ಕಾಬೂಲ್: ಯುದ್ಧದಿಂದ ಜರ್ಜರಿತವಾಗಿರುವ ಅಫ್ಘಾನಿಸ್ತಾನದಲ್ಲಿ 2024ರಲ್ಲಿ ಅಂದಾಜು 15.8 ದಶಲಕ್ಷ (1.6 ಕೋಟಿ) ಜನ ಆಹಾರವಿಲ್ಲದೆ ಹಸಿವಿನಿಂದ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ವಿಶ್ವಸಂಸ್ಥೆ (ಯುಎನ್) ಗುರುವಾರ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ. 2023 ರ ಯುಎನ್ ಅಫ್ಘಾನಿಸ್ತಾನ ವಾರ್ಷಿಕ ವರದಿಯ ಪ್ರಕಾರ, ಅಫ್ಘಾನಿಸ್ತಾನದ ಜನಸಂಖ್ಯೆಯ ಬಹುಪಾಲು ಜನರಿಗೆ ಆರೋಗ್ಯ, ಆಹಾರ, ಜೀವನೋಪಾಯ ಮತ್ತು ವಸತಿಯಂತಹ ಮೂಲಭೂತ ಅಗತ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
"2023ರ ಆರಂಭದಿಂದಲೇ ಅಫ್ಘಾನಿಸ್ತಾನದಾದ್ಯಂತದ ಕುಟುಂಬಗಳು ತಮ್ಮ ಮಕ್ಕಳಿಗೆ ಎರಡು ಹೊತ್ತಿನ ಊಟ ಹಾಕಲು ಹೆಣಗಾಡುತ್ತಿವೆ. ಪ್ರತಿ 10 ರಲ್ಲಿ 9 ಜನರಿಗೆ ಅಗತ್ಯವಿರುವಷ್ಟು ಆಹಾರ ಸಿಗುತ್ತಿಲ್ಲ. ಆಹಾರಕ್ಕಾಗಿಯೇ ಕುಟುಂಬದ ಆದಾಯದ ಶೇ 89ರಷ್ಟನ್ನು ಖರ್ಚು ಮಾಡಬೇಕಾಗುತ್ತಿದೆ" ಎಂದು ಅದು ಹೇಳಿದೆ.
2023 ರ ಜಾಗತಿಕ ಹಸಿವು ಸೂಚ್ಯಂಕದ ಪ್ರಕಾರ, ಹಸಿವಿನಿಂದ ಬಳಲುತ್ತಿರುವ 125 ರಾಷ್ಟ್ರಗಳ ಪಟ್ಟಿಯಲ್ಲಿ ಅಫ್ಘಾನಿಸ್ತಾನವು 114 ನೇ ಸ್ಥಾನದಲ್ಲಿದೆ. ಸುಮಾರು 40 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಯುದ್ಧಪೀಡಿತ ಅಫ್ಘಾನಿಸ್ತಾನವು ಆಗಸ್ಟ್ 2021 ರಲ್ಲಿ ಯುಎಸ್ ನೇತೃತ್ವದ ಪಡೆಗಳನ್ನು ಹಿಂತೆಗೆದುಕೊಂಡಾಗಿನಿಂದ ಬಡತನ ಮತ್ತು ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿದೆ.