ಹೈದರಾಬಾದ್: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ವಿದೇಶಾಂಗ ಸಚಿವ ಹೊಸೈನ್ ಅಮೀರ್-ಅಬ್ದುಲ್ಲಾಹಿಯಾನ್ ಅವರು ಭಾನುವಾರ ಪರ್ವತ ಭೂಪ್ರದೇಶ ಮತ್ತು ಹಿಮಾವೃತ ವಾತಾವರಣದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ಸಚಿವ ಹೊಸೈನ್ ಅಮೀರ್-ಅಬ್ದುಲ್ಲಾಹಿಯಾನ್ ಅವರ ಸಾವಿನ ಘಟನೆಯು ಈ ಹಿಂದೆ ವಿಮಾನ ಅಪಘಾತಗಳಲ್ಲಿ ಗಣ್ಯರು ಮೃತಪಟ್ಟ ಕಹಿ ಘಟನೆಗಳನ್ನು ನೆನಪಿಸಿದೆ. ವಿಮಾನ, ಹೆಲಿಕಾಪ್ಟರ್ ದುರಂತಗಳಲ್ಲಿ 1936 ರಿಂದ ಯಾರೆಲ್ಲಾ ಸಾವಿಗೀಡಾಗಿದ್ದಾರೆ ಎಂಬ ಮಾಹಿತಿ ಹೀಗಿದೆ.
ವಿಮಾನ ಅಪಘಾತದಲ್ಲಿ ಮೃತಪಟ್ಟ ರಾಷ್ಟ್ರಗಳ ಮುಖ್ಯಸ್ಥರ ಪಟ್ಟಿ ಇಲ್ಲಿದೆ:
- ಡಿಸೆಂಬರ್ 9, 1936 ರಲ್ಲಿ ಡಗ್ಲಾಸ್ DC-2 ವಿಮಾನವು ಟೇಕ್-ಆಫ್ ಆದ ನಂತರ ಕ್ರೊಯ್ಡಾನ್ ವಿಮಾನ ನಿಲ್ದಾಣದ ಬಳಿಯ ಮನೆಗಳಿಗೆ ಅಪ್ಪಳಿಸಿತು. ಈ ದುರಂತದಲ್ಲಿ , ಸ್ವಿಡಿಷ್ ಪ್ರಧಾನ ಮಂತ್ರಿ ಅರ್ವಿಡ್ ಲಿಂಡ್ಮನ್ ಅವರು ಮೃತಪಟ್ಟಿದ್ದಾರೆ.
- ಸೆಪ್ಟೆಂಬರ್ 7, 1940 ರಂದು ಒಂದು ವರ್ಷಕ್ಕಿಂತ ಹೆಚ್ಚು ಕಾಲ ಪರಾಗ್ವೆಯ ಅಧ್ಯಕ್ಷರಾಗಿ ಆಡಳಿತ ನಡೆಸಿದ್ದ ಜನರಲ್ ಜೋಸ್ ಫೆಲಿಕ್ಸ್ ಎಸ್ಟಿಗಾರಿಬಿಯಾ ಅವರು ತಮ್ಮ ಪತ್ನಿಯೊಂದಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿ ಇಬ್ಬರು ಸಾವನ್ನಪ್ಪಿದ್ದರು. ಈ ದುರ್ಘಟನೆಯಲ್ಲಿ ವಿಮಾನದ ಪೈಲಟ್ ಸಹಾ ಸಾವನ್ನಪ್ಪಿದ್ದರು.
- ಜುಲೈ 7, 1943 ರಂದು ಪೊಲೀಷ್ ಸೈನಿಕ ಮತ್ತು ರಾಜನೀತಿ ತಜ್ಞ ವ್ಲಾಡಿಸ್ಲಾವ್ ಸಿಕೋರ್ಸ್ಕಿ ಅವರು ವಿಶ್ವ ಸಮರ II ರ ಸಮಯದಲ್ಲಿ ಪೋಲೆಂಡ್ ಸರ್ಕಾರವನ್ನು ಮುನ್ನಡೆಸಿದರು, ಅವರ ವಿಮಾನವು ಜಿಬ್ರಾಲ್ಟರ್‌ನಲ್ಲಿ ಪತನಗೊಂಡಾಗ ನಿಧನರಾದರು.
