ಹೈದರಾಬಾದ್: ಯುದ್ಧಪೀಡಿತ ಗಾಜಾದಲ್ಲಿ 25 ವರ್ಷಗಳ ಬಳಿಕ ಪೋಲಿಯೋ ಪ್ರಕರಣವೊಂದು ಪತ್ತೆಯಾಗಿದೆ. ಗಾಜಾ ನಗರ ದೇರ್ ಅಲ್ ಬಾಲಾಹ್ದಲ್ಲಿ ಲಸಿಕೆ ಪಡೆಯದ 10 ತಿಂಗಳ ಮಗುವಿನಲ್ಲಿ ಸೋಂಕು ದೃಢಪಟ್ಟಿದೆ.
ಮಗುವಿನ ಲಕ್ಷಣಗಳ ಪತ್ತೆ ಬಳಿಕ ಜೋರ್ಡನ್ ರಾಜಧಾನಿ ಅಮ್ಮನ್ನಲ್ಲಿ ಪರೀಕ್ಷೆ ನಡೆಸಲಾಗಿದ್ದು, ಈ ವೇಳೆ ಪೋಲಿಯೋ ದೃಢಪಟ್ಟಿದೆ ಎಂದು ಸಚಿವಾಲಯ ತಿಳಿಸಿದೆ. ಮಗುವು ಐದು ವರ್ಷದೊಳಗೆ ಮಾರಣಾಂತಿಕ ಪಾರ್ಶ್ವವಾಯುಗೆ ತುತ್ತಾಗಬಹುದು. ಇದು ಕಲುಷಿತ ನೀರಿನಿಂದ ಹರಡಿದೆ ಎನ್ನಲಾಗಿದೆ. ಈಗಾಗಲೇ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಹೊರತಾಗಿ ಇಡೀ ಜಗತ್ತು ಪೋಲಿಯೋ ಮುಕ್ತವಾಗಿದೆ. ರೋಗ ಹರಡದಂತೆ ಕ್ರಮ ಕೈಗೊಳ್ಳಲಾಗಿದೆ.
ಯುದ್ಧ ಸಂದರ್ಭದಲ್ಲಿ ಲಸಿಕೀಕರಣ ಅಸಾಧ್ಯ: ಗಾಜಾದಲ್ಲಿ ಪೋಲಿಯೋ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇಸ್ರೇಲ್- ಹಮಾಸ್ ನಡುವಿನ ಯುದ್ಧಕ್ಕೆ ಕದನ ವಿರಾಮ ನೀಡಬೇಕು. ಇದರಿಂದ ಸಾವಿರಾರು ಮಕ್ಕಳಿಗೆ ಲಸಿಕೀಕರಣ ನಡೆಸಬಹುದು ಎಂದು ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಕರೆ ನೀಡಿದ್ದಾರೆ.
ಗಾಜಾದಲ್ಲಿ ಪೋಲಿಯೋ ವೈರಸ್ ಇನ್ನಷ್ಟು ಹರಡಬಹುದು. ಅಲ್ಲಿನ 6,40,000ಕ್ಕಿಂತ ಹೆಚ್ಚಿನ ಮಕ್ಕಳಿಗೆ ಪೋಲಿಯೋ ಲಸಿಕೆ ಅಭಿಯಾನಕ್ಕೆ ವಿಶ್ವಸಂಸ್ಥೆ ಸಿದ್ಧವಾಗಿದೆ. ಯುದ್ಧದ ಸಂದರ್ಭದಲ್ಲಿ ಈ ಲಸಿಕೆ ಅಭಿಯಾನ ನಡೆಸಲು ಸಾಧ್ಯವಿಲ್ಲ. ಪೋಲಿಯೋ ಲಸಿಕೆ ಆರಂಭಕ್ಕೆ ಶಾಂತಿ ಮತ್ತು ಮಾನವೀಯ ಕದನ ವಿರಾಮ ಅತ್ಯಗತ್ಯ ಎಂದು ಗುಟೆರಸ್ ಆಗ್ರಹಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯು ಪೋಲಿಯೋ ಪ್ರಕರಣ ಪತ್ತೆ ಕುರಿತು ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ವಿಶ್ವ ಆರೋಗ್ಯ ಮತ್ತು ಮಕ್ಕಳ ಸಂಸ್ಥೆ, ಆಗಸ್ಟ್ ಅಂತ್ಯದಿಂದ 7 ದಿನಗಳ ಕಾಲ ಯುದ್ಧ ನಿಲ್ಲಿಸುವಂತೆ ಕರೆ ನೀಡಿದೆ. ಇದರಿಂದ 6,40,000 ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಬಹುದು. ಕಳೆದ ತಿಂಗಳ ಗಾಜಾದ ಎರಡು ಪ್ರಮುಖ ನಗರದಲ್ಲಿ ತ್ಯಾಜ್ಯ ನೀರಿನಲ್ಲಿ ಪೋಲಿಯೋ ವೈರಸ್ ಪತ್ತೆಯಾಗಿತ್ತು. ಈ ಮೂಲಕ 25 ವರ್ಷಗಳಿಂದ ಪೋಲಿಯೋ ಮುಕ್ತವಾಗಿದ್ದ ಗಾಜಾದಲ್ಲಿ ಮತ್ತೆ ಪ್ರಕರಣ ಪತ್ತೆಯಾಗಿದೆ ಎಂದು ವಿಶ್ವ ಸಂಸ್ಥೆ ತಿಳಿಸಿದೆ.
