ಪ್ಯಾರಿಸ್(ಫ್ರಾನ್ಸ್):ಫ್ರಾನ್ಸ್ ಸಂಸತ್ತು ಮಹತ್ವದ ಮಸೂದೆಯೊಂದಕ್ಕೆ ಸೋಮವಾರ ಅನುಮೋದನೆ ನೀಡಿದೆ. ಸಂವಿಧಾನದಲ್ಲಿ ಗರ್ಭಪಾತದ ಹಕ್ಕನ್ನು ಪ್ರತಿಷ್ಠಾಪಿಸಲು ಫ್ರೆಂಚ್ ಸಂಸತ್ನಲ್ಲಿ ಮತದಾನ ನಡೆಯಿತು. ಈ ಮೂಲಕ ಗರ್ಭಪಾತದ ಹಕ್ಕುಗಳನ್ನು ಸಾಂವಿಧಾನಿಕವಾಗಿ ಅಳವಡಿಸಿಕೊಂಡ ವಿಶ್ವದ ಮೊದಲ ರಾಷ್ಟ್ರವೆಂಬ ಹಿರಿಮೆಗೆ ಫ್ರಾನ್ಸ್ ಪಾತ್ರವಾಯಿತು.
ವಿಶೇಷ ಜಂಟಿ ಅಧಿವೇಶನದಲ್ಲಿ ಗರ್ಭಪಾತವನ್ನು ಮಹಿಳೆಯರ ಸಾಂವಿಧಾನಿಕ ಹಕ್ಕಾಗಿಸುವ ಮಸೂದೆಗೆ ಸಂಸದರು ಒಗ್ಗಟ್ಟಿನಿಂದ ಅನುಮೋದನೆ ನೀಡಿದರು. ಮಸೂದೆಯ ಪರವಾಗಿ 780 ಮತಗಳು ಚಲಾವಣೆಗೊಂಡರೆ, 72 ಮತಗಳು ವಿರುದ್ಧ ಚಲಾವಣೆಯಾದವು. ದೇಶದ ಮಹಿಳಾ ಹಕ್ಕುಗಳ ಕಾರ್ಯಕರ್ತರು ಸಂತೋಷ ವ್ಯಕ್ತಪಡಿಸಿದ್ದು, ಸರ್ಕಾರದ ನಿರ್ಣಯವನ್ನು ಶ್ಲಾಘಿಸಿದ್ದಾರೆ.
ಕೆಲ ವರ್ಷಗಳ ಹಿಂದೆ ಗರ್ಭಪಾತಕ್ಕೆ ಮಹಿಳೆಯರ ಸಾಂವಿಧಾನಿಕ ಹಕ್ಕನ್ನು ಗುರುತಿಸುವ ಕುರಿತ ರೋಯ್ ವಿ ವೇಡ್ ತೀರ್ಪನ್ನು ಅಮೆರಿಕ ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ನಂತರ, ಫ್ರಾನ್ಸ್‌ನಲ್ಲಿ ಈ ಹಕ್ಕನ್ನು ರಕ್ಷಿಸುವ ಅಭಿಯಾನ ಪ್ರಾರಂಭಿಸಲಾಗಿತ್ತು. ಇದೀಗ ಸಂಸತ್ತಿನ ಎರಡೂ ಸದನಗಳಾದ ರಾಷ್ಟ್ರೀಯ ಅಸೆಂಬ್ಲಿ ಮತ್ತು ಸೆನೆಟ್, ಸಂವಿಧಾನದ 34ನೇ ವಿಧಿಯನ್ನು ತಿದ್ದುಪಡಿ ಮಾಡುವ ಮಸೂದೆಯನ್ನು ಒಪ್ಪಿವೆ. ಈ ಮೂಲಕ ಫ್ರಾನ್ಸ್‌ನಲ್ಲಿ ಮಹಿಳೆಯರಿಗೆ ಗರ್ಭಪಾತದ ಹಕ್ಕನ್ನು ಖಾತರಿಪಡಿಸಲಾಗಿದೆ.
ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಹೇಳಿಕೆ:''ಗರ್ಭಪಾತದ ಹಕ್ಕಿಗೆ ಸಂಬಂಧಿಸಿದ ಮಸೂದೆಯ ಪರವಾಗಿ ಸಂಸದರು ಮತ ಚಲಾಯಿಸಿದ ನಂತರ ಅದನ್ನು ಅಂಗೀಕರಿಸಲಾಯಿತು. ಈ ಕಾನೂನು ಮಹಿಳೆಯರಿಗೆ ಗರ್ಭಪಾತದ ಸ್ವಾತಂತ್ರ್ಯವನ್ನು ನೀಡುತ್ತದೆ. ಈ ಹಿಂದೆ ಗರ್ಭಪಾತದ ಸಾಂವಿಧಾನಿಕ ಹಕ್ಕು ನೀಡುವುದಾಗಿ ಭರವಸೆ ನೀಡಲಾಗಿತ್ತು. ಅದನ್ನೀಗ ಈಡೇರಿಸಲಾಗಿದೆ'' ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಹೇಳಿದ್ದಾರೆ.
ಇದನ್ನೂ ಓದಿ:ಇಸ್ರೇಲ್ ಗುರಿಯಾಗಿಸಿ ಲೆಬನಾನ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಕೇರಳದ ವ್ಯಕ್ತಿ ಸಾವು, ಇನ್ನಿಬ್ಬರಿಗೆ ಗಾಯ