ನೈರೋಬಿ: ಕೀನ್ಯಾದಲ್ಲಿ ಕನಿಷ್ಠ ಒಂದು ದಶಲಕ್ಷ ಜನರು ಆಹಾರದ ಕೊರತೆಯಿಂದ ಬಳಲುತ್ತಿದ್ದಾರೆ ಮತ್ತು ಅವರಿಗೆ ತಕ್ಷಣದಲ್ಲಿ ಮಾನವೀಯ ಸಹಾಯ ನೀಡುವುದು ಅಗತ್ಯವಾಗಿದೆ ಎಂದು ದೇಶದ ರಾಷ್ಟ್ರೀಯ ಬರ ನಿರ್ವಹಣಾ ಪ್ರಾಧಿಕಾರ (ಎನ್ಡಿಎಂಎ) ಸೋಮವಾರ ತಿಳಿಸಿದೆ. ಕೀನ್ಯಾದ ರಾಜಧಾನಿ ನೈರೋಬಿಯಲ್ಲಿ ಬಿಡುಗಡೆ ಮಾಡಿದ ವರದಿಯಲ್ಲಿ ದೇಶದ 47 ಕೌಂಟಿಗಳ ಪೈಕಿ 23 ಕೌಂಟಿಗಳಲ್ಲಿನ ಜನ ಹಸಿವಿನಿಂದ ಬಳಲುತ್ತಿದ್ದಾರೆ ಎಂದು ತಿಳಿಸಲಾಗಿದ್ದು, ಈ ಪ್ರದೇಶಗಳನ್ನು ಬರ ಪೀಡಿತ ಎಂದು ಗುರುತಿಸಲಾಗಿದೆ.
ತೀವ್ರ ಅಪೌಷ್ಟಿಕತೆಗೆ ಒಳಗಾಗಿ, ಚಿಕಿತ್ಸೆ ಅಗತ್ಯವಿರುವ 6 ರಿಂದ 59 ತಿಂಗಳ ವಯಸ್ಸಿನ ಮಕ್ಕಳ ಸಂಖ್ಯೆ ಫೆಬ್ರವರಿಯಲ್ಲಿ ಇದ್ದ 8,47,932 ರಿಂದ ಆಗಸ್ಟ್ನಲ್ಲಿ 7,60,488 ಕ್ಕೆ ಇಳಿಕೆಯಾಗಿದೆ ಎಂದು ಬರ ನಿರ್ವಹಣಾ ಪ್ರಾಧಿಕಾರ ವರದಿಯಲ್ಲಿ ಉಲ್ಲೇಖಿಸಿದೆ.
ಏತನ್ಮಧ್ಯೆ, ತೀವ್ರ ಅಪೌಷ್ಟಿಕತೆಗೀಡಾಗಿ ಚಿಕಿತ್ಸೆ ಅಗತ್ಯವಿರುವ ಒಟ್ಟು ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರ ಸಂಖ್ಯೆ 1,12,401 ಕ್ಕೆ ತಲುಪಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ದಿನನಿತ್ಯದ ಇತರ ವೆಚ್ಚಗಳಿಗಾಗಿ ತಾವು ಬೆಳೆದ ಬಹುತೇಕ ಬೆಳೆಗಳನ್ನು ಜನ ಮಾರಾಟ ಮಾಡುವುದರಿಂದ ಅವರು ಆಹಾರ ಅಭದ್ರತೆ ಅನುಭವಿಸುವಂತಾಗಿದೆ ಎಂದು ಎನ್ಡಿಎಂಎ ಬಹಿರಂಗಪಡಿಸಿದೆ.
ಜುಲೈನಲ್ಲಿ ಬಿಡುಗಡೆಯಾದ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ಮತ್ತು ಅಭಿವೃದ್ಧಿಯ ಅಂತರ್ ಸರ್ಕಾರೀಯ ಪ್ರಾಧಿಕಾರ (ಐಜಿಎಡಿ)ದ ವರದಿಯ ಪ್ರಕಾರ, ಆಫ್ರಿಕಾದ ದೇಶಗಳಲ್ಲಿ 66.7 ಮಿಲಿಯನ್ ಜನ ಆಹಾರ ಕೊರತೆ ಎದುರಿಸುತ್ತಿದ್ದಾರೆ. ಇದರಲ್ಲಿ 39.1 ಮಿಲಿಯನ್ ಜನರು ಐಜಿಎಡಿ ಸದಸ್ಯ ರಾಷ್ಟ್ರಗಳಾದ ಜಿಬೌಟಿ, ಕೀನ್ಯಾ, ಸೊಮಾಲಿಯಾ, ದಕ್ಷಿಣ ಸುಡಾನ್, ಸುಡಾನ್ ಮತ್ತು ಉಗಾಂಡಾದಲ್ಲಿದ್ದಾರೆ.