ಕರ್ನಾಟಕ

karnataka

ETV Bharat / international

ಪಾಕಿಸ್ತಾನದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ನೋಡಿ ತಲೆತಗ್ಗಿಸುವಂತಾಗಿದೆ: ಮರಿಯಮ್ ನವಾಜ್ - MINORITIES UNDER ATTACK IN PAKISTAN

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಯುತ್ತಿರುವುದು ನಿಜ ಎಂದು ಅಲ್ಲಿನ ಪಂಜಾಬ್ ಸಿಎಂ ಮರಿಯಮ್ ನವಾಜ್ ಹೇಳಿದ್ದಾರೆ.

ಪ್ರಧಾನಿ ಶಹಬಾಜ್ ಷರೀಫ್, ಭಗ್ನಗೊಂಡ ಹಿಂದೂ ದೇವರ ಮೂರ್ತಿ, ಸಿಎಂ ಮರಿಯಮ್ ನವಾಜ್
ಪ್ರಧಾನಿ ಶಹಬಾಜ್ ಷರೀಫ್, ಭಗ್ನಗೊಂಡ ಹಿಂದೂ ದೇವರ ಮೂರ್ತಿ, ಸಿಎಂ ಮರಿಯಮ್ ನವಾಜ್ (IANS)

By ETV Bharat Karnataka Team

Published : Oct 30, 2024, 6:36 PM IST

ಲಾಹೋರ್: ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಯುತ್ತಿರುವುದನ್ನು ನೋಡಿ ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ ಎಂದು ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮರಿಯಮ್ ನವಾಜ್ ಶರೀಫ್ ಹೇಳಿದ್ದಾರೆ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ ಎಂಬುದು ಈ ಮೂಲಕ ಜಗಜ್ಜಾಹೀರಾಗಿದೆ.

ಲಾಹೋರ್​ನಲ್ಲಿ ದೀಪಾವಳಿ ಆಚರಣೆಯ ಸಂದರ್ಭದಲ್ಲಿ ಹಿಂದೂ ಸಮುದಾಯದವನ್ನು ಉದ್ದೇಶಿಸಿ ಮಾತನಾಡಿದ ಮರಿಯಮ್, ಅಲ್ಪಸಂಖ್ಯಾತರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಎಂಬುದನ್ನು ಎಲ್ಲಾ ನಾಗರಿಕರು ಅರಿತುಕೊಳ್ಳಬೇಕೆಂದು ಕರೆ ನೀಡಿದರು.

"ಈ ಹಿಂದೆ ನಾಚಿಕೆಯಿಂದ ತಲೆ ತಗ್ಗಿಸುವಂಥ ಘಟನೆಗಳು ನಡೆದಿವೆ. ಇಲ್ಲಿ ಅಲ್ಪಸಂಖ್ಯಾತರು ಕಡಿಮೆ ಸಂಖ್ಯೆಯಲ್ಲಿರುವುದರಿಂದ ಅವರನ್ನು ರಕ್ಷಿಸುವುದು, ಗೌರವಿಸುವುದು ಮತ್ತು ಅವರ ಧಾರ್ಮಿಕ ನಂಬಿಕೆಗಳನ್ನು ಗೌರವಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ನಾನು ಪಾಕಿಸ್ತಾನದ ಎಲ್ಲಾ ಜನತೆಗೆ ಕರೆ ನೀಡಲು ಬಯಸುತ್ತೇನೆ" ಎಂದು ಅವರು ಹೇಳಿದರು.

ಎಲ್ಲಾ ಅಲ್ಪಸಂಖ್ಯಾತರನ್ನು ರಕ್ಷಿಸಲು ಮತ್ತು ಪಾಕಿಸ್ತಾನದಲ್ಲಿ ಅವರು ನಿರಾಳವಾಗಿ ಬದುಕುವ ಅವಕಾಶ ಕಲ್ಪಿಸುವುದಾಗಿ ಪ್ರತಿಜ್ಞೆ ಮಾಡಿದ ಮರಿಯಮ್, ದೀಪಾವಳಿಯಂದು ಎಲ್ಲಾ ಅಲ್ಪಸಂಖ್ಯಾತರಿಗೆ 'ಈದಿ' ಘೋಷಿಸಿದರು. ಈ ಮೂಲಕ ಪಾಕಿಸ್ತಾನವು ಅವರಿಗೂ ಸೇರಿದೆ ಎಂದು ಎತ್ತಿ ತೋರಿಸಿದರು.

