ಟೆಲ್ಅವಿವ್ (ಇಸ್ರೇಲ್):ಕಳೆದ 24 ಗಂಟೆಗಳಲ್ಲಿ ಇಸ್ರೇಲಿ ಪಡೆಗಳು ಗಾಜಾಪಟ್ಟಿಯಲ್ಲಿ ನಡೆಸಿದ ನಾಲ್ಕು ದಾಳಿಗಳಿಂದ ಕನಿಷ್ಠ 59 ಪ್ಯಾಲೆಸ್ತೀನಿಯರು ಮೃತಪಟ್ಟು, 273 ಮಂದಿ ಗಾಯಗೊಂಡಿದ್ದಾರೆ.
ಗಾಜಾದ ವೈದ್ಯಕೀಯ ಮೂಲಗಳ ಪ್ರಕಾರ, ಹಲವು ನಾಗರಿಕರು ಇನ್ನೂ ಕಟ್ಟಡಗಳ ಅವಶೇಷಗಳ ಅಡಿ ಸಿಲುಕಿದ್ದಾರೆ ಮತ್ತು ರಸ್ತೆಗಳ ಮೇಲೆಯೇ ಬಿದ್ದಿದ್ದಾರೆ. ಏಕೆಂದರೆ ಇಸ್ರೇಲ್ ನಿರಂತರ ದಾಳಿಗಳಿಂದಾಗಿ ವೈದ್ಯರು ಮತ್ತು ರಕ್ಷಕರು ಅವರನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿವೆ.
2023ರ ಅಕ್ಟೋಬರ್ 7 ರಿಂದ ಅಂದರೆ ಕಳೆದ 456 ದಿನಗಳಿಂದ ಗಾಜಾದ ಮೇಲೆ ಇಸ್ರೇಲ್ ನಡೆಸಿದ ದಾಳಿಗಳಿಂದ 45,717 ಮಂದಿ ಮೃತಪಟ್ಟು, 10,886 ಮಂದಿ ಗಾಯಗೊಂಡಿದ್ದಾರೆ.
ಇಸ್ರೇಲ್ - ಹಿಜ್ಬುಲ್ಲಾ ನಡುವಿನ ಕದನ ವಿರಾಮ ಮುಂದುವರಿಯುವ ಸಾಧ್ಯತೆ:ಇಸ್ರೇಲ್ ಮತ್ತು ಲೆಬನಾನ್ ಉಗ್ರಗಾಮಿ ಗುಂಪು ಹಿಜ್ಬುಲ್ಲಾ ನಡುವಿನ ಕದನ ವಿರಾಮವನ್ನು ಒಂದು ತಿಂಗಳ ಕಾಲ ಜಾರಿಯಲ್ಲಿತ್ತು. ಆದರೆ ಒಪ್ಪಂದದ ಗಡುವಿನೊಳಗೆ ಕದನ ವಿರಾಮ ಷರತ್ತುಗಳ ಪಾಲನೆ ಅನುಮಾನವಾಗಿದೆ.
ನವೆಂಬರ್ 27 ರಂದು ನಡೆದ ಕದನ ವಿರಾಮ ಒಪ್ಪಂದದ ಪ್ರಕಾರ, ದಕ್ಷಿಣ ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಶಸ್ತ್ರಾಸ್ತ್ರಗಳನ್ನು ತ್ಯಜಿಸಬೇಕು ಮತ್ತು ಇಸ್ರೇಲಿ ಪಡೆಗಳು ಲೆಬನಾನ್ನಿಂದ ಹಿಂದೆ ಸರಿಯಬೇಕು. ಇದರ ಜೊತೆಗೆ ಲೆಬನಾನ್ ಸೈನ್ಯ ಮತ್ತು ಯುಎನ್ ಶಾಂತಿಪಾಲಕರಿಗೆ ಇಸ್ರೇಲಿ ತನ್ನ ನಿಯಂತ್ರಣವನ್ನು ಹಸ್ತಾಂತರಿಸಲು 60 ದಿನಗಳ ಗಡುವು ನೀಡಲಾಗಿತ್ತು.
ಆದರೆ ಇಸ್ರೇಲ್, ಇಲ್ಲಿಯವರೆಗೆ ದಕ್ಷಿಣ ಲೆಬನಾನ್‌ನಲ್ಲಿ ತನ್ನ ಹಿಡಿತದಲ್ಲಿರುವ ಡಜನ್ಗಟ್ಟಲೆ ಪಟ್ಟಣಗಳ ಪೈಕಿ ಕೇವಲ ಎರಡರಿಂದ ಮಾತ್ರ ಹಿಂದೆ ಸರಿದಿದೆ ಮತ್ತು ಹಿಜ್ಬುಲ್ಲಾಗೆ ಸೇರಿದ ನೆಲೆಗಳ ಮೇಲೆ ದಾಳಿ ಮಾಡುವುದನ್ನು ಮುಂದುವರಿಸಿದೆ. ಹಿಜ್ಬುಲ್ಲಾ ಶಸ್ತ್ರಾಸ್ತ್ರಗಳನ್ನು ವಶಪಡಿಕೊಳ್ಳುವ ಮತ್ತು ಅವುಗಳನ್ನು ನಾಶಪಡಿಸುವುದಕ್ಕೂ ಮುನ್ನ ಇಸ್ರೇಲ್ ರಾಕೆಟ್ಗಳನ್ನು ಉಡಾಯಿಸಲು ಮತ್ತು ಶಸ್ತ್ರಾಸ್ತ್ರಗಳನ್ನು ಸಾಗಿಸಲು ಪ್ರಯತ್ನಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಸುಮಾರು 14 ತಿಂಗಳ ಸುದೀರ್ಘ ಯುದ್ಧದಿಂದ ಕಂಗೆಟ್ಟಿರುವ ಹಿಜ್ಬುಲ್ಲಾ, 60 ದಿನಗಳ ಗಡುವಿನೊಳಗೆ ಇಸ್ರೇಲ್ ತನ್ನ ಪಡೆಗಳನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳದಿದ್ದರೆ ಯುದ್ಧವನ್ನು ಪುನರಾರಂಭಿಸುವುದಾಗಿ ಬೆದರಿಕೆ ಹಾಕಿದೆ.
ಕದನ ವಿರಾಮ ಉಲ್ಲಂಘನೆಯ ಬಗ್ಗೆ ಎರಡೂ ಕಡೆಗಳಿಂದ ಆರೋಪ ಕೇಳಿ ಬರುತ್ತಿರುವುದರ ನಡುವೆಯೂ ಕದನ ವಿರಾಮವು ಮುಂದುವರಿಯುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಯುದ್ಧದಿಂದ ಸ್ಥಳಾಂತರಗೊಂಡ ಸಾವಿರಾರು ಇಸ್ರೇಲಿ ಮತ್ತು ಲೆಬನಾನ್ ವಾಸಿಗಳಿಗೆ ಇದು ಶುಭ ಸುದ್ದಿಯಾಗಿದೆ.
ಇದನ್ನೂ ಓದಿ:ಸಿರಿಯಾದಲ್ಲಿ ಚುನಾವಣೆ ನಡೆಸಲು 4 ವರ್ಷ ಬೇಕಾಗಬಹುದು: ಆಡಳಿತದ ಮುಖ್ಯಸ್ಥ ಅಹ್ಮದ್ ಅಲ್ - ಶರಾ ಹೇಳಿಕೆ