ಢಾಕಾ(ಬಾಂಗ್ಲಾದೇಶ):ಬಾಂಗ್ಲಾದೇಶದಲ್ಲಿ ಮಾಜಿ ಪ್ರಧಾನಿ ಶೇಕ್ ಹಸೀನಾ ಅವರ ಸರ್ಕಾರ ಪತನವಾದ ಬಳಿಕ ಹಿಂದುಗಳ ಮೇಲಿನ ದಾಳಿ ಅವ್ಯಾಹತವಾಗಿ ಮುಂದುವರಿದಿದೆ. ನವರಾತ್ರಿ ಹಿನ್ನೆಲೆಯಲ್ಲಿ ನಡೆಯಬೇಕಿದ್ದ ದುರ್ಗೆಯ ಆಚರಣೆಯ ಮೇಲೂ ದಾಳಿಕೋರರ ಕರಿನೆರಳು ಬಿದ್ದಿದ್ದು, ಈ ಬಾರಿ ಕೇವಲ ಪೂಜೆ ಮಾತ್ರ ನಡೆಸಲು ಅಲ್ಲಿನ ಅಲ್ಪಸಂಖ್ಯಾತ ಹಿಂದು ಸಮುದಾಯ ತೀರ್ಮಾನಿಸಿದೆ.
ದುರ್ಗಾದೇವಿ ಮೂರ್ತಿಯ ಮೆರವಣಿಗೆ, ಸಾರ್ವಜನಿಕ ಪ್ರತಿಷ್ಠಾಪನೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವುದಕ್ಕೆ ವಿರೋಧ ವ್ಯಕ್ತವಾಗಿದೆ. ಇದರ ವಿರುದ್ಧ ಪ್ರತಿಭಟನೆ ದಾಖಲಿಸಲು ಹಿಂದು ಸಮುದಾಯ ಈ ವರ್ಷ ದುರ್ಗಾ ಪೂಜೆಯನ್ನು ಸರಳವಾಗಿ ನಡೆಸಲು ನಿರ್ಧರಿಸಿದೆ.
ನಿಲ್ಲದ ಕೋಮು ದಾಳಿಗಳು:ಶೇಕ್ ಹಸೀನಾ ಸರ್ಕಾರದ ವಿರುದ್ಧ ನಡೆದ ನಾಗರಿಕ ಬಂಡಾಯದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದುಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಯಿತು. ಆಗಸ್ಟ್ 5ರಿಂದ ಆಗಸ್ಟ್ 20ರ ನಡುವೆ ಅಂದರೆ 15 ದಿನಗಳಲ್ಲಿ ಹಿಂದು ಕುಟುಂಬಗಳ ಮೇಲೆ 2010 ದಾಳಿ ಘಟನೆಗಳು ದಾಖಲಾಗಿವೆ. ಇದರಲ್ಲಿ ಹಲವು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಈ ಬಗ್ಗೆ ಮಧ್ಯಂತರ ಸರ್ಕಾರಕ್ಕೆ ದೂರು ನೀಡಲಾಗಿದೆ. ಭದ್ರತೆ ನೀಡುವ ಭರವಸೆ ಮಧ್ಯೆಯೂ ದಾಳಿ, ಬೆದರಿಕೆಗಳು ಮಾತ್ರ ನಿಂತಿಲ್ಲ ಎಂದು ಹಿಂದು ಮುಖಂಡರು ಹೇಳಿದ್ದಾರೆ.
