುರುತಿಸಲಾಗಿದೆ. ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಭಾರತದಲ್ಲಿನ ಅವರ ಕುಟುಂಬದೊಂದಿಗೆ ಮಾಹಿತಿ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.