ಮಾಲೆ (ಮಾಲ್ಡೀವ್ಸ್):ಭಾರತದ ನೆರೆಯ ರಾಷ್ಟ್ರವಾಗಿದ್ದರೂ, ಉತ್ತಮ ಬಾಂಧವ್ಯ ಹೊಂದಿಲ್ಲದ ಮಾಲ್ಡೀವ್ಸ್‌ಗೆ ವಿದೇಶಾಂಗ ಸಚಿವ ಡಾ. ಎಸ್.ಜೈಶಂಕರ್ ಅವರು ಭೇಟಿ ನೀಡಿದ್ದು, ಅಲ್ಲಿನ ಸಚಿವರೊಂದಿಗೆ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ "ದ್ವೀಪರಾಷ್ಟ್ರವು ಹಿಂದುಮಹಾಸಾಗರ ಹಂಚಿಕೊಂಡಿರುವ ದೇಶಗಳಲ್ಲಿ ಅತ್ಯಂತ ಪ್ರಮುಖ ಪಾಲುದಾರ ದೇಶ" ಎಂದು ಜೈಶಂಕರ್ ಹೇಳಿದ್ದಾರೆ.
ಮಾಲ್ಡೀವ್ಸ್ ವಿದೇಶಾಂಗ ಸಚಿವ ಮೂಸಾ ಜಮೀರ್ ಅವರೊಂದಿಗೆ ಮಾತುಕತೆ ನಡೆಸಿದ ಅವರು, ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತಕ್ಕೆ ಮಾಲ್ಡೀವ್ಸ್ ಪ್ರಮುಖ ಪಾಲುದಾರ ದೇಶವಾಗಿದೆ. ಉಭಯ ರಾಷ್ಟ್ರಗಳು ತಮ್ಮ ಸಹಕಾರವನ್ನು ಇನ್ನಷ್ಟು ಎತ್ತರಿಸಲು ಬಯಸುತ್ತಿವೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ತಿಳಿಸಿದ್ದಾರೆ.
ಮಾಲ್ಡೀವ್ಸ್ ಪ್ರವಾಸಕ್ಕೆ ಭಾರತವೇ ಮಾರುಕಟ್ಟೆ:ಮಾಲ್ಡೀವ್ಸ್ ನೆರೆಹೊರೆಯ ಹೃದಯಭಾಗದಲ್ಲಿದೆ. ಆದ್ದರಿಂದ ನಮ್ಮ ಎರಡೂ ದೇಶಗಳ ನಡುವಿನ ಸಹಕಾರವು ಸಾಂಪ್ರದಾಯಿಕವಾಗಿದೆ. ಇದನ್ನು ಈಗಿನ ಆಧುನಿಕ ಸಹಭಾಗಿತ್ವದೆಡೆಗೆ ಸಾಗಿಸಲು ಬಯಸುತ್ತೇವೆ" ಎಂದರು.
ಕಳೆದ ಕೆಲವು ವರ್ಷಗಳಲ್ಲಿ ಭಾರತವು ಸುಮಾರು 220 ಮಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಿದೆ. ಭಾರತವು ಮಾಲ್ಡೀವ್ಸ್‌ನಲ್ಲಿ ಪ್ರಾದೇಶಿಕ ಅಭಿವೃದ್ಧಿಗೆ ನೆರವು ನೀಡಿದೆ. ನಾವು ಇತರ ದೇಶಗಳಿಗೆ ಹೋಲಿಸಿಕೊಂಡರೆ, ಅತಿ ದೊಡ್ಡ ವ್ಯಾಪಾರ ಪಾಲುದಾರರಾಗಿದ್ದೇವೆ. ಭಾರತದಿಂದ ಮಾಲ್ಡೀವ್ಸ್‌ಗೆ ವಿಶೇಷವಾಗಿ ಪ್ರವಾಸೋದ್ಯಮ ವಲಯದಲ್ಲಿ ಹೆಚ್ಚಿನ ಹೂಡಿಕೆ ಹರಿದು ಬರುತ್ತಿದೆ ಎಂದು ಹೇಳಿದರು.
65 ಯೋಜನೆಗಳಲ್ಲಿ ಭಾರತ ಪಾಲುದಾರ:ಈ ಪ್ರವಾಸೋದ್ಯಮವನ್ನು ಪ್ರಾದೇಶಿಕ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಭಾರತವು ಮಾಲ್ಡೀವ್ಸ್ ಸರ್ಕಾರದೊಂದಿಗೆ "ಅಡ್ಡು ರಿಕ್ಲೇಮೇಷನ್ ಮತ್ತು ಶೋರ್ ಪ್ರೊಟೆಕ್ಷನ್ ಯೋಜನೆ"ಯಲ್ಲಿ ಪಾಲುದಾರಿಕೆ ಹೊಂದಿದೆ ಎಂದು ತಿಳಿಸಿದರು.
