ಜೆರುಸಲೇಂ:ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ಪಡೆಗಳು ಭಾನುವಾರ ತಮ್ಮ ಸೇನಾ ಕಾರ್ಯಾಚರಣೆಯನ್ನು ವಿಸ್ತರಿಸಿದ್ದು, ನೂರ್ ಶಮ್ಸ್ ನಿರಾಶ್ರಿತರ ಶಿಬಿರದ ಮೇಲೆ ದಾಳಿ ನಡೆಸಿವೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ. ಐಡಿಎಫ್, ಶಿನ್ ಬೆಟ್ ಭದ್ರತಾ ಸಂಸ್ಥೆ ಮತ್ತು ಗಡಿ ಪೊಲೀಸರ ದೊಡ್ಡ ಪಡೆಗಳು ನೂರ್ ಶಮ್ಸ್ ನಲ್ಲಿ ರಾತ್ರಿಯಿಡೀ ಮಿಲಿಟರಿ ಕಾರ್ಯಾಚರಣೆ ಪ್ರಾರಂಭಿಸಿವೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಹೇಳಿಕೆಯಲ್ಲಿ ತಿಳಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಇಸ್ರೇಲಿ ಪಡೆಗಳು ಶಿಬಿರದಲ್ಲಿನ ಹಲವಾರು ಕುಟುಂಬಗಳನ್ನು ಮನೆಗಳಿಂದ ಹೊರಹಾಕಿ, ಅವುಗಳನ್ನು ಮಿಲಿಟರಿ ಹೊರಠಾಣೆಗಳಾಗಿ ಪರಿವರ್ತಿಸಿಕೊಂಡಿವೆ.
ಈ ಮಿಲಿಟರಿ ದಾಳಿಯಲ್ಲಿ ದೊಡ್ಡ ಸಂಖ್ಯೆಯ ಇಸ್ರೇಲಿ ಪಡೆಗಳು ಭಾಗಿಯಾಗಿದ್ದು, ಬುಲ್ಡೋಜರ್ಗಳ ಮೂಲಕ ಶಿಬಿರವನ್ನು ಪ್ರವೇಶಿಸಿ ಅದರ ಮೇಲೆ ದಿಗ್ಬಂಧನ ವಿಧಿಸಿವೆ ಎಂದು ಅವರು ಹೇಳಿದರು. ಶಿಬಿರದ ಅಲ್-ಮಸ್ಲಾಖ್ ಬಡಾವಣೆಯ ಪ್ರವೇಶ ದ್ವಾರವನ್ನು ಬುಲ್ಡೋಜರ್ಗಳು ನೆಲಸಮ ಮಾಡಲು ಪ್ರಾರಂಭಿಸಿದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಇಸ್ರೇಲ್ ದಾಳಿ ನಡೆಸಿರುವುದನ್ನು ದೃಢಪಡಿಸಿರುವ ತುಲ್ಕರೆಮ್ ಗವರ್ನರ್ ಅಬ್ದುಲ್ಲಾ ಕಾಮಿಲ್, ಈ ಪ್ರದೇಶದಲ್ಲಿ ನಡೆಯುತ್ತಿರುವ ಅಭೂತಪೂರ್ವ ಆಕ್ರಮಣವನ್ನು ತಡೆಗಟ್ಟಲು ಅಂತರರಾಷ್ಟ್ರೀಯ ಮಧ್ಯಪ್ರವೇಶಕ್ಕೆ ಕರೆ ನೀಡಿದರು.