ಹೈದರಾಬಾದ್: ಬ್ರಿಟನ್ ರಾಜ ಚಾರ್ಲ್ಸ್ III ಕ್ಯಾನ್ಸರ್ಗೆ ತುತ್ತಾಗಿದ್ದು, ಅವರಿಗೆ ಚಿಕಿತ್ಸೆ ಆರಂಭಿಸಲಾಗಿದೆ ಎಂದು ಬಕಿಂಗ್ಹ್ಯಾಮ್ ಅರಮನೆ ಮಾಹಿತಿ ನೀಡಿದೆ. ಇತ್ತೀಚಿಗೆ ಆಸ್ಪತ್ರೆ ಭೇಟಿ ವೇಳೆ ಅವರಲ್ಲಿ ಕ್ಯಾನ್ಸರ್ ಇರುವುದು ಗೊತ್ತಾಗಿತ್ತು. ಈ ಸಂಬಂಧ ವಿಶೇಷವಾಗಿ ಗಮನಹರಿಸಲಾಗಿದ್ದು, ಅವರಿಗೆ ಕ್ಯಾನ್ಸರ್ ತಗುಲಿರುವುದು ದೃಢಪಟ್ಟಿದೆ. ಆದರೆ, ಯಾವ ರೀತಿಯ ಕ್ಯಾನ್ಸರ್ನಿಂದ ಅವರು ಬಳಲುತ್ತಿದ್ದಾರೆ ಎಂಬುದನ್ನು ಅರಮನೆ ಸ್ಪಷ್ಟಪಡಿಸಿಲ್ಲ. 75 ವರ್ಷದ ರಾಜನಿಗೆ ಚಿಕಿತ್ಸೆ ಆರಂಭವಾಗಿದ್ದು, ಅವರು ಸಾಮಾನ್ಯ ಚಿಕಿತ್ಸೆ ಆರಂಭಿಸಿದ್ದು, ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ರಾಜನಿಗೆ ತಮ್ಮ ಎಲ್ಲ ಸಾರ್ವಜನಿಕ ಕಾರ್ಯಕ್ರಮ ಮತ್ತು ಕೆಲಸಗಳನ್ನು ಮುಂದೂಡುವಂತೆ ವೈದ್ಯರು ಸೂಚಿಸಿದ್ದಾರೆ. ಆದರೆ, ಅವರು ಅಗತ್ಯ ರಾಜ್ಯ ವ್ಯವಹಾರ ಮತ್ತು ಖಾಸಗಿ ಸಭೆ ನಡೆಸುವುದನ್ನು ಮುಂದುವರೆಸಲಿದ್ದಾರೆ ಎಂದು ಅರಮನೆ ಹೇಳಿಕೆಯಲ್ಲಿ ತಿಳಿಸಲಾಗಿದೆ. ವೈದ್ಯರ ಮುನ್ನೆಚ್ಚರಿಕೆ ಹಾಗೂ ಸತತ ತಪಾಸಣೆಯಿಂದಾಗಿ ತ್ವರಿತವಾಗಿ ಕ್ಯಾನ್ಸರ್ ಅಂಶ ಇರುವುದು ಪತ್ತೆಯಾಗಿದೆ. ಇದಕ್ಕೆ ವೈದ್ಯಕೀಯ ತಂಡಕ್ಕೆ ಕೃತಜ್ಞರಾಗಿದ್ದೇವೆ. ಆಸ್ಪತ್ರೆಯ ಇತ್ತೀಚಿನ ಕಾರ್ಯವಿಧಾನಕ್ಕೆ ಧನ್ಯವಾದಗಳು. ಅವರು ತಮ್ಮ ಚಿಕಿತ್ಸೆಯಲ್ಲಿ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದು, ಸಾಧ್ಯವಾದಷ್ಟು ಬೇಗ ಸಾರ್ವಜನಿಕ ಕರ್ತವ್ಯಕ್ಕೆ ಮರಳುವ ಸಾಧ್ಯತೆ ಇದೆ ಅರಮನೆ ಮೂಲಗಳು ತಿಳಿಸಿವೆ.
ರಾಜರು ತಮ್ಮ ಆರೋಗ್ಯದ ಕುರಿತ ಊಹಾಪೋಹಗಳಿಗೆ ಬ್ರೇಕ್ ಹಾಕುವ ಉದ್ದೇಶದಿಂದ ರೋಗದ ಕುರಿತು ಸಾರ್ವಜನಿಕರೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಮೂಲಕ ಕ್ಯಾನ್ಸರ್ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ಸಹಾಯ ಮಾಡುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ವಾರಾಂತ್ಯದಲ್ಲಿ, ಕಿಂಗ್ ಚಾರ್ಲ್ಸ್ ಮತ್ತು ರಾಣಿ ಕ್ಯಾಮಿಲ್ಲಾ ನಾರ್ಫೋಕ್‌ನ ಸ್ಯಾಂಡ್ರಿಂಗ್‌ಹ್ಯಾಮ್‌ನಲ್ಲಿ ಚರ್ಚ್ ಸೇವೆಯಲ್ಲಿ ಭಾಗಿಯಾಗಿದ್ದರು. ಲಂಡನ್ ಕ್ಲಿನಿಕ್ನಿಂದ ಬಿಡುಗಡೆಯಾದ ಬಳಿಕ ಸಾರ್ವಜನಿಕ ಕಾರ್ಯಕ್ರಮದಲ್ಲಿ ಇಲ್ಲಿ ಕಾಣಿಸಿಕೊಂಡಿದ್ದರು. ಕಿಂಗ್ ಚಾರ್ಲ್ಸ್ ಚಿಕಿತ್ಸೆಗೆ ಸ್ಯಾಂಡ್ರಿಂಗ್‌ಹ್ಯಾಮ್‌ನಿಂದ ಲಂಡನ್‌ಗೆ ಪ್ರಯಾಣ ಬೆಳೆಸಿದ್ದು, ಲಂಡನ್ನಲ್ಲಿನ ಅರಮನೆಯಲ್ಲಿಯೇ ಇರಲಿದ್ದಾರೆ.