ಢಾಕಾ/ಕೋಲ್ಕತ್ತಾ:ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ದ್ವೇಷ ಮತ್ತು ದೌರ್ಜನ್ಯ ಎಲ್ಲೆ ಮೀರುತ್ತಿದೆ. ಇಸ್ಕಾನ್ ಸನ್ಯಾಸಿ ಚಿನ್ಮಯಿ ಕೃಷ್ಣ ದಾಸ್ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಬಂಧಿಸಿದ್ದರೆ, ಶನಿವಾರ ಢಾಕಾ ಬಳಿ ಇರುವ ಇಸ್ಕಾನ್ ದೇವಸ್ಥಾನದ ಮೇಲೆ ಪೆಟ್ರೋಲ್ ಬಾಂಬ್ ದಾಳಿ ಮಾಡಿ ಬೆಂಕಿ ಹಚ್ಚಲಾಗಿದೆ. ಘಟನೆಯಲ್ಲಿ ವಿಗ್ರಹಗಳು, ಇತರ ವಸ್ತುಗಳು ಸುಟ್ಟು ಹೋಗಿವೆ ಎಂದು ಆರೋಪಿಸಲಾಗಿದೆ.
ಶನಿವಾರ ಮುಂಜಾನೆ ಜನರ ಗುಂಪೊಂದು ಇಸ್ಕಾನ್ ದೇವಾಲಯದ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದೆ. ಬೆಂಕಿಯನ್ನು ತ್ವರಿತವಾಗಿ ನಂದಿಸಲಾಯಿತು. ಆದಾಗ್ಯೂ ವಿಗ್ರಹಕ್ಕೆ ಹಾನಿಯಾಗಿದೆ. ಇತರ ವಸ್ತುಗಳು ಸುಟ್ಟು ಹೋಗಿವೆ ಎಂದು ಬಾಂಗ್ಲಾದೇಶದ ಇಸ್ಕಾನ್ನ ಪ್ರಧಾನ ಕಾರ್ಯದರ್ಶಿ ಚಾರು ಚಂದ್ರ ದಾಸ್ ಅವರು ತಿಳಿಸಿದ್ದಾರೆ.
ಪೆಟ್ರೋಲ್ ಬಳಸಿ ಬೆಂಕಿ:ಈ ಬಗ್ಗೆ ಅವರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಮುಂಜಾನೆ 2-3 ಗಂಟೆಯ ನಡುವೆ ಹರೇ ಕೃಷ್ಣ ನಾಮಹಟ್ಟಾ ಸಂಘದ ಅಧೀನದಲ್ಲಿರುವ ರಾಧಾ ಕೃಷ್ಣ ದೇವಸ್ಥಾನ ಮತ್ತು ಮಹಾಭಾಗ್ಯ ಲಕ್ಷ್ಮೀ ನಾರಾಯಣ ದೇವಸ್ಥಾನಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ದೇವಸ್ಥಾನದ ಹಿಂಭಾಗದಲ್ಲಿರುವ ಮೇಲ್ಛಾವಣಿ ಮುರಿದು ಪೆಟ್ರೋಲ್ ಅಥವಾ ಆಕ್ಟೇನ್ ಬಳಸಿ ಬೆಂಕಿಯನ್ನು ಹಚ್ಚಲಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.