ಬಾಂಗ್ಲಾದೇಶ ಹಿಂದೂ ಬೌದ್ಧ ಕ್ರಿಶ್ಚಿಯನ್ ಯೂನಿಟಿ ಕೌನ್ಸಿಲ್ನ (BHBCOP) ಸದಸ್ಯ ರಂಜನ್ ಕರ್ಮಾಕರ್ ಹೇಳುವಂತೆ, ಈ ವರ್ಷ ಕೇವಲ ದುರ್ಗಾ ಪೂಜೆಯನ್ನು ಮಾತ್ರ ಮಾಡಲಾಗುತ್ತಿದೆ. ಯಾವುದೇ ಮೆರವಣಿಗೆಗಳು, ಆಚರಣೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾರ್ವಜನಿಕ ಪ್ರತಿಷ್ಠಾಪನೆ ಇರುವುದಿಲ್ಲ. ಇದು ಹಿಂದೂ ಸಮುದಾಯದ ಪ್ರತಿಭಟನೆಯ ರೂಪವಾಗಿದೆ. ಸಮುದಾಯದ ಮೇಲೆ ನಿರಂತರ ದಾಳಿಯಿಂದಾಗಿ ಹಿಂದೂಗಳು ಯಾವುದೇ ಹಬ್ಬಗಳನ್ನು ಆಚರಿಸಿಕೊಳ್ಳುವ ಮನಸ್ಥಿತಿಯಲ್ಲಿಲ್ಲ ಎಂದು ಹೇಳಿದರು.
ಸಾರ್ವಜನಿಕ ಆಚರಣೆಗೆ ಮುಂದಾದಲ್ಲಿ ಸಂಘಟಕರಿಗೆ ಜೀವ ಬೆದರಿಕೆ ಹಾಕಲಾಗುತ್ತಿದೆ. ಸುಲಿಗೆ ಮಾಡಲಾಗುತ್ತಿದೆ. ಹೀಗಾಗಿ ಶಾಂತಿಯುತ ಪೂಜೆಯ ಮೂಲಕ ಪ್ರತಿಭಟನೆ ದಾಖಲಿಸಲಾಗುತ್ತಿದೆ. ಅಲ್ಪಸಂಖ್ಯಾತರ ಮೇಲಿನ ಶೋಷಣೆಯ ಪ್ರಕರಣಗಳಿಗೆ ನ್ಯಾಯ ಸಿಗುವಂತಾಗಲು ತನಿಖಾ ಸಮಿತಿಯನ್ನು ರಚಿಸುವುದು ಮತ್ತು ಅಲ್ಪಸಂಖ್ಯಾತರ ಸಂರಕ್ಷಣಾ ಕಾಯ್ದೆ ರಚಿಸುವ ಬೇಡಿಕೆ ಮಂಡಿಸಲಾಗುತ್ತಿದೆ ಎಂದರು.
ಸಾರ್ವಜನಿಕ ಆಚರಣೆಗೆ ₹5 ಲಕ್ಷಕ್ಕೆ ಬೇಡಿಕೆ:ಬಾಂಗ್ಲಾದೇಶ ಹಿಂದೂ ಬೌದ್ಧ ಕ್ರಿಶ್ಚಿಯನ್ ಯೂನಿಟಿ ಕೌನ್ಸಿಲ್ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಬಾಂಗ್ಲಾದೇಶದಲ್ಲಿ ಆಗಸ್ಟ್ 5ರಿಂದ ಆಗಸ್ಟ್ 20ರವರೆಗೆ 2,010 ದಾಳಿಯ ಘಟನೆಗಳು ವರದಿಯಾಗಿವೆ. ದುರ್ಗಾ ಪೂಜೆಯ ಆಯೋಜಕರಿಗೆ ಅನಾಮಧೇಯ ಬೆದರಿಕೆ ಪತ್ರಗಳು ಬಂದಿವೆ. ಇದರಲ್ಲಿ ದುರ್ಗಾದೇವಿಯ ಸಾರ್ವಜನಿಕ ಆಚರಣೆಗೆ 3 ರಿಂದ 5 ಲಕ್ಷ ರೂಪಾಯಿ ನೀಡಬೇಕು ಎಂದು ಬೇಡಿಕೆ ಇಡಲಾಗಿದೆ. ಇಸ್ಲಾಮಿಕ್ ಗುಂಪುಗಳು ಹಿಂದು ಹಬ್ಬಗಳಿಗೆ ಸಾರ್ವತ್ರಿಕ ರಜೆ ನೀಡುವುದನ್ನೂ ವಿರೋಧಿಸುತ್ತಿವೆ ಎಂದು ತಿಳಿಸಿದೆ.