- ಜೂನ್ 16, 1958 ರಂದು, ಬ್ರೆಜಿಲ್ನ ಆಗಿನ ಹಂಗಾಮಿ ಅಧ್ಯಕ್ಷ ನೆರೆಯು ರಾಮೋಸ್ ಅವರು ಕ್ರೂಝೈರೊ ಏರ್ಲೈನ್ಸ್ಗೆ ಸೇರಿದ ವಿಮಾನವು ಅಪಘಾತಕ್ಕೀಡಾಗಿದಾಗ ಮೃತಪಟ್ಟರು.
- ಮಾರ್ಚ್ 29, 1959 ರಂದು ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ನ ಅಧ್ಯಕ್ಷ ಮತ್ತು ಸ್ವಾತಂತ್ರ್ಯದ ವೀರರಾದ ಬಾರ್ತೆಲೆಮಿ ಬೊಗಾಂಡಾ ಅವರ ವಿಮಾನ ಅಪಘಾತದ ನಂತರ ನಿಧನರಾದರು.
- ಸೆಪ್ಟೆಂಬರ್ 18, 1961 ರಂದು ಕಾಂಗೋದಲ್ಲಿ ಶಾಂತಿ ಮಧ್ಯಸ್ಥಿಕೆ ವಹಿಸಲು ಕರ್ತವ್ಯದಲ್ಲಿದ್ದ ಅಂದಿನ ಯುಎನ್ ಸೆಕ್ರೆಟರಿ-ಜನರಲ್ ಡಾಗ್ ಹ್ಯಾಮರ್ಸ್ಕ್‌ಜೋಲ್ಡ್ ಅವರ ವಿಮಾನವು ಜಾಂಬಿಯಾದಲ್ಲಿ ಅಪಘಾತಕ್ಕೀಡಾಯಿತು. ಅಪಘಾತದಲ್ಲಿ ಹ್ಯಾಮರ್ಸ್ಕ್‌ಜೋಲ್ಡ್ ಸೇರಿದಂತೆ 16 ಜನರು ಸಾವನ್ನಪ್ಪಿದ್ದಾರೆ.
- ಏಪ್ರಿಲ್ 13, 1966 ರಂದು ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಇರಾಕ್ ಅಧ್ಯಕ್ಷ ಅಬ್ದುಲ್ ಸಲಾಮ್ ಆರಿಫ್ ನಿಧನರಾದರು. ಆರಿಫ್ ಫೆಬ್ರವರಿ 1963 ರಲ್ಲಿ ದಂಗೆಯ ಮೂಲಕ ಅಧಿಕಾರಕ್ಕೆ ಬಂದಿದ್ದರು.
- ಏಪ್ರಿಲ್ 27, 1969 ರಂದು ಬೊಲಿವಿಯಾದ ಅಧ್ಯಕ್ಷ ರೆನೆ ಬ್ಯಾರಿಯೆಂಟೋಸ್ ಅವರ ಹೆಲಿಕಾಪ್ಟರ್ ಕೊಚಬಾಂಬಾ ನಗರದಲ್ಲಿ ಅಪಘಾತಕ್ಕೀಡಾಗಿತ್ತು. ಈ ದುರಂತದಲ್ಲಿ ಬೊಲಿವಿಯಾದ ಅಧ್ಯಕ್ಷ ಕೊನೆಯುಸಿರೆಳಿದ್ದರು.
- ಜನವರಿ 18, 1977 ರಂದು, ಯುಗೊಸ್ಲಾವಿಯನ್ ಪ್ರಧಾನ ಮಂತ್ರಿ ಡಿಜೆಮಲ್ ಬಿಜೆಡಿಕ್ ಅವರ ಲಿಯರ್ಜೆಟ್ 25 ವಿಮಾನವು ಬೋಸ್ನಿಯಾ ಮತ್ತು ಹರ್ಜೆಗೋವಿನಾದ ಕ್ರೆಸೆವೊ ನಗರದ ಬಳಿ ಇನಾಕ್ ಪರ್ವತಕ್ಕೆ ಅಪ್ಪಳಿಸಿತು. ಅಪಘಾತದಲ್ಲಿ ಬಿಜೆಡಿಕ್, ಅವರ ಪತ್ನಿ ಮತ್ತು ಇತರೆ ಆರು ಮಂದಿ ಸಾವನ್ನಪ್ಪಿದ್ದರು.
