ವಾಷಿಂಗ್ಟನ್(ಅಮೆರಿಕ):ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿರುದ್ಧ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಸ್ಪರ್ಧೆಯಿಂದ ಹಿಂದೆ ಸರಿಯಬೇಕು ಎಂಬ ಬೇಡಿಕೆಗಳು ದಿನ ದಿನಕ್ಕೆ ಬಲಗೊಳ್ಳುತ್ತಿವೆ. ಅವರದೇ ಪಕ್ಷದ ಪ್ರಮುಖ ಪ್ರತಿನಿಧಿಗಳು, ಬೈಡನ್ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಟ್ರಂಪ್ ಜೊತೆಗಿನ ಚರ್ಚೆಯಲ್ಲಿ ಬೈಡನ್ ಎಡವಿದ ನಂತರ, ಅವರ ಉಮೇದುವಾರಿಕೆ ಬಗ್ಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಬಹುಮತವನ್ನು ಮರಳಿ ಪಡೆಯಲು ಬೈಡನ್ ಸ್ಪರ್ಧೆಯಲ್ಲಿ ಇರಬಾರದು ಎಂದು ಹಲವು ಪ್ರಮುಖ ನಾಯಕರು ಅಭಿಪ್ರಾಯಪಟ್ಟಿದ್ದಾರೆ ಎಂದು ಮೂಲಗಳು ಬಹಿರಂಗಪಡಿಸಿವೆ.
ಇವರಿಂದಾಗಿ ಅಧ್ಯಕ್ಷೀಯ ಚುನಾವಣೆಯಲ್ಲಿ ಪಕ್ಷದ ಗೆಲುವಿನ ಸಾಧ್ಯತೆ ಕ್ಷೀಣಿಸುವ ಅಪಾಯವಿದೆ ಎಂಬ ಆತಂಕ ವ್ಯಕ್ತವಾಗಿದೆ. ಟ್ರಂಪ್ ಅವರಿಂದ ದೇಶವನ್ನು ರಕ್ಷಿಸಲು ಪ್ರಬಲ ನಾಯಕನ ಅಗತ್ಯವಿದೆ ಎಂದೂ ಕೆಲವರು ಸಲಹೆ ನೀಡಿದ್ದಾರೆ.
ಬೈಡನ್ ಮುಂದಿನ ನಡೆಯೇನು:ಎರಡು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಬೈಡನ್ ಹಿಂದೆ ಸರಿದರೆ ಕಮಲಾ ಹ್ಯಾರಿಸ್ ಅವರನ್ನು ಕಣಕ್ಕಿಳಿಸಬೇಕು ಎಂದು ಮುಖಂಡರು ಅಭಿಪ್ರಾಯಪಟ್ಟಿದ್ದಾರೆ. ಕಮಲಾ ಕಣದಲ್ಲಿದ್ದರೆ ಟ್ರಂಪ್ ಅವರನ್ನು ಸೋಲಿಸುವ ಸಾಧ್ಯತೆ ಹೆಚ್ಚು ಎಂದು ನಂಬಲಾಗಿದೆ.