ವಾಷಿಂಗ್ಟನ್, ಡಿಸಿ: ಉಕ್ರೇನ್ ಮೇಲಿನ ಮಾಸ್ಕೋದ ಆಕ್ರಮಣಕ್ಕೆ ಎರಡು ವರ್ಷಗಳು ಪೂರ್ಣಗೊಂಡಿವೆ. ಮೂರನೇ ವರ್ಷಕ್ಕೆ ಕಾಲಿಡುತ್ತಿರುವ ಹೊತ್ತಲ್ಲಿ ರಷ್ಯಾದ ಮೇಲೆ ಆರ್ಥಿಕ ಒತ್ತಡ ಹೇರುವ ಕ್ರಮವಾಗಿ ಹಾಗೂ ಯುದ್ಧ ಪರಿಕರಿಗಳಿಗೆ ಸಂಬಂಧಿಸಿದಂತೆ 500ಕ್ಕೂ ಹೆಚ್ಚು ಘಟಕಗಳನ್ನು ಗುರಿಯಾಗಿಸಿಕೊಂಡು ಯುನೈಟೆಡ್ ಸ್ಟೇಟ್ಸ್ ಶುಕ್ರವಾರ ರಷ್ಯಾದ ವಿರುದ್ಧ ವ್ಯಾಪಕ ನಿರ್ಬಂಧಗಳನ್ನು ವಿಧಿಸಿದೆ.
ಶ್ವೇತಭವನದ ಅಧಿಕೃತ ಹೇಳಿಕೆ ಬಿಡುಗಡೆಯ ಪ್ರಕಾರ, ಅಮೆರಿಕದ ಅಧ್ಯಕ್ಷ ಜೋ ಬೈಡನ್, "ಉಕ್ರೇನ್ನಲ್ಲಿ ನಡೆಯುತ್ತಿರುವ ಆಕ್ರಮಣಕಾರಿ ಯುದ್ಧಕ್ಕಾಗಿ ಹಾಗೂ ಧೈರ್ಯಶಾಲಿ, ಭ್ರಷ್ಟಾಚಾರ ವಿರೋಧಿ ಕಾರ್ಯಕರ್ತ ಮತ್ತು ರಷ್ಯಾ ವಿರೋಧ ಪಕ್ಷದ ನಾಯಕರಾಗಿದ್ದ ಅಲೆಕ್ಸಿ ನವಲ್ನಿ ಅವರ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ನಾನು ರಷ್ಯಾದ ವಿರುದ್ಧ 500ಕ್ಕೂ ಹೆಚ್ಚು ಹೊಸ ನಿರ್ಬಂಧನಗಳನ್ನು ಘೋಷಿಸುತ್ತಿದ್ದೇನೆ" ಎಂದು ಹೇಳಿದ್ದಾರೆ.ಈ ನಿರ್ಬಂಧಗಳು ನವಲ್ನಿ ಅವರ ಸೆರೆವಾಸಕ್ಕೆ ಸಂಬಂಧಿಸಿದ ವ್ಯಕ್ತಿಗಳು ಮತ್ತು ಮೀರ್ ಪಾವತಿ ವ್ಯವಸ್ಥೆ, ರಷ್ಯಾದ ಹಣಕಾಸು ವಲಯ, ಮಿಲಿಟರಿ ಕೈಗಾರಿಕಾ ನೆಲೆ, ಸಂಗ್ರಹಣೆ ಜಾಲಗಳು, ಭವಿಷ್ಯದ ಶಕ್ತಿ ಉತ್ಪಾದನೆ ಮತ್ತು ಅನೇಕ ವಲಯಗಳಲ್ಲಿ ನಿರ್ಬಂಧಗಳನ್ನು ಉಲ್ಲಂಘಿಸುವವರನ್ನು ಗುರಿಯಾಗಿಸಿದೆ. ವಿದೇಶದಲ್ಲಿ ತನ್ನ ಆಕ್ರಮಣಶೀಲತೆ ಮತ್ತು ಸ್ವದೇಶದಲ್ಲಿ ದಮನಕ್ಕೆ ಪುಟಿನ್ ಇನ್ನೂ ಕಠಿಣವಾದ ಬೆಲೆ ತೆರುವಂತೆ ಈ ನಿರ್ಬಂಧಗಳು ಮಾಡಲಿವೆ" ಎಂದು ಅವರು ಒತ್ತಿ ಹೇಳಿದ್ದಾರೆ.
ಉಕ್ರೇನ್ನ ಕೆಚ್ಚೆದೆಯ ಜನರು ತಮ್ಮ ಸ್ವಾತಂತ್ರ್ಯ ಹಾಗೂ ಭವಿಷ್ಯಕ್ಕಾಗಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳದೇ ಹೋರಾಡುತ್ತಿದ್ದಾರೆ . NATO ಹಿಂದೆಂದಿಗಿಂತಲೂ ಪ್ರಬಲವಾಗಿದ್ದು, ಒಟ್ಟಾಗಿದೆ. ಅಮೆರಿಕ ನೇತೃತ್ವದಲ್ಲಿ ಉಕ್ರೇನ್ಗೆ ಬೆಂಬಲ ನೀಡುವ ಅಭೂತಪೂರ್ವ 50 ರಾಷ್ಟ್ರಗಳ ಜಾಗತಿಕ ಒಕ್ಕೂಟವು ಉಕ್ರೇನ್ಗೆ ನೆರವು ನೀಡುವುದನ್ನು ಮುಂದುವರೆಸಲಿದೆ. ತನ್ನ ಆಕ್ರಮಣಕ್ಕೆ ರಷ್ಯಾವನ್ನು ಬೆಲೆ ತೆರುವಂತೆ ಮಾಡಲು ಅಮೆರಿಕ ಬದ್ಧವಾಗಿದೆ" ಎಂದು ಇದೇ ವೇಳೆ ಬೈಡನ್ ದೃಢಪಡಿಸಿದ್ದಾರೆ.