- ಮೇ 27, 1979 ರಂದು ಆಫ್ರಿಕನ್ ಶೃಂಗಸಭೆಯಲ್ಲಿ ಭಾಗವಹಿಸಲು ಹೋಗುತ್ತಿದ್ದ ಮೌರಿಟಾನಿಯಾದ ಪ್ರಧಾನ ಮಂತ್ರಿ ಅಹ್ಮದ್ ಓಲ್ಡ್ ಬೌಸಿಫ್ ಅವರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಡಾಕರ್ ಕರಾವಳಿಯಲ್ಲಿ ಪತನಗೊಂಡಿತು. ಬೌಸಿಫ್ ಅಪಘಾತದಲ್ಲಿ ಸಾವನ್ನಪ್ಪಿದರು.
- ಡಿಸೆಂಬರ್ 4, 1980 ರಂದು ಪೋರ್ಚುಗೀಸ್ ಪ್ರಧಾನ ಮಂತ್ರಿ ಫ್ರಾನ್ಸಿಸ್ಕೊ ಸಾ ಕಾರ್ನೆರೊ ಮತ್ತು ರಕ್ಷಣಾ ಮಂತ್ರಿ ಅಡೆಲಿನೊ ಅಮರೊ ಡಾ ಕೋಸ್ಟಾ ಅವರು ತಮ್ಮ ವಿಮಾನವು ಟೇಕಾಫ್ ಆದ ನಂತರ ರಾಜಧಾನಿ ಲಿಸ್ಬನ್‌ನಲ್ಲಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದರು.
- ಮೇ 24, 1981 ರಂದು, ಈಕ್ವೆಡಾರ್ ಅಧ್ಯಕ್ಷ ಜೈಮ್ ರೋಲ್ಡೋಸ್ ಅಗುಲೆರಾ ಮತ್ತು ರಕ್ಷಣಾ ಸಚಿವ ಮೇಜರ್ ಜನರಲ್ ಮಾರ್ಕೊ ಸುಬಿಯಾ ಮಾರ್ಟಿನೆಜ್ ಅವರು ಪ್ರಯಾಣಿಸುತ್ತಿದ್ದ ವಿಮಾನವು ಪೆರುವಿಯನ್ ಗಡಿಯ ಬಳಿ ಪತನಗೊಂಡಾಗ ಅವರಿಬ್ಬರು ತಮ್ಮ ಪ್ರಾಣವನ್ನು ಕಳೆದುಕೊಂಡರು.
- ಜುಲೈ 31, 1981 ರಂದು, ಪನಾಮಾದ ಅಧ್ಯಕ್ಷ ಓಮರ್ ಟೊರಿಜೋಸ್ ಅವರು ಹಾರುತ್ತಿದ್ದ ಸಣ್ಣ ವಿಮಾನವು ಕಾಡಿನಲ್ಲಿ ಬಿದ್ದಾಗ ನಿಧನರಾದರು.
- ಅಕ್ಟೋಬರ್ 10, 1986 ರಂದು, ಮೊಜಾಂಬಿಕ್ ಅಧ್ಯಕ್ಷ ಸಮೋರಾ ಮಾಚೆಲ್ ಮತ್ತು ಹಲವಾರು ಮೊಜಾಂಬಿಕನ್ ಮಂತ್ರಿಗಳನ್ನು ಹೊತ್ತ ಡಬಲ್-ಎಂಜಿನ್ ವಿಮಾನವು ಮೊಜಾಂಬಿಕ್-ದಕ್ಷಿಣ ಆಫ್ರಿಕಾದ ಗಡಿಯ ಬಳಿ ಅಪಘಾತಕ್ಕೀಡಾಯಿತು. ಮಾಚೆಲ್, ಕೆಲವು ಮಂತ್ರಿಗಳು ಮತ್ತು ಮೊಜಾಂಬಿಕನ್ ಸರ್ಕಾರದ ಉನ್ನತ ಶ್ರೇಣಿಯ ಅಧಿಕಾರಿಗಳು ಸೇರಿದಂತೆ 33 ಜನರು ಅಪಘಾತದಲ್ಲಿ ಸಾವನ್ನಪ್ಪಿದರು. ಅಪಘಾತದ ನಂತರ ನಡೆಸಿದ ತನಿಖೆಯಲ್ಲಿ, ಪೈಲಟ್ ತಪ್ಪಿತಸ್ಥ ಎಂದು ಕಂಡುಬಂದಿತು.