ಕಲುಷಿತ ನೀರಿನಲ್ಲಿ ಪತ್ತೆಯಾಗಿದ್ದ ಸೋಂಕು: ಜುಲೈನಲ್ಲಿ ದಕ್ಷಿಣ ಖಾನ್ ಯೂನಿಸ್ ಮತ್ತು ಸೆಂಟ್ರಲ್ ದೇರ್ ಅಲ್ ಬಾಲಾಹ್ದ ತ್ಯಾಜ್ಯ ನೀರಿನಲ್ಲಿ ಎರಡು ಬಗೆಯ ಪೋಲಿಯೋ ವೈರಸ್ ಪತ್ತೆಯಾಗಿತ್ತು ಎಂದು ಡಬ್ಲ್ಯೂಹೆಚ್ಒ ತಿಳಿಸಿತು. ಈ ಸೋಂಕಿನ ತಳಿ 2023ರಲ್ಲಿ ಈಜಿಪ್ಟ್ನಲ್ಲಿ ಪತ್ತೆಯಾಗಿದ್ದ ಸೋಂಕಿನೊಂದಿಗೆ ಸಂಬಂಧ ಹೊಂದಿದೆ. ಡಬ್ಲ್ಯೂಹೆಚ್ಒ ಪೋಲಿಯೋ ಪ್ರಕರಣ ದೃಢೀಕರಿಸದಿದ್ದರೂ ಕೂಡ ಶುಕ್ರವಾರ ಗಾಜಾದಲ್ಲಿ ಮಕ್ಕಳು ತೀವ್ರ ಪಾರ್ಶ್ವವಾಯು ಮತ್ತು ಸ್ನಾಯುಬಲ ಕಳೆದುಕೊಂಡಿರುವ ಪೋಲಿಯೋ ಲಕ್ಷಣವಿರುವ ಮೂರು ಪ್ರಕರಣಗಳು ಕಂಡು ಬಂದಿದೆ ಎಂದು ತಿಳಿಸಿದೆ.
ಈ ಮಕ್ಕಳ ಮಲದ ಮಾದರಿಯನ್ನು ಜೋರ್ಡನ್ನ ರಾಷ್ಟ್ರೀಯ ಪೋಲಿಯೋ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಆಗಸ್ಟ್ ಅಂತ್ಯದೊಳಗೆ 1.6 ಮಿಲಿಯನ್ ಪೋಲಿಯೋ ಲಸಿಕೆ ಡೋಸ್ಗಳು ಗಾಜಾಕ್ಕೆ ಬರಬೇಕು ಎಂದು ನಿರೀಕ್ಷಿಸಲಾಗಿದೆ. ಈ ಸಮಯದಲ್ಲಿ ಎರಡು ಸುತ್ತಿನ ಅಭಿಯಾನ ನಡೆಯಬೇಕಿದೆ. 10 ವರ್ಷದೊಳಗಿನ ಮಕ್ಕಳಿಗೆ ಟೈಪ್ 2 ಪೋಲಿಯೋ ಲಸಿಕೆ (ಡ್ರಾಪ್ಸ್) ನೀಡಲಾಗುವುದು ಎಂದು ತಿಳಿಸಿದ್ದಾರೆ.
ಕೈರೋದಲ್ಲಿ ಮುಂದಿನ ವಾರ ಸಭೆ: ಈ ಕುರಿತು ಮಾತನಾಡಿರುವ ಗಾಜಾದ ಆರೋಗ್ಯ ಸಚಿವಾಲಯ, ತುರ್ತು ಕದನ ವಿರಾಮ ನೀಡದ ಹೊರತಾಗಿ ಸೋಂಕು ಹರಡುವಿಕೆಯನ್ನು ತಡೆಗೆ ಹಾಗೂ ಜನರಿಗೆ ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಈ ನಡುವೆ ಅಂತಾರಾಷ್ಟ್ರೀಯ ಮಧ್ಯಸ್ಥಗಾರರು ಕದನ ವಿರಾಮ ಒಪ್ಪಂದ ಕುರಿತು ಭರವಸೆ ವ್ಯಕ್ತಪಡಿಸಿದ್ದಾರೆ. ಕತಾರ್ನಲ್ಲಿ ಎರಡು ದಿನಗಳ ಮಾತುಕತೆ ನಡೆದಿದೆ. ಕದನ ವಿರಾಮ ಒಪ್ಪಂದಕ್ಕೆ ಸಮ್ಮತಿಗೆ ಕೈರೋದಲ್ಲಿ ಮುಂದಿನ ವಾರ ಮತ್ತೆ ಸಭೆ ನಡೆಸಲಾಗುವುದು ಎಂದಿದ್ದಾರೆ.
ಇದನ್ನೂ ಓದಿ: ಯುದ್ಧ ಭೂಮಿ ಗಾಜಾದಲ್ಲಿ ಪತ್ತೆಯಾಯ್ತು ಪೋಲಿಯೋ ಪ್ರಕರಣ