ಢಾಕಾ (ಬಾಂಗ್ಲಾದೇಶ):ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ ಬಂಡಾಯಕ್ಕೆ ದೊಡ್ಡ ದೊಡ್ಡ ತಲೆಗಳು ಉರುಳುತ್ತಿವೆ. ಪ್ರಧಾನಿ ಶೇಕ್ ಹಸೀನಾ ಅವರು ರಾಜೀನಾಮೆ ನೀಡಿ ದೇಶ ತೊರೆದ ಬಳಿಕವೂ ಹಿಂಸಾಚಾರ ನಿಲ್ಲುತ್ತಿಲ್ಲ. ಜೊತೆಗೆ ಹಲವು ಮಹತ್ತರ ಹುದ್ದೆಗಳಿಗೆ ಅಧಿಕಾರಿಗಳು ರಾಜೀನಾಮೆ ನೀಡುತ್ತಿದ್ದಾರೆ.
ಶೇಕ್ ಹಸೀನಾ ಅವರು ರಾಜೀನಾಮೆ ಮತ್ತು ನೊಬೆಲ್ ಪುರಸ್ಕೃತ ಮುಹಮ್ಮದ್ ಯೂನುಸ್ ಅವರ ಮಧ್ಯಂತರ ಸರ್ಕಾರ ರಚನೆಯ ಬಳಿಕವೂ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರಿದಿದೆ. ಶನಿವಾರ ನಡೆದ ಹೋರಾಟದಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯ ರಾಜೀನಾಮೆಗೆ ಒತ್ತಾಯಿಸಲಾಯಿತು. ಮಧ್ಯಾಹ್ನ 1 ಗಂಟೆಯವರೆಗೆ ಸಿಜೆ ಅವರಿಗೆ ಗಡುವು ನೀಡಲಾಗಿತ್ತು. ಇದಕ್ಕೆ ಮಣಿದ ಒಬೈದುಲ್ ಹಸನ್ ಅವರು ತಮ್ಮ ಹುದ್ದೆಯಿಂದ ಹಿಂದೆ ಸರಿದಿದ್ದಾರೆ.
ಹಸೀನಾ ಭಂಟನ ತಲೆದಂಡ:ಒಬೈದುಲ್ ಹಸನ್ ಅವರು ಮಾಜಿ ಪ್ರಧಾನಿ ಶೇಕ್ ಹಸೀನಾ ಅವರಿಗೆ ನಿಷ್ಠಾವಂತರಾಗಿದ್ದರು. ಈ ಹಿನ್ನೆಲೆಯಲ್ಲಿ ಢಾಕಾದಲ್ಲಿನ ನ್ಯಾಯಾಲಯದ ಹೊರಗೆ ಜಮಾಯಿಸಿದ್ದ ವಿದ್ಯಾರ್ಥಿ ಹೋರಾಟಗಾರರು ಪ್ರತಿಭಟನೆ ನಡೆಸಿದರು. ಇದರಿಂದ ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಇದರ ಬೆನ್ನಲ್ಲೇ, ಹಸನ್ ಅವರು ರಾಜೀನಾಮೆ ಘೋಷಿಸಿದ್ದಾರೆ.
ಪ್ರತಿಭಟನಾನಿರತ ವಿದ್ಯಾರ್ಥಿಗಳು ಹೈಕೋರ್ಟ್ ಆವರಣಕ್ಕೆ ಮುತ್ತಿಗೆ ಹಾಕುವುದಾಗಿ ಬೆದರಿಕೆ ಹಾಕಿದರು. ಸೇನಾ ಸಿಬ್ಬಂದಿಯನ್ನು ಸುಪ್ರೀಂ ಕೋರ್ಟ್ ಆವರಣದಲ್ಲಿ ನಿಯೋಜಿಸಲಾಗಿತ್ತು. ಸರ್ಕಾರಿ ಆಸ್ತಿಗಳಿಗೆ ಹಾನಿ ಮಾಡದಂತೆ, ಶಾಂತಿ ಕಾಪಾಡುವಂತೆ ಪ್ರತಿಭಟನಾಕಾರರಿಗೆ ಸೂಚಿಸಲಾಯಿತು. ಆದಾಗ್ಯೂ, ಪ್ರತಿಭಟನೆ ತೀವ್ರವಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರ ಸುರಕ್ಷತೆಯನ್ನು ಪರಿಗಣಿಸಿ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ಮುಖ್ಯ ನ್ಯಾಯಮೂರ್ತಿ ಹಾಸನ್ ಅವರು ತಿಳಿಸಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.