- ಜೂನ್ 1, 1987 ರಂದು, ಲೆಬನಾನಿನ ಪ್ರಧಾನ ಮಂತ್ರಿ ರಶೀದ್ ಕರಾಮಿ ಅವರು ಬೈರುತ್‌ಗೆ ಹೋಗಲು ಹಡಗಿನಲ್ಲಿದ್ದ ಹೆಲಿಕಾಪ್ಟರ್‌ನಲ್ಲಿ ಬಾಂಬ್ ಸ್ಫೋಟಗೊಂಡು ಪ್ರಾಣ ಕಳೆದುಕೊಂಡರು. ಅಂದಾಜು 300 ಗ್ರಾಂ ತೂಕದ ಮತ್ತು ಅವರು ಕುಳಿತುಕೊಳ್ಳುವ ಆಸನದ ಹಿಂದೆ ಇರಿಸಲಾದ ರಿಮೋಟ್-ನಿಯಂತ್ರಿತ ಬಾಂಬ್, ಅದು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಸ್ಫೋಟಗೊಂಡಿತು.
- ಆಗಸ್ಟ್ 18, 1988 ರಂದು ಪಾಕಿಸ್ತಾನದ ಅಧ್ಯಕ್ಷ ಜಿಯಾ-ಉಲ್-ಹಕ್, ಅವರ ಐದು ಜನರಲ್‌ಗಳು ಮತ್ತು ಯುಎಸ್ ರಾಯಭಾರಿ ಅರ್ನಾಲ್ಡ್ ಲೂಯಿಸ್ ರಾಫೆಲ್ ಅವರನ್ನು ಹೊತ್ತೊಯ್ಯುತ್ತಿದ್ದ C-130 ಮಿಲಿಟರಿ ವಿಮಾನವು ರಾಜಧಾನಿ ಇಸ್ಲಾಮಾಬಾದ್‌ನಿಂದ ಸುಮಾರು 530 ಕಿಲೋಮೀಟರ್ ದೂರದ ಬಹವಾಲ್‌ಪುರ ಬಳಿ ಅಪಘಾತಕ್ಕೀಡಾಯಿತು. ಈ ದುರಂತದಲ್ಲಿ ಎಲ್ಲರೂ ಸಾವನ್ನಪ್ಪಿದ್ದರು.
- ಏಪ್ರಿಲ್ 6, 1994 ರಂದು, ಕಿಗಾಲಿ ವಿಮಾನ ನಿಲ್ದಾಣದ ಬಳಿ ಬುರುಂಡಿಯ ಅಧ್ಯಕ್ಷ ಸಿಪ್ರಿಯನ್ ಟರಿಯಾಮಿರಾ ಮತ್ತು ರುವಾಂಡನ್ ಅಧ್ಯಕ್ಷ ಜುವೆನಲ್ ಹಬ್ಯಾರಿಮಾನಾ ಅವರನ್ನು ಹೊತ್ತೊಯ್ಯುವ ವಿಮಾನದ ಮೇಲೆ ಗುಂಡು ಹಾರಿಸಲಾಯಿತು. ರಾಷ್ಟ್ರಪತಿ ಭವನ ಇರುವ ಪ್ರದೇಶದಲ್ಲಿ ಪತನಗೊಂಡಿದ್ದು, ದುರ್ಘಟನೆಯಲ್ಲಿ ಯಾರೂ ಬದುಕುಳಿಯಲಿಲ್ಲ.
