ಟೆಲ್ ಅವೀವ್( ಇಸ್ರೇಲ್): ಗಾಜಾ ಪಟ್ಟಿಯಲ್ಲಿ ಇಸ್ರೇಲ್ ವಿರುದ್ಧ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸಲು ಶಾಂತಿ ಮಾತುಕತೆಗಾಗಿ ಹಮಾಸ್ ನ ರಾಜಕೀಯ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ನೇತೃತ್ವದ ಹಿರಿಯ ನಾಯಕರ ನಿಯೋಗವು ಈಜಿಪ್ಟ್ ರಾಜಧಾನಿ ಕೈರೋ ತಲುಪಿದೆ. ಹಿರಿಯ ನಾಯಕರಾದ ಮೂಸಾ ಅಬು ಮರ್ಜೂಕ್ ಮತ್ತು ಖಲೀಲ್ ಅಲ್ ಹಯ್ಯ ಅವರನ್ನೂ ಒಳಗೊಂಡ ನಿಯೋಗ ಗುರುವಾರ ಕೈರೋ ತಲುಪಿ ಈಜಿಪ್ಟ್ ನ ಗುಪ್ತಚರ ಮುಖ್ಯಸ್ಥ ಮೇಜರ್ ಜನರಲ್ ಅಬ್ಬಾಸ್ ಕಾಮೆಲ್ ನೇತೃತ್ವದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿತು.
ಈಜಿಪ್ಟ್ ಮೂಲಗಳ ಪ್ರಕಾರ, ಕಳೆದ ವಾರದಿಂದ ಪ್ಯಾರಿಸ್ನಲ್ಲಿ ನಡೆಯುತ್ತಿರುವ ಶಾಂತಿ ಮಾತುಕತೆಗಳ ಸುತ್ತ ಚರ್ಚೆಗಳು ಕೇಂದ್ರೀಕೃತವಾಗಿವೆ. ಪ್ಯಾರಿಸ್ ಮಾತುಕತೆಗಳಲ್ಲಿ ಕತಾರ್, ಈಜಿಪ್ಟ್, ಅಮೆರಿಕ ಮತ್ತು ಇಸ್ರೇಲ್ ಅಧಿಕಾರಿಗಳು ಭಾಗವಹಿಸಿದ್ದರು.
ಪ್ಯಾರಿಸ್ ಚರ್ಚೆಗಳ ಪ್ರಕಾರ, ಹಮಾಸ್ ವಶದಲ್ಲಿರುವ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ವಿಶಾಲ ಚೌಕಟ್ಟನ್ನು ಒಪ್ಪಲಾಗಿದೆ. ಇದರ ಅಡಿ ಮೊದಲ ಹಂತದಲ್ಲಿ ಹಮಾಸ್ 35 ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು ಮತ್ತು ಇದರಲ್ಲಿ ವೃದ್ಧರು, ರೋಗಿಗಳು ಮತ್ತು ಮಹಿಳಾ ಕೈದಿಗಳು ಸೇರಿರುತ್ತಾರೆ ಎಂಬ ಷರತ್ತು ಹಾಕಲಾಗಿದೆ. ಆದರೆ, ಯುದ್ಧವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂಬ ಹಮಾಸ್ನ ಬೇಡಿಕೆಯನ್ನು ಇಸ್ರೇಲ್ ಸಾರಾಸಗಟಾಗಿ ತಿರಸ್ಕರಿಸಿದೆ.
ಇಸ್ರೇಲ್ ಪ್ರಧಾನಿ ಕಚೇರಿಯ (ಪಿಎಂಒ) ಮೂಲಗಳ ಪ್ರಕಾರ, ಇಸ್ರೇಲ್ ಆರು ವಾರಗಳ ಕದನ ವಿರಾಮಕ್ಕೆ ಒಪ್ಪಿಕೊಂಡಿದೆ ಹಾಗೂ 35 ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಒಪ್ಪಂದ ಇದರಲ್ಲಿದೆ. ಇಸ್ರೇಲ್ ಜೈಲುಗಳಲ್ಲಿರುವ ಹೆಚ್ಚಿನ ಸಂಖ್ಯೆಯ ಪ್ಯಾಲೆಸ್ಟೈನಿಯರನ್ನು ಇಸ್ರೇಲಿ ಒತ್ತೆಯಾಳುಗಳ ಬದಲಿಗೆ ವಿನಿಮಯ ಮಾಡಿಕೊಳ್ಳಬೇಕು ಎಂದು ಹಮಾಸ್ ಬಯಸಿದ್ದರೂ, ಇಸ್ರೇಲ್ ಇದಕ್ಕೆ ಒಪ್ಪಿಲ್ಲ. ಅಧಿಕಾರಿಗಳ ಪ್ರಕಾರ, ಹಮಾಸ್ ಬಿಡುಗಡೆ ಮಾಡುವ ಇಸ್ರೇಲಿ ಒತ್ತೆಯಾಳುಗಳ ಸಂಖ್ಯೆಗಿಂತ ಮೂರು ಪಟ್ಟು ಹೆಚ್ಚು ಪ್ಯಾಲೆಸ್ಟೈನ್ ಕೈದಿಗಳನ್ನು ಬಿಡುಗಡೆ ಮಾಡುವುದಾಗಿ ಇಸ್ರೇಲ್ ಹೇಳಿದೆ.
ನವೆಂಬರ್ 24 ರಿಂದ ಡಿಸೆಂಬರ್ 1 ರವರೆಗೆ ಇಸ್ರೇಲ್ ಮತ್ತು ಹಮಾಸ್ ನಡುವಿನ ಒಂದು ವಾರದ ಶಾಂತಿ ಕದನ ವಿರಾಮದಲ್ಲಿ, ಹಮಾಸ್ ವಶದಲ್ಲಿದ್ದ 105 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ. ಇಸ್ರೇಲಿ ಒತ್ತೆಯಾಳುಗಳಿಗೆ ಬದಲಾಗಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಒಟ್ಟು 324 ಪ್ಯಾಲೆಸ್ಟೈನ್ ಕೈದಿಗಳನ್ನು ಇಸ್ರೇಲಿ ಜೈಲುಗಳಿಂದ ಬಿಡುಗಡೆ ಮಾಡಲಾಯಿತು. ಏತನ್ಮಧ್ಯೆ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 27,000 ದಾಟಿದೆ ಎಂದು ಗಾಜಾ ಮೂಲದ ಆರೋಗ್ಯ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ :ಭಾರತಕ್ಕೆ 4 ಬಿಲಿಯನ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಮಾರಾಟಕ್ಕೆ ಅನುಮತಿ ಕೊಟ್ಟ ಬೈಡನ್ ಸರ್ಕಾರ