ಟೆಹ್ರಾನ್ (ಇರಾನ್):ಹಿಜ್ಬುಲ್ಲಾ ಮತ್ತು ಹಮಾಸ್ ಕಮಾಂಡರ್ಗಳಿಬ್ಬರನ್ನು ಇಸ್ರೇಲ್ ಸೇನೆ ಸದೆಬಡಿದಿದೆ. ಇದರ ಬೆನ್ನಲ್ಲೇ ಎರಡೂ ರಾಷ್ಟ್ರಗಳು ಇಸ್ರೇಲ್ ಮೇಲೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಘೋಷಿಸಿವೆ. ಇಸ್ರೇಲ್ ಗಡಿಭಾಗದಲ್ಲಿ ಮಾತ್ರವಲ್ಲ, ಇನ್ನು ಮುಂದೆ ಒಳನುಗ್ಗಿ ದಾಳಿ ನಡೆಸುತ್ತೇವೆ ಎಂದು ಹಿಜ್ಬುಲ್ಲಾ ಪಡೆ ಶನಿವಾರ ಹೇಳಿದೆ.
ತಮ್ಮ ಕಮಾಂಡರ್ ಅನ್ನು ಇಸ್ರೇಲ್ ಸೇನೆ ದಾಳಿ ಮಾಡಿ ಹತ್ಯೆ ಮಾಡಿದೆ. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲಾಗುವುದು. ಲೆಬನಾನ್‌ನ ಟೆಹ್ರಾನ್ ಬೆಂಬಲಿತ ಹಿಜ್ಬುಲ್ಲಾ ಗುಂಪು ಇಸ್ರೇಲ್‌ನ ಒಳಪ್ರದೇಶಗಳ ಮೇಲೆ ದಾಳಿ ಮಾಡುತ್ತದೆ. ಇನ್ನು ಮುಂದೆ ಇದು ಕೇವಲ ಮಿಲಿಟರಿ ಗುರಿಗಳಿಗೆ ಸೀಮಿತವಾಗಿರುವುದಿಲ್ಲ ಎಂದು ಇರಾನ್ ಎಚ್ಚರಿಕೆ ರವಾನಿಸಿದೆ.
ಗಾಜಾದ ಮೇಲೆ ಇಸ್ರೇಲ್ ಯುದ್ಧ ಸಾರಿದ ಬಳಿಕ ಪ್ಯಾಲೆಸ್ಟೈನ್ ಬೆಂಬಲಿತ ಹಿಜ್ಬುಲ್ಲಾ ಗುಂಪು, ಇಸ್ರೇಲ್ ಸೇನೆ ಜೊತೆಗೆ ಪ್ರತಿದಿನ ಗಡಿಯಲ್ಲಿ ಗುಂಡಿನ ವಿನಿಮಯ ನಡೆಸುತ್ತಿದೆ. ಗಡಿ ಬಳಿಕ ಮಿಲಿಟರಿ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಲೇ ಇದೆ. ಇದಕ್ಕೆ ಇಸ್ರೇಲ್ ಪ್ರತಿದಾಳಿ ಕೂಡ ನಡೆಸುತ್ತಿದೆ. ಈ ವೇಳೆ ಇತ್ತೀಚೆಗೆ ಹಿಜ್ಬುಲ್ಲಾ ಗುಂಪಿನ ಕಮಾಂಡರ್ ಸಾವಿಗೀಡಾಗಿದ್ದಾನೆ. ಇದು ಇರಾನ್ ಅನ್ನು ಕೆರಳಿಸಿದೆ.