ಚಿಕಾಗೋ(ಅಮೆರಿಕ):ಅಮೆರಿಕದಲ್ಲಿ ಮತ್ತೆ ಮಾರಣಹೋಮ ನಡೆದಿದೆ. ಎರಡು ಮನೆಗಳಿಗೆ ನುಗ್ಗಿದ ಶಸ್ತ್ರಸಜ್ಜಿತ ದುಷ್ಕರ್ಮಿ 8 ಜನರನ್ನು ಕೊಂದು ಹಾಕಿದ್ದಾನೆ. ಮೃತರೆಲ್ಲರೂ ಒಂದೇ ಕುಟುಂಬದವರು ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆರೋಪಿ ಮತ್ತು ಮೃತಪಟ್ಟವರಿಗೆ ಈ ಮೊದಲು ಪರಿಚಯವಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ. ಭಾನುವಾರ ಈ ದುಷ್ಕೃತ್ಯ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇಲಿನಾಯ್ಸ್ ರಾಜ್ಯದ ಚಿಕಾಗೋದಿಂದ 50 ಕಿ.ಮೀ ದೂರದಲ್ಲಿರುವ ಜೋಲಿಯೆಟ್‌ನಲ್ಲಿ ಘಟನೆ ನಡೆದಿದೆ. 23 ವರ್ಷದ ಶಂಕಿತ ಆರೋಪಿ ಯುವಕನ ಫೋಟೋವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಶಂಕಿತ ರೋಮಿಯೋ ನಾನ್ಸ್‌ಗಾಗಿ ಶೋಧ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಅಪರಾಧ ನಡೆದ ಸ್ಥಳದ ಸಮೀಪ ವಾಸಿಸುತ್ತಿದ್ದನು. 2023ರ ಶೂಟಿಂಗ್ ಪ್ರಕರಣದಲ್ಲಿ ಈತ ಜಾಮೀನಿನ ಮೇಲೆ ಹೊರಬಂದಿದ್ದನು ಎಂದು ನ್ಯಾಯಾಲಯದ ದಾಖಲೆಗಳು ತಿಳಿಸುತ್ತವೆ. ನಾನ್ಸ್ ಅತ್ಯಂತ ಅಪಾಯಕಾರಿ ವ್ಯಕ್ತಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
"ಕ್ಯು730412 ಸಂಖ್ಯೆಯ ಕೆಂಪು ಟೊಯೊಟಾ ಕಾರನ್ನು ನ್ಯಾನ್ಸ್ ಓಡಿಸುತ್ತಿದ್ದನು. ನಾನು 25 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿದ್ದೇನೆ. ಆದರೆ ಇಂತಹ ಅತ್ಯಂತ ಭಯಾನಕ ಘಟನೆಯನ್ನು ಯಾವತ್ತೂ ನೋಡಿಲ್ಲ" ಎಂದು ಜಿಲೆಟ್ ಪೊಲೀಸ್ ಮುಖ್ಯಸ್ಥ ವಿಲಿಯಂ ಇವಾನ್ಸ್ ಹೇಳಿದರು.