ಟೆಲ್ ಅವೀವ್ (ಇಸ್ರೇಲ್) : ನಜರೆತ್ ನಗರದಲ್ಲಿರುವ ಅಲ್ ಜಜೀರಾ ಮಾಧ್ಯಮ ಸಂಸ್ಥೆಯ ಕಚೇರಿಗಳ ಮೇಲೆ ಇಸ್ರೇಲಿ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ಸಮಯದಲ್ಲಿ ಅರಬ್ ಭಾಷಾ ಟಿವಿ ಚಾನೆಲ್ ಆಗಿರುವ ಅಲ್ ಜಜೀರಾ ಕಚೇರಿಯಲ್ಲಿನ ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇಸ್ರೇಲ್ ಸರ್ಕಾರ ಇತ್ತೀಚೆಗೆ ಅಲ್ ಜಜೀರಾ ಮಾಧ್ಯಮ ಸಂಸ್ಥೆಯು ತನ್ನ ದೇಶದಲ್ಲಿ ಕಾರ್ಯಾಚರಣೆ ನಡೆಸದಂತೆ ನಿಷೇಧ ಹೇರಿತ್ತು. ಅದಾಗಿ ಕೆಲವೇ ದಿನಗಳ ನಂತರ ಅದರ ಕಚೇರಿಗಳ ಮೇಲೆ ಪೊಲೀಸ್ ದಾಳಿ ನಡೆದಿದೆ. ಸದ್ಯ ಇಸ್ರೇಲ್ನಲ್ಲಿ ಅಲ್ ಜಜೀರಾ ಚಾನೆಲ್ ಪ್ರಸಾರ ಸ್ಥಗಿತಗೊಳಿಸಲಾಗಿದೆ.
ಅಲ್ ಜಜೀರಾ ಚಾನೆಲ್ ಅನ್ನು ನಿರ್ಬಂಧಿಸುವ ಆದೇಶಕ್ಕೆ ಇಸ್ರೇಲ್ನ ಸಂವಹನ ಸಚಿವರು ಭಾನುವಾರ ಸಹಿ ಹಾಕಿದ್ದಾರೆ. ಅದೇ ದಿನದಂದು ಪೂರ್ವ ಜೆರುಸಲೇಂನ ಅಂಬಾಸಿಡರ್ ಹೋಟೆಲ್ನಲ್ಲಿರುವ ಅಲ್ ಜಜೀರಾ ಕಚೇರಿಯ ಮೇಲೆ ದಾಳಿ ನಡೆಸಲಾಯಿತು. ಗಾಜಾ ಯುದ್ಧದ ಸುದ್ದಿಗಳ ಪ್ರಸಾರದಲ್ಲೀ ಚಾನೆಲ್ ಪಕ್ಷಪಾತ ಧೋರಣೆ ಅನುಸರಿಸುತ್ತಿದೆ ಎಂದು ಇಸ್ರೇಲ್ ಆರೋಪಿಸಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಒಂದು ತಿಂಗಳ ಹಿಂದೆಯೇ ಇಸ್ರೇಲ್ನಲ್ಲಿ ಅಲ್ ಜಜೀರಾದ ಕಚೇರಿಗಳನ್ನು ಮುಚ್ಚಿಸುವ ಉದ್ದೇಶದ ಬಗ್ಗೆ ಮಾತನಾಡಿದ್ದರು.