ನ್ಯೂಯಾರ್ಕ್:ಚುನಾವಣೆ ಪ್ರಚಾರದತ್ತ ಗಮನಹರಿಸಲು ಭಾರತೀಯ - ಅಮೆರಿಕನ್ ವೈದ್ಯ ಅಮಿಶ್ ಶಾ ಅವರು ಅಮೆರಿಕದ ಅರಿಜೋನಾ ರಾಜ್ಯದಲ್ಲಿರುವ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅರಿಜೋನಾ ಶಾಸಕಾಂಗದಲ್ಲಿ ಸೇವೆ ಸಲ್ಲಿಸಿದ ಮೊದಲ ಭಾರತೀಯ - ಅಮೆರಿಕನ್ ಎಂಬ ಹೆಗ್ಗಳಿಕೆ ಪಡೆದುಕೊಂಡಿರುವ ಅಮಿಶ್ ಶಾ, ಕಳೆದ ವರ್ಷ ರಾಜ್ಯದ 1 ನೇ ಕಾಂಗ್ರೆಷನಲ್ ಡಿಸ್ಟ್ರಿಕ್ಟ್‌ನಿಂದ ಡೆಮಾಕ್ರಟ್ ಆಗಿ ತಮ್ಮ ಉಮೇದುವಾರಿಕೆ ಘೋಷಿಸಿಕೊಂಡಿದ್ದಾರೆ. 46 ವರ್ಷ ವಯಸ್ಸಿನ ಶಾ ಪ್ರಚಾರದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ.
ಮಿಶ್ರ ಭಾವನೆಗಳೊಂದಿಗೆ ನನ್ನ ಪ್ರಚಾರವನ್ನು ಮುಂದುವರಿಸಲು ನಾನು ಈ ವಾರ ಹೌಸ್ ಆಫ್ ರೆಪ್ರೆಸೆಂಟೆಟಿವ್ಸ್ಗೆ ರಾಜೀನಾಮೆ ನೀಡಿದ್ದೇನೆ. ರಾಜ್ಯ ಶಾಸಕಾಂಗದಲ್ಲಿ ಸೇವೆ ಸಲ್ಲಿಸುವುದು ನಂಬಲಾಗದ ಗೌರವ. ಈ ಸೇವೆ ವೈವಿಧ್ಯಮಯ ದೃಷ್ಟಿಕೋನಗಳನ್ನು ನೀಡುತ್ತದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ನಮ್ಮ ಸಾಮೂಹಿಕ ಮೌಲ್ಯಗಳನ್ನು ರಾಷ್ಟ್ರೀಯ ವೇದಿಕೆಗೆ ತರಲು ನಾನು ಉತ್ಸುಕನಾಗಿದ್ದೇನೆ. ಎಂದು ಶಾ ತಮ್ಮ X ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
15 ವರ್ಷಗಳಿಂದ ವೈದ್ಯರಾಗಿ ಸೇವೆ ಸಲ್ಲಿಸಿರುವ ಶಾ ಅವರೊಂದಿಗೆ ಕನಿಷ್ಠ ಆರು ಇತರ ಅಭ್ಯರ್ಥಿಗಳು ಡೆಮಾಕ್ರಟಿಕ್ ಉಮೇದುವಾರಿಕೆ ಬಯಸುತ್ತಿದ್ದಾರೆ, ಇದು ಸ್ಕಾಟ್ಸ್‌ಡೇಲ್ ಮತ್ತು ಉತ್ತರ ಫೀನಿಕ್ಸ್‌ನ ಭಾಗಗಳನ್ನು ಒಳಗೊಂಡಿದೆ. ಶಾ ದೇಶದ ಪ್ರಮುಖ ಸಮಸ್ಯೆಗಳಾದ ಶಿಕ್ಷಣ, ಆರೋಗ್ಯ ಮತ್ತು ಮತದಾನದ ಹಕ್ಕುಗಳು ಬಗ್ಗೆ ಧ್ವನಿ ಎತ್ತಲು ನಿರ್ಧರಿಸಿದ್ದಾರೆ. ಕಾರ್ಮಿಕರಿಗೆ ನ್ಯಾಯಯುತ ವೇತನ, ಸಾರ್ವತ್ರಿಕ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಲು ತೀರ್ಮಾನಿಸಿದ್ದಾರೆ.
ಶಾ ಅವರ ಸೇವೆ ಮತ್ತು ನಾಯಕತ್ವಕ್ಕೆ ಧನ್ಯವಾದ ಅರ್ಪಿಸುತ್ತಾ, ಅರಿಜೋನಾ ಹೌಸ್ ಡೆಮೋಕ್ರಾಟ್‌ಗಳು ಹೀಗೆ ಹೇಳಿದ್ದಾರೆ. ಇದು ಸಕಾಲಿಕ ನಿರ್ಧಾರವಾಗಿದೆ. @DrAmishShah ಅವರು ಹೌಸ್ ಆಫ್ ರೆಪ್ರೆಸೆಂಟೇಟಿವ್ ಸಹೋದ್ಯೋಗಿಗಳಿಗೆ ಪ್ರೀತಿಯ ಮತ್ತು ಚಿಂತನಶೀಲ ವಿದಾಯ ಹೇಳಿದ್ದಾರೆ. ಕಾಂಗ್ರೆಸ್‌ಗೆ ಸ್ಪರ್ಧಿಸುತ್ತಿರುವ ಡಾ ಶಾ ಅವರು 5 ವರ್ಷಗಳ ಅಧಿಕಾರದ ನಂತರ ಇಂದು ರಾಜೀನಾಮೆ ನೀಡಿದ್ದಾರೆ ಎಂದು ಗುಣಗಾನ ಮಾಡಿದ್ದಾರೆ.