- ಫೆಬ್ರವರಿ 26, 2004 ರಂದು, ಮೆಸಿಡೋನಿಯಾದ ಎರಡನೇ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಬೋರಿಸ್ ಟ್ರಾಜ್ಕೊವ್ಸ್ಕಿ ಮತ್ತು ಅವರ ಜೊತೆಗಿದ್ದ ನಿಯೋಗವನ್ನು ಹೊತ್ತೊಯ್ಯುವ ವಿಮಾನವು ಬೋಸ್ನಿಯಾ ಮತ್ತು ಹರ್ಜೆಗೋವಿನಾದ ಮೋಸ್ಟರ್ ನಗರದ ಬಳಿ ಅಪಘಾತಕ್ಕೀಡಾಯಿತು. ಟ್ರಾಜ್ಕೊವ್ಸ್ಕಿ ಮತ್ತು ಅವರ ಸಲಹೆಗಾರರು ಸೇರಿದಂತೆ ಎಂಟು ಜನರು ಅಪಘಾತದಲ್ಲಿ ಸಾವನ್ನಪ್ಪಿದರು. "ಪೈಲಟ್ ದೋಷದ" ಪರಿಣಾಮದಿಂದಾಗಿ ಈ ವಿಮಾನ ಅಪಘಾತ ಸಂಭವಿಸಿತ್ತು.
- ಏಪ್ರಿಲ್ 10, 2010 ರಂದು, ಪೋಲೆಂಡ್‌ನ ಅಧ್ಯಕ್ಷ ಲೆಚ್ ಕಾಸಿನ್ಸ್ಕಿ ಮತ್ತು ಅವರ ಪತ್ನಿ ಸೇರಿದಂತೆ 96 ಜನರನ್ನು ಹೊತ್ತ ಟುಪೊಲೆವ್ 154 ವಿಮಾನವು ರಷ್ಯಾದ ಸ್ಮೋಲೆನ್ಸ್ಕ್ ವಿಮಾನ ನಿಲ್ದಾಣಕ್ಕೆ ಇನ್ನು ಕೇಲವೇ ಕ್ಷಣಗಳಲ್ಲಿ ತಲುಪಬೇಕಾಗಿತ್ತು. ಆದ್ರೆ ದಟ್ಟವಾದ ಮಂಜಿನಿಂದಾಗಿ ಪೈಲಟ್ಗೆ ರನ್ವೇ ಗೋಚರಿಸದೇ ಲ್ಯಾಂಡಿಂಗ್ ಮಾಡಲು ಮುಂದಾದಾಗ ಅವರ ವಿಮಾನ ಅರಣ್ಯ ಪ್ರದೇಶದಲ್ಲಿ ಪತನಗೊಂಡಿದ್ದು, ಈ ವೇಳೆ ಅಧ್ಯಕ್ಷ ಸೇರಿದಂತೆ 96 ಜನರು ಸಾವನ್ನಪ್ಪಿದರು.
- ಫೆಬ್ರವರಿ 5, 2024 ರಂದು ಚಿಲಿಯ ಮಾಜಿ ಅಧ್ಯಕ್ಷ ಸೆಬಾಸ್ಟಿಯನ್ ಪಿನೆರಾ ಮತ್ತು ಅವರ ಪರಿವಾರವನ್ನು ಹೊತ್ತ ರಾಬಿನ್ಸನ್ R-66 ಹೆಲಿಕಾಪ್ಟರ್ ಲಾಸ್ ರಿಯೋಸ್ ಪ್ರದೇಶದ ರಾಂಕೊ ಸರೋವರಕ್ಕೆ ಅಪ್ಪಳಿಸಿತು. ಭಾರೀ ಮಳೆ ಮತ್ತು ದಟ್ಟವಾದ ಮಂಜಿನಿಂದಾಗಿ ಹೆಲಿಕಾಪ್ಟರ್ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ. ಈ ಅಪಘಾತದಲ್ಲಿ ಮೂರು ಜನರು ಸರೋವರಕ್ಕೆ ಹಾರಿ ದಡಕ್ಕೆ ಬರಲು ಯಶಸ್ವಿಯಾದರು. ಆದರೆ ಪಿನೇರಾ ಅವರು ತಮ್ಮ ಸೀಟ್ ಬೆಲ್ಟ್ ಅನ್ನು ಬಿಚ್ಚಲು ಸಾಧ್ಯವಾಗದ ಕಾರಣ ಸರೋವರದಲ್ಲಿ ಮುಳುಗಿ ಸಾವನ್ನಪ್ಪಿದ್ದರು.
ಓದಿ:ಹೆಲಿಕಾಪ್ಟರ್ ಪತನ; ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸೇರಿ 9 ಮಂದಿ ದುರ್ಮರಣ - Iran President helicopter crash