"ಇಂದು, ಜನತೆ ದೀಪಾವಳಿ ಆಚರಿಸುತ್ತಿದ್ದು, ಸುಂದರವಾದ ಉಡುಪುಗಳು ಮತ್ತು ವರ್ಣರಂಜಿತ ಬಳೆಗಳನ್ನು ನೋಡಲು ಖುಷಿಯಾಗುತ್ತಿದೆ. ನಮ್ಮ ದೇಶದ ಅಲ್ಪಸಂಖ್ಯಾತರನ್ನು 'ಅಲ್ಪಸಂಖ್ಯಾತರು' ಎಂದು ಕರೆಯಬೇಡಿ ಎಂದು ನನ್ನ ತಂದೆ (ನವಾಜ್ ಷರೀಫ್) ಯಾವಾಗಲೂ ಹೇಳುತ್ತಿದ್ದರು. ಅವರು ನಮ್ಮ ದೇಶದ ಭಾಗವಾಗಿದ್ದಾರೆ ಮತ್ತು ನಮ್ಮ ಹೆಮ್ಮೆಯಾಗಿದ್ದಾರೆ ಎಂದು ಅವರು ಹೇಳುತ್ತಿದ್ದರು" ಎಂದು ಪಂಜಾಬ್ ಸಿಎಂ ಹೇಳಿದರು.

"ಅಲ್ಪಸಂಖ್ಯಾತ ಸಮುದಾಯದ ಯಾವುದೇ ಸದಸ್ಯರನ್ನು ನೋಯಿಸುವ ಮೂಲಕ ಯಾರಾದರೂ ತಮ್ಮ ಧರ್ಮದ ಸೇವೆ ಮಾಡುತ್ತಿದ್ದಾರೆ ಎಂದು ಭಾವಿಸಿದರೆ ಅದು ಸಂಪೂರ್ಣವಾಗಿ ತಪ್ಪು ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ" ಎಂದು ಅವರು ತಿಳಿಸಿದರು.

ಏತನ್ಮಧ್ಯೆ, ಅಲ್ಪಸಂಖ್ಯಾತ ಸಮುದಾಯದ ಕನಿಷ್ಠ 1400 ಕುಟುಂಬಗಳಿಗೆ ತಲಾ 15,000 ರೂ. ನೀಡುವುದಾಗಿ ಘೋಷಿಸಿದ ಸಿಎಂ ಮರಿಯಮ್, ಇದೊಂದು ಸಣ್ಣ ಉಡುಗೊರೆ ಮತ್ತು ದೇಶದ ಅಲ್ಪಸಂಖ್ಯಾತರ ಬಗ್ಗೆ ನಮ್ಮ ಮೆಚ್ಚುಗೆಯ ಸಂಕೇತ ಎಂದು ಹೇಳಿದರು.

ಹಿಂದೂಗಳು, ಶಿಯಾ ಮುಸ್ಲಿಮರು, ಕ್ರಿಶ್ಚಿಯನ್ನರು, ಅಹ್ಮದೀಯರು ಮತ್ತು ಸಿಖ್ಖರ ಮೇಲೆ ಪಾಕಿಸ್ತಾನದಲ್ಲಿ ಅಪಾಯಕಾರಿ ಮಟ್ಟದಲ್ಲಿ ದಾಳಿ ನಡೆಯುತ್ತಿದ್ದು, ಇದನ್ನು ತಡೆಗಟ್ಟಲು ಅಲ್ಲಿನ ಸರ್ಕಾರ ಅಸಮರ್ಥವಾಗಿದೆ ಎಂದು ವಿಶ್ವಸಂಸ್ಥೆ ಟೀಕಿಸಿರುವುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ : LACಯಲ್ಲಿ ಎರಡೂ ದೇಶಗಳಿಂದ ಕ್ರಮಬದ್ಧವಾಗಿ ಸೇನೆ ಹಿಂತೆಗೆತ: ಚೀನಾ ಹೇಳಿಕೆ

ABOUT THE AUTHOR

...view details