ಮಾಲ್ಡೀವ್ಸ್‌ನಲ್ಲಿ ಸಮುದಾಯ ಅಭಿವೃದ್ಧಿ ಯೋಜನೆಗಳಿಗೆ ಭಾರತವು ನೆರವು ನೀಡುತ್ತದೆ. ಇಲ್ಲಿನ 65 ಯೋಜನೆಗಳಲ್ಲಿ ಪಾಲುದಾರರಾಗಿದ್ದೇವೆ. ಅದರಲ್ಲಿ 12 ಅಥವಾ ಐದು ಯೋಜನೆಗಳನ್ನು ಈಗಾಗಲೇ ಅನುಷ್ಠಾನಕ್ಕೆ ತರಲಾಗಿದೆ. ದ್ವೀಪರಾಷ್ಟ್ರದ ವಿಕಸನದ ಅಗತ್ಯತೆಗಳು ಮತ್ತು ಆದ್ಯತೆಗಳಿಗೆ ಮುಕ್ತವಾಗಿದೆ. ಎರಡು ಸರ್ಕಾರಗಳು ಅವಶ್ಯಕತೆಗಳಿಗೆ ಅನುಗುಣವಾಗಿ ನಡೆದುಕೊಳ್ಳುತ್ತವೆ. ಭಾರತದ ನೆರವಿನಲ್ಲಿ ಪಡೆದ ಯೋಜನೆಗಳಿಗಾಗಿ ಮಾಲ್ಡೀವ್ಸ್ ಸರ್ಕಾರ ಮತ್ತು ಅಲ್ಲಿನ ಜನರನ್ನು ವಿದೇಶಾಂಗ ಸಚಿವರು ಅಭಿನಂದಿಸಿದರು.
ಭಾರತದ ಜೊತೆ ಮುನಿಸು:ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು ಅಧಿಕಾರಕ್ಕೆ ಬಂದ ಬಳಿಕ ಭಾರತದ ಜೊತೆ ಮುಸುಕಿನ ಗುದ್ದಾಟ ನಡೆಸಿದ್ದರು. ಇಲ್ಲಿನ ಭಾರತದ ಸೇನೆಯನ್ನು ವಾಪಸ್ ಪಡೆಯುವಂತೆ ಸೂಚಿಸಿದ್ದರು. ಜೊತೆಗೆ ಚೀನಾದ ಜೊತೆಗೆ ಉತ್ತಮ ಬಾಂಧವ್ಯ ಹೊಂದಲು ಪ್ರಯತ್ನಿಸಿದ್ದರು.
ಬಳಿಕ, ದ್ವೀಪ ರಾಷ್ಟ್ರಕ್ಕೆ ಭಾರತ ನೀಡಿದ ಸಾಲವನ್ನು ಮರುಪಾವತಿಸುವ ವಿಷಯವಾಗಿ ಮೃದು ಧೋರಣೆ ತಳೆದಿದ್ದರು. ವರ್ಷಾಂತ್ಯದ ವೇಳೆಗೆ ಮಾಲ್ಡೀವ್ಸ್‌ನಿಂದ ಭಾರತಕ್ಕೆ ಮರುಪಾವತಿಸಲು 400.9 ಮಿಲಿಯನ್ ಡಾಲರ್ ಬಾಕಿಯಿದೆ. ಜೊತೆಗೆ ಭಾರತಕ್ಕೆ ಮಾಲ್ಡೀವ್ಸ್ ನೀಡಬೇಕಾದ ಸಾಲ 517 ಮಿಲಿಯನ್ ಡಾಲರ್ ಆಗಿದೆ. ಇಷ್ಟು ದೊಡ್ಡ ಮೊತ್ತವನ್ನುಪಾವತಿಸಲು ಸಾಧ್ಯವಿಲ್ಲದ ಕಾರಣ ಪ್ರಧಾನಿ ಮಯಿಝು ಬದಲಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇದನ್ನೂ ಓದಿ:ಸಾಮರ್ಥ್ಯ ಮೀರಿ ವಿಪರೀತ ಖರ್ಚು, ಒಟ್ಟು ಆರ್ಥಿಕತೆಯ ಶೇ 110ರಷ್ಟು ಸಾಲ! ಮಾಲ್ಡೀವ್ಸ್‌ಗೆ ವಿಶ್ವಬ್ಯಾಂಕ್ ಎಚ್ಚರಿಕೆ - Maldives Debt