ಸಿಯೋಲ್: ದಕ್ಷಿಣ ಕೊರಿಯಾ ಗ್ರಾಹಕರನ್ನು ಗುರಿಯಾಗಿಸಿಕೊಂಡಿರುವ ಚೀನಾದ ಶಾಪಿಂಗ್ ಆ್ಯಪ್ ಆಗಿರುವ ಅಲಿಎಕ್ಸ್ಪ್ರೆಸ್ ಮತ್ತು ಟೆಮುನಲ್ಲಿ ಲಭ್ಯವಿರುವ 38 ಮಕ್ಕಳ ಉತ್ಪನ್ನಗಳಲ್ಲಿ ಕ್ಯಾನ್ಸರ್ಗೆ ಕಾರಣವಾಗುವ ಅಧಿಕ ಮಟ್ಟದ ರಾಸಾಯನಿಕಗಳು ಪತ್ತೆಯಾಗಿವೆ ಎಂದು ಗ್ರಾಹಕ ಏಜೆನ್ಸಿಯೊಂದು ವರದಿ ಮಾಡಿದೆ.
ಮಕ್ಕಳಿಗೆ ಆಟಿಕೆ ಮತ್ತು ಇನ್ನಿತರೆ ವಸ್ತುಗಳನ್ನು ಮಾರಾಟ ಮಾಡುವ ಈ ಎರಡು ಚೀನಾದ ಇ ಕಾಮರ್ಸ್ ಆ್ಯಪ್ಗಳಲ್ಲಿ 252 ಉತ್ಪನ್ನಗಳನ್ನು ಪರೀಕ್ಷಿಸಿದಾಗ ಈ ಅಂಶ ಬಯಲಾಗಿದೆ ಎಂದು ಕೊರಿಯಾ ಗ್ರಾಹಕ ಸೇವೆ (ಕೆಸಿಎಸ್) ತಿಳಿಸಿದೆ. ಈ ಮೂಲಕ ಇದೀಗ ಚೀನಾದ ಆನ್ಲೈನ್ ವಸ್ತುಗಳ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತವಾಗಿದೆ.
27 ಉತ್ಪನ್ನಗಳಲ್ಲಿ ಥಾಲೇಟ್ ಪ್ಲಾಸ್ಟಿಸೈಜರ್ ಅಧಿಕ ಮಟ್ಟದಲ್ಲಿ ಕಂಡು ಬಂದಿದೆ. ದಕ್ಷಿಣ ಕೊರಿಯಾದ ಸುರಕ್ಷತಾ ಗುಣಮಟ್ಟದ ಶೇ 82ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಇದು ಕಂಡು ಬಂದಿದೆ ಎಂದು ಯೊನ್ಹಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮಕ್ಕಳ ಉತ್ಪನ್ನಗಳಿಗೆ ಥಾಲೇಟ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ರಾಸಾಯನಿಕಕ್ಕೆ ಒಡ್ಡಿಕೊಳ್ಳುವುದರಿಂದ ಕ್ಯಾನ್ಸರ್ ಮತ್ತು ಇತರೆ ಸಮಸ್ಯೆ ಉಂಟಾಗುತ್ತದೆ. ಥಾಲೇಟ್ ಪ್ಲಾಸ್ಟಿಸೈಜರ್ ಬಂಜೆತನಕ್ಕೂ ಕಾರಣವಾಗಬಹುದು ಎಂದು ಐಆರ್ಸಿಎ ತಿಳಿಸಿದೆ. ಮಕ್ಕಳ ಟೀಥರ್, ಬ್ಯಾಗ್ಗಳಲ್ಲಿ ಈ ಹಾನಿಕಾರಕ ಅಂಶ ಪತ್ತೆಯಾಗಿದೆ. ಅಲ್ಲದೇ, ಮಕ್ಕಳ ವಾಕರ್, ಸ್ವಿಮ್ಮಿಂಗ್ಗೆ ಸಂಬಂಧಿಸಿದ ವಸ್ತುಗಳು ಕೂಡ ಸುರಕ್ಷತೆ ಸೇರಿದಂತೆ ಹಲವು ಸಮಸ್ಯೆ ಹೊಂದಿವೆ ಎಂದು ತಿಳಿಸಲಾಗಿದೆ.